ವಿಚ್ಛೇದನ ಅರ್ಜಿ ಕುರಿತ ವಿಚಾರಣೆಗೆ ಹಾಜರಾಗಿದ್ದ ದಂಪತಿ ಮಧ್ಯೆ ವಾಗ್ವಾದ ತೀವ್ರಗೊಂಡು, ಕೋರ್ಟ್ ಆವರಣದಲ್ಲೇ ಪತ್ನಿಗೆ ಪತಿಯೊಬ್ಬ ಚಾಕು ಇರಿದು ಹತ್ಯೆಗೆ ಯತ್ನಿಸಿರುವ ಘಟನೆ ದಾವಣಗೆರೆ ನಗರದ ಹೈಸ್ಕೂಲ್ ಮೈದಾನದ ಬಳಿ ಇರುವ ಫ್ಯಾಮಿಲಿ ಕೋರ್ಟ್ ಮೀಡಿಯೇಷನ್ ಸೆಂಟರ್ ಆವರಣದಲ್ಲಿ ಇಂದು ಮಧ್ಯಾಹ್ನ (ಸೆ.20) ನಡೆದಿದೆ. ಸದ್ಯ ಆರೋಪಿ ಪತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಚಾಕು ಇರಿದ ಆರೋಪಿ ಪತಿ ಪ್ರವೀಣ್ (32) ಹಾಗೂ ಇರಿತಕ್ಕೆ ಒಳಗಾದ ಮಹಿಳೆಯನ್ನು ಪದ್ಮಾ (30) ಎಂದು ಗುರುತಿಸಲಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಪದ್ಮಾಳನ್ನು ದಾವಣಗೆರೆ ಸಿಜೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಪದ್ಮಾ ಮತ್ತು ಪ್ರವೀಣ್ ದಾಂಪತ್ಯ ಜೀವನದಲ್ಲಿ ಗಲಾಟೆಗಳು ಹೆಚ್ಚಾಗಿದ್ದವು. ಇಬ್ಬರಿಗೂ ಒಂದು ಹೆಣ್ಣು ಮಗು ಇದೆ. ಆದರೆ, ಪತಿ ಪ್ರವೀಣ್ ಪತ್ನಿಯ ಶೀಲ ಶಂಕಿಸುತ್ತಿದ್ದ, ಅನೇಕ ಬಾರಿ ಇದೇ ವಿಷಯಕ್ಕೆ ಜಗಳವಾಗುತ್ತಿತ್ತು. ಕಳೆದ ಒಂದು ವರ್ಷದ ಹಿಂದಿನಿಂದ ಇಬ್ಬರ ಸಂಬಂಧ ಸಂಪೂರ್ಣ ಹದಗೆಟ್ಟಿತ್ತು. ಹಾಗಾಗಿಯೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಬೆಂಗಳೂರಿನಲ್ಲಿ ಕೂಡ ಪ್ರವೀಣ್ ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿದ್ದಾನೆಂಬ ಮಾಹಿತಿ ಲಭ್ಯವಾಗಿದೆ. ಇಂದು ಡಿವೋರ್ಸ್ ವಿಚಾರಣೆಗಾಗಿ ಕೋರ್ಟ್‌ಗೆ ಹಾಜರಾಗಿದ್ದ ವೇಳೆ ತೀವ್ರ ವಾಗ್ವಾದದ ನಂತರ ಪ್ರವೀಣ್ ಪತ್ನಿಗೆ ಚಾಕು ಇರಿದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ದಾವಣಗೆರೆ | ಹೋರಾಟಗಳಿಂದ ದಲಿತರಲ್ಲಿ ಆತ್ಮಸ್ಟೈರ್ಯ ಮೂಡಿಸಿದವರು ಪ್ರೊ.ಬಿಕೆ: ಎಂ ಗುರುಮೂರ್ತಿ
ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದ್ದು, ಮಾಹಿತಿ ನಿರೀಕ್ಷಿಸಿದೆ.