ದಾವಣಗೆರೆಯಲ್ಲಿ ಪರಿಶಿಷ್ಟ ಜಾತಿಯ ಉಪಜಾತಿಗಳಾದ ಛಲವಾದಿ ಮತ್ತು ಮಾದಿಗ ಸಮಾಜದ ಮುಖಂಡರುಗಳು ಒಟ್ಟಾಗಿ ಸೇರಿ ಒಳಮೀಸಲಾತಿಗಾಗಿ ದೊಡ್ಡ ಹೋರಾಟವನ್ನು ರೂಪಿಸಬೇಕು ಮತ್ತು ದಾವಣಗೆರೆಯಿಂದ ಇಡೀ ರಾಜ್ಯಕ್ಕೆ ಎಲ್ಲ ಉಪಜಾತಿಗಳನ್ನು ಒಂದುಗೂಡಿಸಿ ಒಳಮೀಸಲಾತಿಗೆ ಹೋರಾಟಕ್ಕೆ ಐಕ್ಯತೆಯ ಸಂದೇಶ ನೀಡಬೇಕು ಎಂದು ಸಮಾಜದ ಮುಖಂಡರುಗಳು ಕರೆ ನೀಡಿದರು.
ದಾವಣಗೆರೆ ನಗರದ ಛಲವಾದಿ ಭವನದಲ್ಲಿ ಪೂರ್ವಭಾವಿ ಸಭೆ ನಡೆಸಿದ ಛಲವಾದಿ, ಮಾದಿಗ ಸಮಾಜದ ಮುಖಂಡರು, ಒಳಮೀಸಲಾತಿ ಹೋರಾಟದ ರೂಪುರೇಷೆಗಳನ್ನು ಚರ್ಚಿಸಿ ರಾಜ್ಯದಲ್ಲಿ ಒಳಮೀಸಲಾತಿ ಜಾರಿಗಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಎಲ್ಲಾ ಉಪಜಾತಿಗಳು ಒಟ್ಟುಗೂಡಿ ದಾವಣಗೆರೆಯಲ್ಲಿ ಅಕ್ಟೋಬರ್ 23ರಂದು ಬೃಹತ್ ಹೋರಾಟಕ್ಕೆ ನಿರ್ಧರಿಸಿ ಕರೆ ನೀಡಿದರು.
ಸಭೆಯಲ್ಲಿ ಮುಖಂಡ ಬಿ.ಎಂ. ಹನುಮಂತಪ್ಪ ಮಾತನಾಡಿ, “ಜನಸಂಖ್ಯೆ ಆಧರಿಸಿ ಮೀಸಲಾತಿ ನೀಡಬೇಕು. ನಮ್ಮ ನಮ್ಮಲ್ಲಿಯೇ ಗೊಂದಲ ಸೃಷ್ಟಿಸುವವರು ಇದ್ದಾರೆ. ಮೀಸಲಾತಿ ಪಡೆಯಲು ಅಸ್ಪೃಶ್ಯ ಸಮಾಜಗಳು ಒಂದು ವೇದಿಕೆಯಲ್ಲಿ ಬರಬೇಕು. ಹೊಲೆಯ, ಮಾದಿಗರು ಒಟ್ಟಾಗಿ ಸೇರಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗೆ ಸ್ಪಶ್ಯರನ್ನು ಸೇರಿಸಿ ಅನ್ಯಾಯವಾಗಿದೆ. ಅಸ್ಪೃಶ್ಯ ಮೀಸಲಾತಿ ಬೇರೆಯಾಗಬೇಕು. ನಮ್ಮ ಜೊತೆ ಮೀಸಲಾತಿ ಕೊಟ್ಟಿರುವುದು ಅಕ್ರಮ. ದೊಡ್ಡ ಅನ್ಯಾಯ. ರಾಜಕಾರಣಿಗಳು ಯಾವುದೇ ಪಕ್ಷದಲ್ಲಿ ಇದ್ದರೂ ಅನ್ಯಾಯವಾದಾಗ ಹೋರಾಟ ನಡೆಸಬೇಕು. ಒಳಮೀಸಲಾತಿಗೆ ಒತ್ತಡ ಅನಿವಾರ್ಯವಾಗಿದೆ ಎಂದು ತಿಳಿಸಿದರು.

ನಿವೃತ್ತ ಡಿವೈಎಸ್‌ಪಿ ಎನ್. ರುದ್ರಮುನಿ ಮಾತನಾಡಿ, “ಪರಿಶಿಷ್ಟ ಜಾತಿಗಳಲ್ಲಿ ಅಣ್ಣ-ತಮ್ಮಂದಿರುವ ಉಪಜಾತಿಗಳಾದ ನಮ್ಮನ್ನು ಒಡೆದಾಳುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಇದಕ್ಕೆ ನಾವು ಅವಕಾಶ ನೀಡಬಾರದು. ಈಗ ಒಳ ಮೀಸಲಾತಿ ವಿರುದ್ಧ ಒಟ್ಟಾಗಿ ಧ್ವನಿ ಎತ್ತಬೇಕು” ಎಂದು ಕರೆ ನೀಡಿದರು.
