ಚಿಕ್ಕಮಗಳೂರು ಜಿಲ್ಲೆಯ ಬಜರಂಗದಳದ ಮಾಜಿ ಸಂಚಾಲಕ ತುಡುಕೂರು ಮಂಜುನಾಥ್‌ಗೆ ಗಡಿಪಾರು ನೋಟಿಸ್ ನೀಡಲಾಗಿದ್ದು, ಜಿಲ್ಲಾಧಿಕಾರಿ ವಿಚಾರಣೆಗೆ ಹಾಜರಾಗಲು ಸೂಚಿಸಿದೆ. ಮಾರ್ಚ್ 6ರಂದು ಈ ಗಡಿಪಾರು ಆದೇಶವನ್ನು ಜಿಲ್ಲಾಡಳಿತ ಹೊರಡಿಸಿದ್ದು, ಮಾರ್ಚ್ 14ರಂದು ವಿಚಾರಣೆಗೆ ಹಾಜರಾಗಲು ತಿಳಿಸಿದೆ.
ಜಿಲ್ಲಾಧಿಕಾರವು ಸುಮಾರು 17 ಕಾರಣಗಳನ್ನು ನೀಡಿ ತುಡುಕೂರು ಮಂಜುನಾಥ್‌ಗೆ ಗಡಿಪಾರು ನೋಟಿಸ್ ನೀಡಿದ್ದು, ರಾಜಕೀಯ ಲಾಭಕ್ಕಾಗಿ ಗಲಭೆ ಉಂಟು ಮಾಡುವ ಸಾಧ್ಯತೆಯನ್ನು ಒತ್ತಿ ಹೇಳಿದೆ. “ಚಿಕ್ಕಮಗಳೂರು ಜಿಲ್ಲೆಯು ಮತೀಯ ಸೂಕ್ಷ್ಮ ಪ್ರದೇಶವಾಗಿದೆ, ಇಲ್ಲಿ ಮತೀಯ ಗಲಭೆ ಉಂಟು ಮಾಡುವ ಸಾಧ್ಯತೆಯಿದೆ. ಜೊತೆಗೆ ಗುರುದತ್ತಾತ್ರೇಯ ಬಾಬಾಬುಡನ್ ದರ್ಗಾ ವಿವಾದದಲ್ಲಿ ಪ್ರಚೋದನಕಾರಿ ಹೇಳಿಕೆಯನ್ನು ಮಂಜುನಾಥ್ ನೀಡಿದ್ದಾರೆ” ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
ಮಂಜುನಾಥ್ ಚಿಕ್ಕಮಗಳೂರು ತಾಲೂಕಿನ ಆಲ್ಲೂರು ಹೋಬಳಿ ತುಡುಕೂರು ಗ್ರಾಮದ ನಿವಾಸಿಯಾಗಿದ್ದು, ಮಂಜುನಾಥ್ ವಿರುದ್ಧ 17 ಕ್ರಿಮಿನಲ್ ಪ್ರಕರಣಗಳು ಮತ್ತು 7 ಮುಂಜಾಗ್ರತಾ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪೈಕಿ 22 ಪ್ರಕರಣ ಖುಲಾಸೆಯಾಗಿದೆ ಎಂದು ವರದಿಯಾಗಿದೆ. ಈ ಹಿಂದೆ ಯುವತಿಗೆ ಅಸಭ್ಯ ಮೆಸೇಜ್ ಮಾಡಿದ್ದ ಕಾರಣಕ್ಕೆ ಹುದ್ದೆಯಿಂದ ಉಚ್ಛಾಟನೆಯಾಗಿದ್ದರು.
ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಸಮಾಜಘಾತುಕ ಚಟುವಟಿಕೆಯಿಂದ ಜನರ ಶಾಂತಿ, ನೆಮ್ಮದಿ, ಭದ್ರತೆಗೆ ಹಾನಿ ಮಾಡಿದ್ದಾರೆ ಮತ್ತು ಈ ಮೂಲಕ ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತಂದಿದ್ದಾರೆ. ಇದನ್ನು ನಿಯಂತ್ರಿಸಲು ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 55(ಎ)(ಬಿ) ಅಡಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯಿಂದ ಗಡಿಪಾರು ಮಾಡಲಾಗುವುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಕೆಲವು ತಿಂಗಳುಗಳ ಹಿಂದೆ ರಾಜ್ಯ ಸರ್ಕಾರವು ಮಂಗಳೂರಿನ ಮೂವರು ಸಂಘಪರಿವಾರದ ಕಾರ್ಯಕರ್ತರಿಗೆ ಗಡಿಪಾರು ನೋಟಿಸ್ ಜಾರಿ ಮಾಡಿತ್ತು ಎಂಬುವುದನ್ನು ಸ್ಮರಿಸಬಹುದು. ಗಡಿಪಾರಾದ ಬಾಲಚಂದ್ರ ಅತ್ತಾವರ, ಗಣೇಶ್ ಅತ್ತಾವರ, ಜಯಪ್ರಕಾಶ್ ಶಕ್ತಿನಗರ ಯುವತಿಯ ಜೊತೆ ನಿಂತಿದ್ದ ಎಂಬ ಕಾರಣಕ್ಕೆ ಯುವಕನ ಮೇಲೆ ಹಲ್ಲೆಗೆ ಯತ್ನಿಸಿದ್ದರು.
