ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ನಡೆದಿರುವ ಭ್ರಷ್ಟಾಚಾರ, ಕಾನೂನು ಉಲ್ಲಂಘನೆ ಸೇರಿದಂತೆ ಇತರೆ ಅವ್ಯವಹಾರಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ದಸಂಸ(DSS) ಜಿಲ್ಲಾ ಸಂಚಾಲಕ ಕುಂದವಾಡ ಮಂಜುನಾಥ್ ಸರ್ಕಾರವನ್ನು ಆಗ್ರಹಿಸಿದರು.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ವಿಶ್ವವಿದ್ಯಾನಿಲಯದಲ್ಲಿ ಕೆಲವು ಆರ್ಥಿಕ, ರಾಜಕೀಯವಾಗಿ ಸಬಲರಾಗಿದ್ದವರು ಅಲ್ಲಿನ ಸರ್ಕಾರಿ ಹುದ್ದೆಗಳನ್ನು ಹಣಬಲ, ರಾಜಕೀಯ ಬಲದಿಂದ ಖರೀದಿ ಮಾಡಿಕೊಂಡಿದ್ದಾರೆ. ಇದರಿಂದಾಗಿ ಎಷ್ಟೋ ನಿಷ್ಟಾವಂತ, ಅರ್ಹರಿಗೆ ಸರ್ಕಾರಿ ಹುದ್ದೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಇಲ್ಲದಂತಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ದಾವಿವಿಯಲ್ಲಿ ಭೋಧಕೇತರ ಹುದ್ದೆಗೆ ಏರ್ಪಡಿಸಲಾದ ಪರೀಕ್ಷೆಗಳನ್ನು ಹಲವಾರು ಬಾರಿ ಮುಂದೂಡಿದ್ದು, ಅದಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಗಳನ್ನು ನೀಡುತ್ತಿಲ್ಲ. ಅಲ್ಲದೇ ವಿವಿಯ ಕುಲಪತಿ ಇಲ್ಲದ ವೇಳೆ ಅಕ್ರಮವಾಗಿ ಕೆಲವರನ್ನು ನೇಮಕಾತಿ ಮಾಡಿಕೊಳ್ಳಲಾಗಿದ್ದು, ಕುಲಪತಿಗಳ ಬದಲು ಕುಲಸಚಿವರು ಸಹಿ ಮಾಡಿರುವುದು ಹಲವಾರು ಅನುಮಾನ ಮೂಡಿಸುತ್ತಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

“ಬೋಧಕ ಹುದ್ದೆಗಳ ಆಯ್ಕೆಯಲ್ಲೂ ಭ್ರಷ್ಟಾಚಾರ ನಡೆದಿದ್ದು. 30ರಿಂದ 50 ಲಕ್ಷ ಲಂಚ ನೀಡಿದವರಿಗೆ ಮಾತ್ರ ಆಯ್ಕೆ ಮಾಡಲಾಗಿದೆ ಎನ್ನುವ ಆರೋಪ, ಚರ್ಚೆಗಳು ಕೇಳಿ ಬರುತ್ತಿವೆ. ಹುದ್ದೆಗಳಿಗೆ ಆಯ್ಕೆಯಾದವರಿಗೆ ಹಲವು ಬ್ಯಾಂಕಿನವರು ಸಾಲ ನೀಡಲು ಮುಂದಾಗಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ಬಹುತೇಕ ಬೋಧಕ ಸಿಬ್ಬಂದಿಗಳು ಏಕಕಾಲದಲ್ಲೇ ಬ್ಯಾಂಕಿನಲ್ಲಿ ಸಾಲ ಪಡೆದಿರುತ್ತಾರೆ. ಅಲ್ಲದೇ ಕುಲ ಸಚಿವರ ಪತ್ನಿಯೇ ಇಲ್ಲಿ ಬೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವೆಲ್ಲವೂ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ” ಎಂದರು.
“ಕಾಲೇಜು ಅಭಿವೃದ್ಧಿ ಪರಿಷತ್ತಿನಲ್ಲೂ ಕಾಯಿದೆ ಕಾನೂನುಗಳನ್ನು ಪಾಲಿಸದೇ ಹೊಸ ಕಾಲೇಜುಗಳಿಗೆ ಅನುಮತಿ ಕೇಳಿ ಬಂದವರಿಗೆ ಯಾವುದೇ ಮಾನದಂಡಗಳನ್ನು ಪಾಲಿಸದೇ ಹಣ ಪಡೆದು ಅನುಮತಿ ನೀಡಿರುತ್ತಾರೆ. ಇದಲ್ಲದೇ ಇಂಜಿನಿಯರಿಂಗ್ ವಿಭಾಗ, ಪರಿಕ್ಷಾಂಗ ವಿಭಾಗದಲ್ಲಿ ಮಾತ್ರವಲ್ಲದೇ ಟೆಂಡರ್ ನೀಡುವ ಪ್ರಕ್ರಿಯೆಯಲ್ಲೂ ಭ್ರಷ್ಟಾಚಾರ ನಡೆದಿದೆ” ಎಂದು ಆರೋಪಿಸಿದರು.
“ಈ ಹಿನ್ನೆಲೆಯಲ್ಲಿ ಸರ್ಕಾರ ದಾವಣಗೆರೆ ವಿಶ್ವ ವಿದ್ಯಾನಿಲಯಕ್ಕೆ ಸಂಬಂಧ ಪಟ್ಟಂತೆ ಸಮಗ್ರ ತನಿಖೆ ನಡೆಸುವ ಮೂಲಕ ಉನ್ನತ ಮಟ್ಟದ ಅಧಿಕಾರಿಗಳನ್ನು ನೇಮಿಸಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಶಕ್ತಿ ಯೋಜನೆ | ರಾಜ್ಯಾದ್ಯಂತ 500 ಕೋಟಿ ಮಹಿಳೆಯರ ಪ್ರಯಾಣ: ಕಾರ್ಮಿಕರಿಗೆ ಸುಲಭ ಸಂಚಾರ, ಆರ್ಥಿಕ ಬಲ
ಸುದ್ದಿಗೋಷ್ಠಿಯಲ್ಲಿ ದಲಿತ ವಾಣಿಜ್ಯೋದ್ಯಮಿಗಳ ಸಂಘದ ಅಧ್ಯಕ್ಷ ಕಬ್ಬೂರು ಮಂಜುನಾಥ್, ದಸಂಸದ ಜೆ.ಮಹಾಂತೇಶ್, ಚಿತ್ತಾನಹಳ್ಳಿ ನಾಗರಾಜ್, ಮಂಜುನಾಥ್, ಕುಂದವಾಡದ ಶಿವಕುಮಾರ್ ಹಾಗೂ ಇತರರು ಹಾಜರಿದ್ದರು.