ಆಲೂರು ನಿಂಗರಾಜ ಮಾತನಾಡಿ, ಎಲ್ಲರೂ ಪೂರ್ವಭಾವಿ ಅಂತ ನಿರ್ಧರಿಸಿರುವ ಒಳಮೀಸಲಾತಿಯ ಹೋರಾಟಕ್ಕೆ ಅಕ್ಟೋಬರ್ 23ರಂದು ಕನಿಷ್ಠ 10 ಸಾವಿರ ಜನ ಸೇರಿಸಿ ಹೋರಾಟ ಮಾಡಬೇಕು. ಈ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು ಎಂದರು.
ಮುಖಂಡ ಜಯಪ್ರಕಾಶ್ ಮಾತನಾಡಿ, ಒಳಮೀಸಲಾತಿ ನೀಡುವರೆಗೂ ಯಾವುದೇ ನೇಮಕಾತಿ ನಡೆಯದಂತೆ ಸರಕಾರದ ಮೇಲೆ ಒತ್ತಡ ತರಬೇಕು ಎಂದು ಆಗ್ರಹ ವ್ಯಕ್ತಪಡಿಸಿದರು.
ಮುಖಂಡ ಹೆಚ್.ಕೆ.ಬಸವರಾಜ ಮಾತನಾಡಿ, ಒಳ ಮೀಸಲಾತಿಗೆ ಬೆಂಬಲ ನೀಡದ ಸ್ವಾರ್ಥ ರಾಜಕಾರಣಿಗಳನ್ನು ದೂರವಿಡಬೇಕು. ಸರ್ಕಾರ ನ್ಯಾಯಾಲಯದ ತೀರ್ಪು ಜಾರಿ ಮಾಡಬೇಕು. ಒಳಮೀಸಲಾತಿ ನಮ್ಮ ಹಕ್ಕು, ಅದನ್ನು ಪಡೆಯಬೇಕು ಎಂದು ತಿಳಿಸಿದರು.

ಹಿರಿಯ ದಲಿತ ಮುಖಂಡ ಹೆಚ್ ಮಲ್ಲೇಶ್ ಮಾತನಾಡಿ, “ದಾವಣಗೆರೆಯಲ್ಲಿ ನಡೆದ ಈ ಸಭೆ ಐತಿಹಾಸಿಕವಾದದ್ದು. ಸೋದರ ಸಮಾಜಗಳು ಒಟ್ಟಾಗಿ ಒಂದೇ ವೇದಿಕೆ ಮೇಲೆ ಬಂದಿದೆ. ಕಾಂಗ್ರೆಸ್ ಸರಕಾರ ತನ್ನ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ಘೋಷಿಸಿದೆ. ಜೊತೆಗೆ ಸುಪ್ರೀಂ ಕೋರ್ಟಿನ ಏಳು ಸದಸ್ಯರ ನ್ಯಾಯಪೀಠ ಅಭಿನಂದಗೆ ಅರ್ಹ. ಸಾಮಾಜಿಕ ನ್ಯಾಯದ ತೀರ್ಪು ನೀಡಿದರೂ ಸಹ ಮುಖ್ಯಮುಂತ್ರಿ ಸಿದ್ದರಾಮಯ್ಯ, ಒಳಮೀಸಲಾತಿ ಜಾರಿ ಮಾಡದೆ ಮೀನಮೇಷ ಎಣಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ಕೂಡ ತನ್ನ ತೀರ್ಪಿನಲ್ಲಿ ಪರಿಶಿಷ್ಟ ಜಾತಿಯಲ್ಲಿರುವ ಎಲ್ಲಾ ಜಾತಿಗಳು ಸಮಾನರಲ್ಲ. ಅವರಲ್ಲೂ ಕೂಡ ಮೇಲು ಕೀಳುಗಳಿವೆ. ಹಾಗಾಗಿ, ಅಸ್ಪೃಶ್ಯ ಜಾತಿಗಳಿಗೆ ಒಳಮೀಸಲಾತಿ ಪಡೆಯುವ ಸಾಂವಿಧಾನಿಕ ಹಕ್ಕುಗಳಿದೆ ಎಂದು ಅಭಿಪ್ರಾಯಪಟ್ಟಿದ್ದರೂ, ಸರ್ಕಾರ ಈ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಕಿಡಿಕಾರಿದರು.
ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮುಖಂಡ ನಿರಂಜನ್, ಪರಿಶಿಷ್ಟ ಜಾತಿಯ ಕೆಲವು ಜನಗಳು ನಾವು ಮೀಸಲಾತಿಯಿಂದ ಉತ್ತಮ ಅಧಿಕಾರ ಮತ್ತು ಸವಲತ್ತುಗಳ ಲಾಭ ಪಡೆದುಕೊಂಡಿದ್ದೇವೆ. ಆದರೆ ಮೀಸಲಾತಿಯ ಲಾಭ ಪರಿಶಿಷ್ಟ ಜಾತಿಯ ಒಳಪಂಗಡಗಳಿಗೆ ಅದರಲ್ಲೂ ಅಸ್ಪೃಶ್ಯರಿಗೆ ಇದರ ಸಾಮಾಜಿಕ ನ್ಯಾಯ ದೊರಕಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಉಪಜಾತಿಗಳು ಒಂದುಗೂಡಿ ಒಳಮಿಸಲಾತಿಗೆ ಆಗ್ರಹಿಸಿ ನಮ್ಮ ಮುಂದಿನ ಪೀಳಿಗೆಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಬಂಟ್ವಾಳ | ಚಾಲಕನ ನಿಯಂತ್ರಣ ತಪ್ಪಿ ಅಡಿಕೆ ತೋಟಕ್ಕೆ ನುಗ್ಗಿದ ಕಾರು: ಮಹಿಳೆ ಸಾವು
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮಂಜುನಾಥ್ ಕುಂದವಾಡ ಮಾತನಾಡಿ, “ರಾಜಕೀಯ ನಾಯಕರುಗಳು ತಮ್ಮ ಅವಕಾಶವಾದಿತನಕ್ಕಾಗಿ ಈ ಪರಿಶಿಷ್ಟ ಜಾತಿಗಳಲ್ಲಿ ಕೆಲವು ಜಾತಿಗಳನ್ನು ಸೇರ್ಪಡೆಗೊಳಿಸಿದ್ದಾರೆ. ಇದು ಅಸ್ಪೃಶ್ಯ ಜಾತಿಗಳನ್ನು ತುಳಿಯುವ ಹುನ್ನಾರ. ನಾವು ಯಾರದೇ ಮೀಸಲಾತಿಯನ್ನು ವಿರೋಧಿಸುವ ಮನಸ್ಥಿತಿಯವರಲ್ಲ. ಎಲ್ಲರೂ ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೊಳ್ಳಬೇಕಾಗಿದೆ. ಆದರೂ, ಅವರು ವಿರೋಧಿಸಿದರೆ ನಾವು ಕೂಡ ಅವರು ಪರಿಶಿಷ್ಟ ಜಾತಿಯಲ್ಲಿರುವುದನ್ನೇ ವಿರೋಧಿಸಿ ಹೋರಾಟ ನಡೆಸಬೇಕಾಗುತ್ತದೆ. ಒಳಮೀಸಲಾತಿಯನ್ನು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ ಕಾಂಗ್ರೆಸ್ ನಾಯಕರುಗಳು, ಇಂದು ಸುಪ್ರೀಂಕೋರ್ಟ್ ಆದೇಶ ನೀಡಿದರೂ ಜಾರಿಗೊಳಿಸುವ ಚಿಂತನೆ ಮಾಡುತ್ತಿಲ್ಲ. ಒಳಮೀಸಲಾತಿ ಜಾರಿಗೊಳಿಸದಿದ್ದಲ್ಲಿ ಇವರನ್ನು ಕೂಡ ಮುಂದಿನ ಚುನಾವಣೆಗಳಲ್ಲಿ ಮನೆಗೆ ಕಳಿಸುವ ಸಾಧ್ಯತೆಯನ್ನು ನಾವು ಪರಿಶೀಲಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಪೂರ್ವಭಾವಿ ಸಭೆಯಲ್ಲಿ ಸಮಾಜದ ಮುಖಂಡರಾದ ನಿವೃತ್ತ ಪೊಲೀಸ್ ಅಧಿಕಾರಿ ರವಿ ನಾರಾಯಣ್, ನಿವೃತ್ತ ಉಪನ್ಯಾಸಕ ಮಲ್ಲಿಕಾರ್ಜುನಪ್ಪ, ಪರಶುರಾಮ, ದುಗ್ಗಪ್ಪ, ಹಾಲೇಶ್, ಮಂಜು ಕಬ್ಬೂರು, ಮಹಾಂತೇಶ ಹಾಗೂ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಕಾರ್ಯಕರ್ತರು, ಛಲವಾದಿ ಮಹಾಸಬಾ, ಮಾದಿಗ ಮುಖಂಡರು ಭಾಗವಹಿಸಿದ್ದರು.


