ಬಿರು ಬಿಸಿಲಿನ ಝಳದಿಂದ ಒಣಗಿ ನಾಶವಾಗಿರುವ ಬೆಳೆಯ ಸಮೀಕ್ಷೆ ನಡೆಸಿ. ಪರಿಹಾರ ನೀಡಬೇಕು ಎಂದು ದಾವಣಗೆರೆ ಜಿಲ್ಲಾ ರೈತರ ಒಕ್ಕೂಟ ಮತ್ತು ಕುಕ್ಕುವಾಡೆ ಸಕ್ಕರೆ ಕಾರ್ಖಾನೆ ಕಬ್ಬು ಬೆಳೆಗಾರರ ಸಂಘ ಒತ್ತಾಯಿಸಿದೆ. ಜಿಲ್ಲಾಧಿಕಾರಿಗೆ ಹಕ್ಕೋತ್ತಾಯ ಪತ್ರ ಸಲ್ಲಿಸಿದೆ.
ಹಕ್ಕೊತ್ತಾಯ ಸಲ್ಲಿಸಿ ಮಾತನಾಡಿದ ರೈತ ಮುಖಂಡ ತೇಜಸ್ವಿ ಪಟೇಲ್, “ನೀರಿಲ್ಲದೆ ಬಿರು ಬಿಸಿಲಿನ ಝಳ ಮತ್ತು ಬಿಸಿಹವೆ ಜ್ವಾಲೆಯಿಂದಾಗಿ ದಾವಣಗೆರೆ ಜಿಲ್ಲೆಯ ಕುಕ್ಕುವಾಡ ಗ್ರಾಮದಲ್ಲಿರುವ ದಾವಣಗೆರೆ ಸಕ್ಕರೆ ಕಂಪನಿ ವ್ಯಾಪ್ತಿಯಲ್ಲಿ ರೈತರು ಬೆಳೆದಿರುವ ವಾರ್ಷಿಕ ಬೆಳೆ ಕಬ್ಬು ಮತ್ತು ಜಿಲ್ಲೆಯಾದ್ಯಂತ ಸುಮಾರು ಹತ್ತಿಪ್ಪತ್ತು ವರ್ಷಗಳಿಂದ ಬೆಳೆಸಿರುವ ಅಡಿಕೆ ಮತ್ತು ತೆಂಗಿನ ತೋಟಗಳು ಸಂಪೂರ್ಣ ಒಣಗಿ ನಾಶವಾಗಿವೆ. ಇದರಿಂದ ರೈತರು ತೀವ್ರ ಆರ್ಥಿಕ ನಷ್ಟಕ್ಕೆ ಸಿಲುಕಿ ನಲುಗಿ ಹೋಗಿದ್ದಾರೆ. ರೈತರು ಬೀಕರ ಬರ ಮತ್ತು ಬಿಸಿಲಿನ ಝಳಕ್ಕೆ ಸಿಲುಕಿ ಬಸವಳಿದಿದ್ದಾರೆ” ಎಂದರು.
ಇದೇ ವೇಳೆ ಮಾತನಾಡಿದ ಬಿ.ಎಂ ಸತೀಶ್, “ರೈತರು ಸಾಕಿದ ಜಾನುವಾರುಗಳಿಗೆ ಮೇವು ಇಲ್ಲದೆ ಕುಡಿಸಲು ನೀರು ಇಲ್ಲದೆ ಹಾಹಾಕಾರದಿಂದ ನರಳಿದ್ದಾರೆ. ಅವೈಜ್ಞಾನಿಕ ವೇಳಾಪಟ್ಟಿಯಿಂದ ಭದ್ರಾ ನೀರು ಇಲ್ಲದೆ, ಮಳೆಯೂ ಇಲ್ಲದೆ, ಕೊಳವೆಬಾವಿಗಳು ನೀರಿಲ್ಲದೆ ಬತ್ತಿ ಹೋಗಿವೆ. ಬೇಸಿಗೆಯ ಬಿರು ಬಿಸಿಲಿನ ಹೊಡೆತಕ್ಕೆ ರೈತ ತತ್ತರಿಸಿ ಹೋಗಿದ್ದಾನೆ. ಕಾದ ಹೆಂಚಿನ ಮೇಲೆ ರೈತನ ಬದುಕು ಎಂಬಂತೆ ಆಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಜಿಲ್ಲಾಡಳಿತ ತಕ್ಷಣ ರೈತರ ಹೊಲಗಳಿಗೆ ಭೇಟಿ ನೀಡಿ ಬಿಸಿಲಿನ ತಾಪಮಾನಕ್ಕೆ ನೀರಿಲ್ಲದೆ ಒಣಗಿ ನಾಶವಾಗಿರುವ ಬೆಳೆ ಸಮೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು. ಸಮೀಕ್ಷೆಯಲ್ಲಿ ರೈತರು ಸಾಲ ಸೋಲ ಮಾಡಿ ಖರೀದಿಸಿ ಬಿತ್ತಿದ ಬೀಜ, ಹಾಕಿದ ಗೊಬ್ಬರ, ಕ್ರಿಮಿನಾಶಕಗಳ ವೆಚ್ಚ ಸೇರಿದಂತೆ ಜಮೀನು ಉಳಿಮೆ, ರೈತನ ಕುಟುಂಬದ ಶ್ರಮ ಮತ್ತು ಕೂಲಿ ವೆಚ್ಚ ಸೇರಿಸಬೇಕು. ಅಂತರ್ಜಲ ಮಟ್ಟ ಕುಸಿದು ಬತ್ತಿರುವ ಕೊಳವೆಬಾವಿಗಳ ಸಮೀಕ್ಷೆ ನಡೆಸಿ ಅವುಗಳ ಅಂತರ್ಜಲ ಮಟ್ಟ ಮರುಪೂರಣ ಮಾಡಬೇಕು. ದಿನದಿಂದ ದಿನಕ್ಕೆ ಬಿಸಿಲಿನ ತೀವ್ರತೆ ಹೆಚ್ಚುತ್ತಿದೆ. ಚುನಾವಣೆ ಮುಗಿಸಿ ರಿಲ್ಯಾಕ್ಸ್ ಮೂಡಿನಲ್ಲಿರುವ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕಾರ್ಯಾರೂಪಕ್ಕೆ ಕ್ರಮ ವಹಿಸಬೇಕು” ಎಂದು ಒತ್ತಾಯಿಸಿದರು.