ಮಾದಿಹಳ್ಳಿ ಗ್ರಾಮದಿಂದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿನಿತ್ಯ ಕಾಲೇಜಿಗೆ ತೆರಳಲು ಸರ್ಕಾರಿ ಬಸ್ಸುಗಳ ಮೇಲೆ ಅವಲಂಬಿತರಾಗಿದ್ದಾರೆ. ಮುಂಜಾನೆ 6ಕ್ಕೆ ಹೊರಡುವ ಬಸ್ಸು ಹೆಚ್ಚು ಜನಸಂದಣಿಯಿಂದ ಭರ್ತಿಯಾಗುವ ಕಾರಣ ಬಹುತೇಕ ವಿದ್ಯಾರ್ಥಿಗಳು ಬಸ್ ಹತ್ತಲಾಗದೇ ಕಾಲೇಜಿಗೆ ಹೋಗಲು ತೊಂದರೆಯಾಗುತ್ತಿದ್ದು, ವಿದ್ಯಾರ್ಥಿಗಳ ಶಾಲಾ ಸಮಯ ಮತ್ತು ಅನುಕೂಲಕ್ಕಾಗಿ ಬಸ್ ಸೇವೆ ಒದಗಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ಜಿಲ್ಲಾ ಎಐಡಿಎಸ್ಓ ಜಿಲ್ಲಾ ಸಮಿತಿ ಕಾರ್ಯಕರ್ತರು, ವಿದ್ಯಾರ್ಥಿಗಳು ಕೆ ಎಸ್ ಆರ್ ಟಿ ಸಿ ಅಧಿಕಾರಿಗಳಿಗೆ ಮನವಿ ಮಾಡಿದರು.
ಮುಂಜಾನೆ 6 ರೈ ನಂತರ ಸಾರಿಗೆ ವ್ಯವಸ್ಥೆ ಸಮರ್ಪಕವಾಗಿ ಇರದ ಕಾರಣ ಹಲವು ಬಾರಿ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದೇ, ಕಷ್ಟವನ್ನು ಎದುರಿಸುತ್ತಿದ್ದಾರೆ. ಈ ಹಳ್ಳಿಯಿಂದ ಹೊರಡುವ ಬಹುತೇಕ ಮಕ್ಕಳು ಬಡ ಕುಟುಂಬದಿಂದ ಬಂದಿದ್ದು, ಕೂಲಿ ಹಾಗೂ ರೈತಾಪಿ ಮನೆತನದಿಂದ ಓದುವ ಆಸೆ ಹೊತ್ತು ನಗರದ ಕಡೆಗೆ ಮುಖ ಮಾಡುವಂತಾಗಿದೆ. ಈ ಮಕ್ಕಳು ಶಿಕ್ಷಣದಿಂದ ವಂಚಿತರಾಗದೆ ಶಾಲಾ ಕಾಲೇಜಿಗೆ ತೆರಳಲು ಸಮರ್ಪಕ ಬಸ್ಸಿನ ವ್ಯವಸ್ಥೆಯನ್ನು ಒದಗಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ವೇಳೆ ಮಾತನಾಡಿದ ಅಧ್ಯಕ್ಷೆ ಪೂಜಾ ನಂದಿಹಳ್ಳಿ “ಮಾದಿಹಳ್ಳಿಯಿಂದ ಇರುವ ಒಂದೇ ಬಸ್ಸು ಬೆಳಿಗ್ಗೆ 6ಕ್ಕೆ ಹೊರಡುವ ಕಾರಣ ಬಹುತೇಕ ಮಕ್ಕಳು ಉಪಹಾರವನ್ನು ಮಾಡದೆ ಹಾಗೆಯೇ ಬರುವುದುಂಟು. ಶಾಲಾಕಾಲೇಜಿನ ಸಮಯಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಇನ್ನೊಂದು ಬಸ್ ಬಿಡಬೇಕು. ಮತ್ತು ಹಿಂದಿರುಗಲು ಸಂಜೆ ಇನ್ನೊಂದು ಬಸ್ ಸಂಪರ್ಕ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ವಿದ್ಯಾರ್ಥಿಗಳ ಆಗ್ರಹಕ್ಕೆ ಸ್ಪಂದಿಸಿದ ವಿಭಾಗಿಯ ಸಂಚಾರ ಅಧಿಕಾರಿಗಳು, ಈಗ ಇರುವ 6 ಗಂಟೆ ಬಸ್ ನೊಂದಿಗೆ ಬೆಳಿಗ್ಗೆ 7.30ಕ್ಕೆ ಮಾದಿಹಳ್ಳಿಯಿಂದ ದಾವಣಗೆರೆಗೆ ಹಾಗೂ ಸಂಜೆ 4.30ಕ್ಕೆ ದಾವಣಗೆರೆಯಿಂದ ಮಾದಿಹಳ್ಳಿಗೆ ಬಸ್ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ ? ಚಿತ್ರದುರ್ಗ | ಭಾರತದ ಜಾತಿಗಳು ಹೋಮೋಜೀನಿಯಸ್ ಅಲ್ಲ, ಹೆಟ್ರೋ ಜೀನಿಯಸ್; ಚಿಂತಕ ವಿ ಎಲ್ ನರಸಿಂಹಮೂರ್ತಿ
ಎಐಡಿಎಸ್ಓ ಸಂಘಟನೆಯ ಜಿಲ್ಲಾಧ್ಯಕ್ಷರಾದ ಪೂಜಾ ನಂದಿಹಳ್ಳಿ, ವಿದ್ಯಾರ್ಥಿಗಳಾದ ಪಿ ಸಿದ್ದೇಶ, ಹೇಮಂತ, ಅಂಜಿನಪ್ಪ, ಮುರುಳೀಧರ, ರಾಕೇಶ ಮುಂತಾದವರು ಉಪಸ್ಥಿತರಿದ್ದರು.