ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 15% ಎನ್ಆರ್ಐ ಕೋಟಾವನ್ನು ರದ್ದುಪಡಿಸಲು ಆಗ್ರಹಿಸಿ ಎಐಡಿಎಸ್ಓ ದಾವಣಗೆರೆ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ದಾವಣಗೆರೆಯ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಅನಿವಾಸಿ ಭಾರತೀಯ (NRI) ಕೋಟಾ ರದ್ದು ಮಾಡಲು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿ ಎಐಡಿಎಸ್ಓ ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ ಮಾತನಾಡಿ “2025-26ನೇ ಸಾಲಿನಿಂದ ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ.15 ಎನ್ಆರ್ಐ ಕೋಟಾವನ್ನು ಆರಂಭಿಸಲು ನಿರ್ಧರಿಸಿದೆ. ರಾಜ್ಯ ಸರ್ಕಾರದ ಈ ನಿರ್ಧಾರವು ವೈದ್ಯಕೀಯ ಶಿಕ್ಷಣದ ಕನಸು ಹೊತ್ತ ರಾಜ್ಯದ ಬಡ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳನ್ನು ಆತಂಕಕ್ಕೆ ತಳ್ಳಿದೆ. ಈಗಾಗಲೇ ಅಖಿಲ ಭಾರತ ಕೋಟಾದಡಿ ಶೇ. 15 ಸೀಟುಗಳನ್ನು ನೀಡಲಾಗುತ್ತಿದೆ. ಇನ್ನೂ ಶೇ.15 ಸೀಟುಗಳು ಎನ್ಆರ್ಐ ಕೋಟಾಗೆ ನೀಡಿದರೆ 200 ವಿದ್ಯಾರ್ಥಿಗಳ ಒಂದು ಬ್ಯಾಚಿನಲ್ಲಿ 140 ಸೀಟುಗಳು ಮಾತ್ರ ರಾಜ್ಯದ ವಿದ್ಯಾರ್ಥಿಗಳಿಗೆ ಉಳಿದಂತಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ರಾಜ್ಯದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಆರ್ಥಿಕ ಹಿನ್ನೆಲೆ ಲೆಕ್ಕಿಸದೆ ಬಡ ಅರ್ಹ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣವನ್ನು ಒದಗಿಸಲು ಸ್ಥಾಪಿಸಲಾಗಿದೆ. ಶ್ರೀಮಂತ ಅನಿವಾಸಿ ಭಾರತೀಯ ವಿದ್ಯಾರ್ಥಿಗಳಿಗೆ ಸೀಟುಗಳನ್ನು ಮೀಸಲಿಡುವ ಮೂಲಕ, ವೈದ್ಯರಾಗಿ ಸಮಾಜಕ್ಕೆ ಸೇವೆ ಸಲ್ಲಿಸಲು ಬಯಸುವ ನೂರಾರು ಶ್ರಮಜೀವಿ, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವಕಾಶವನ್ನು ನಿರಾಕರಿಸಿದಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 12,447 ಬೋಧಕ ಹುದ್ದೆಗಳು ಖಾಲಿ ಇರುವ ಸಮಯದಲ್ಲಿ, ಸರ್ಕಾರವು ಈ ಹುದ್ದೆಗಳನ್ನು ಭರ್ತಿ ಮಾಡಲು ಮತ್ತು ಮೂಲಸೌಕರ್ಯವನ್ನು ಸುಧಾರಿಸಲು ಆದ್ಯತೆ ನೀಡಬೇಕು. ಬೋಧಕವರ್ಗ ಮತ್ತು ಸೌಲಭ್ಯಗಳನ್ನು ಬಲಪಡಿಸುವುದು ನಿಜವಾದ ಅಗತ್ಯವಾಗಿದೆ. ಈ ಅಗತ್ಯಗಳನ್ನು ಪೂರೈಸಲು ಸರ್ಕಾರವು ಮುಂದಾಗಬೇಕು ಮತ್ತು ಶೇ.15 ಎನ್ಆರ್ಐ ಕೋಟಾ ರದ್ದುಗೊಳಿಸುವ ಮೂಲಕ ಅರ್ಹ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಬೇಕು” ಎಂದು ಆಗ್ರಹಿಸಿದರು.

“ರಾಜ್ಯ ಸರ್ಕಾರದ ಈ ನಿರ್ಧಾರವು ಸರ್ಕಾರಿ ಕಾಲೇಜುಗಳನ್ನು ಖಾಸಗಿ ಕಾಲೇಜು, ಸಂಸ್ಥೆಗಳಂತೆ ಲಾಭಗಳಿಸುವ ಕೇಂದ್ರಗಳಾಗಿ ಪರಿವರ್ತಿಸುವ ಅಪಾಯಕಾರಿ ಹೆಜ್ಜೆಯಾಗಿದೆ” ಎಂದು ಎಚ್ಚರಿಸಿದರು.
ಡಿ ಆರ್ ಎಂ ಕಾಲೇಜು ವಿದ್ಯಾರ್ಥಿನಿ ಕಾವ್ಯ ಮಾತನಾಡಿ “ರಾಜ್ಯ ಸರ್ಕಾರ ಎನ್ಆರ್ಐ ಕೋಟಾ ತರುತ್ತಿರುವುದು ಬಡ ವಿದ್ಯಾರ್ಥಿಗಳಿಗೆ ಹೊರೆಯಾಗುತ್ತಿದೆ. ಬಡ ವಿದ್ಯಾರ್ಥಿಗಳಿಗೆ ಖಾಸಗಿ ಸಂಸ್ಥೆಗಳಲ್ಲಿ ವೈದ್ಯಕೀಯ ಸೀಟುಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಮೆರಿಟ್ ಇದ್ದು ಪ್ರತಿಭಾವಂತರಾಗಿದ್ದರೂ ಕೂಡ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಎನ್ಆರ್ಐ ಕೋಟಾ ತರುವುದರಿಂದ ವೈದ್ಯಕೀಯ ಸೀಟುಗಳಿಂದ ವಂಚಿತರಾಗುತ್ತಾರೆ. ಸಾರ್ವಜನಿಕರ ವಿದ್ಯಾರ್ಥಿಗಳ ಅಭಿಪ್ರಾಯವನ್ನು ಸರ್ಕಾರ ಪರಿಗಣಿಸಿ ಎನ್ಆರ್ಐ ಕೋಟಾ ರದ್ದು ಮಾಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಫೇಸ್ಬುಕ್ ನಲ್ಲಿ ಗಣೇಶ ವಿಸರ್ಜನೆಗೆ ಡಿಜೆ ಬಳಕೆ ಸುಳ್ಳು ಸುದ್ದಿ: ಪ್ರಕರಣ ದಾಖಲಿಸಿದ ಪೊಲೀಸರು
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಸುಮನ್ ಟಿ ಎಸ್ ಸಂಘಟನಾ ಕಾರ್ಯದರ್ಶಿ ಗಂಗಾಧರ, ಮಂಜುನಾಥ ಬಿ ಹೆಚ್, ವೀರೇಶ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.