ಸಾಲಬಾಧೆಯಿಂದ ಸಂಕಷ್ಟ, ಒತ್ತಡಕ್ಕೆ ಸಿಲುಕಿ ಮಾನಸಿಕವಾಗಿ ಕುಗ್ಗಿದ್ದ ಕುಟುಂಬವೊಂದು ಆತ್ಮಹತ್ಯೆಗೆ ಯತ್ನಿಸಿದೆ. ಕುಟುಂಬದ ಮಹಿಳೆಯು ತನ್ನ ಗಂಡ ಮತ್ತು ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಕೊಂದಿದ್ದಾರೆ. ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಬದುಕುಳಿದಿದ್ದಾರೆ.
ಘಟನೆಯು ಬೆಂಗಳೂರಿನ ಹೊಸಕೋಟೆ ತಾಲೂಕಿನ ಗೊಣಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗಂಡನ ಚಿಕಿತ್ಸೆಗಾಗಿ ಮಹಿಳೆ ವಿಪರೀತ ಸಾಲ ಮಾಡಿದ್ದರು. ಆದರೆ, ಸಾಲ ತೀರಿಸಲು ಆಕೆಗೆ ಸಾಧ್ಯವಾಗದ ಹಿನ್ನೆಲೆ ತಮ್ಮ ಜೀವನವನ್ನೇ ಕೊನೆಗೊಳಿಸಿಕೊಳ್ಳಲು ಕುಟುಂಬವು ಮುಂದಾಗಿದೆ.
ಗಂಡ, ಇಬ್ಬರು ಮಕ್ಕಳನ್ನು ಮಹಿಳೆ ಕೊಲೆ ಮಾಡಿದ್ದಾರೆ. ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅದೃಷ್ಟವಶಾತ್ ಬದುಕುಳಿದಿದ್ದಾರೆ. ಮೃತರನ್ನು ಮಹಿಳೆಯ ಪತಿ ಶಿವು (32), ಮಗಳು ಚಂದ್ರಕಲಾ (11) ಹಾಗೂ ಮಗ ಉದಯ್ ಸೂರ್ಯ (07) ಎಂದು ಗುರುತಿಸಲಾಗಿದೆ.
ಸಾಲದ ಹೊರೆ ಹೆಚ್ಚಾದಂತೆ, ದಿನನಿತ್ಯದ ಜೀವನ ದೂಡುವುದೇ ಕಷ್ಟವಾಗಿತ್ತು. ಮಕ್ಕಳ ಆರೈಕೆ ಮಾಡುವುದು ಸವಾಲಿನ ವಿಚಾರವಾಗಿತ್ತು. ಹೀಗಾಗಿ ಶಿವು ಮತ್ತು ಅವರ ಪತ್ನಿ ಮಂಜುಳ ತಮ್ಮ ಬದುಕನ್ನು ಅಂತ್ಯಗೊಳಿಸಲು ನಿರ್ಧರಿಸಿದ್ದರು ಎಂದು ವರದಿಯಾಗಿದೆ.