ದಾಂಡೇಲಿ: ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಹಾಗೂ ಲೈಕ್ಸ್‌ಗಾಗಿ ಅಪಾಯಕಾರಿ ಸಾಹಸಗಳನ್ನು ಪ್ರದರ್ಶಿಸುವವರ ವಿರುದ್ಧ ದಾಂಡೇಲಿ ಗ್ರಾಮೀಣ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಜೋಯಿಡಾ ತಾಲೂಕಿನ ಪ್ರಧಾನಿ ಗ್ರಾಮದ ಹೋಂಸ್ಟೇ ಸಮೀಪ ತೂಫಾನ್ ಕ್ರೂಸರ್ ವಾಹನವನ್ನು ಅಪಾಯಕಾರಿಯಾಗಿ ಚಲಾಯಿಸಿದ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ತೂಫಾನ್ ಕ್ರೂಸರ್ ವಾಹನದ ಚಾಲಕನು ವಾಹನದ ಬಾನೆಟ್ ಹಾಗೂ ಮೇಲ್ಛಾವಣಿಯ ಮೇಲೆ ಸುಮಾರು 10ರಿಂದ 12 ಜನರನ್ನು ಕುಳ್ಳಿರಿಸಿಕೊಂಡು, ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟಾಗುವ ರೀತಿಯಲ್ಲಿ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ್ದಾನೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಭಾರೀ ಮಳೆ: ಮೂರು ತಾಲೂಕುಗಳ ಅಂಗನವಾಡಿ, ಶಾಲೆಗಳಿಗೆ ರಜೆ
ಈ ಅಪಾಯಕಾರಿ ಕೃತ್ಯದ ವಿಡಿಯೊವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೊವನ್ನು ಗಮನಿಸಿದ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಸಿ ಸುಭಾಷ ಸಾಲಮಂಟಪ ಅವರು ನೀಡಿದ ದೂರಿನ ಆಧಾರದ ಮೇಲೆ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಮನವಿ: ರೀಲ್ಸ್, ಲೈಕ್ಸ್ ಹಾಗೂ ಸಾಮಾಜಿಕ ಜಾಲತಾಣಗಳ ಜನಪ್ರಿಯತೆಗಾಗಿ ವಾಹನಗಳಲ್ಲಿ ಅಪಾಯಕಾರಿ ಸಾಹಸಗಳನ್ನು ಪ್ರದರ್ಶಿಸಬೇಡಿ. ಇಂತಹ ನಿರ್ಲಕ್ಷ್ಯದ ಕೃತ್ಯಗಳು ನಿಮ್ಮ ಜೀವಕ್ಕೆ ಮಾತ್ರವಲ್ಲ, ಇತರರ ಜೀವಕ್ಕೂ ಅಪಾಯವನ್ನುಂಟು ಮಾಡಬಹುದು. ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಹಾಗೂ ಜವಾಬ್ದಾರಿಯುತವಾಗಿ ವಾಹನ ಚಲಾಯಿಸಿ. ಕ್ಷಣಿಕ ಪ್ರಸಿದ್ಧಿಗಿಂತ ಜೀವ ಅಮೂಲ್ಯ ಎಂಬುದನ್ನು ಮರೆಯಬೇಡಿ.





