ಸೂರಿಲ್ಲದ ಬಡ, ದಲಿತ, ಹಿಂದುಳಿದ ಕುಟುಂಬಗಳಿಗೆ ನಿವೇಶನ ಹಂಚಿಕೆ, ವಸತಿ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಹರಿಹರ ನಗರ ಹೊರವಲಯದ ಪ್ರೊ. ಬಿ. ಕೃಷ್ಣಪ್ಪ ನವರ ಸಮಾಧಿ ಸ್ಥಳದಿಂದ ತಾಲೂಕು ಕಚೇರಿವರೆಗೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಕಡ್ಲೆಗೊಂದಿ ಗ್ರಾಮದ ನೂರಾರು ವಸತಿ ರಹಿತರು, ಹೋರಾಟಗಾರರು ತಮಟೆ ಚಳುವಳಿ, ಪಾದಯಾತ್ರೆ ಮೂಲಕ ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು.

ಹರಿಹರ ತಾಲೂಕು ಸಂಚಾಲಕ ಪಿ ಜೆ ಮಹಾಂತೇಶ ಮಾತನಾಡಿ, “ಬೇಡಿಕೆ ಈಡೇರಿಕೆಗಾಗಿ ಈ ಹಿಂದೆ ಪ್ರೊ.ಬಿ.ಕೃಷ್ಣಪ್ಪರ ಸಮಾಧಿ ಸ್ಥಳದಿಂದ ತಾಲ್ಲೂಕು ಕಚೇರಿವರೆಗೆ ತಮಟೆ ಚಳವಳಿ, ಹರಿಹರ ತಾಲ್ಲೂಕು ಕಚೇರಿ ಎದುರು ಸತತವಾಗಿ 60 ದಿನಗಳ ಕಾಲ ಧರಣಿ ಸತ್ಯಾಗ್ರಹ ಹಾಗೂ ಬೆಂಗಳೂರಿನಲ್ಲಿ ಜನಸ್ಪಂದನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರಿಗೆ, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ ಸಿಇಓ ಗೆ ಮನವಿ ನೀಡಲಾಗಿದ್ದರೂ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮದಲ್ಲಿ ಸರ್ವೆ ನಂ.37/2 ರಲ್ಲಿ ಲಭ್ಯವಿರುವ ಸರ್ಕಾರದ ಜಮೀನಿನಲ್ಲಿ ವಸತಿ ಯೋಜನೆ ಜಾರಿಗೊಳಿಸಲು ದಲಿತ ಸಂಘರ್ಷ ಸಮಿತಿಯ ಹೋರಾಟದ ಫಲವಾಗಿ ಪರಿಶಿಷ್ಟ ಜಾತಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ 73 ಜನ ಫಲಾನುಭವಿಗಳ ಪಟ್ಟಿಯನ್ನು ಗ್ರಾಮ ಪಂಚಾಯ್ತಿಯಿಂದ 9 ತಿಂಗಳ ಹಿಂದೆಯೆ ಪಟ್ಟಿ ಸಿದ್ಧಪಡಿಸಿದ ನಂತರವೂ ನಿವೇಶನಗಳ ಹಂಚಿಕೆ ಮಾಡಿಲ್ಲ. ಇತ್ತೀಚಿಗೆ ಭೂ ನ್ಯಾಯ ಮಂಡಳಿಯೂ ರಚನೆಯಾದರೂ ನಿವೇಶನ ಹಂಚದೇ ಅಧಿಕಾರಿಗಳು ಮುಂದೂಡುತ್ತಿದ್ದಾರೆ” ಎಂದು ಆರೋಪಿಸಿದರು.


ದಸಂಸ ಜಿಲ್ಲಾ ಸಂಚಾಲಕ ಮಂಜುನಾಥ ಕುಂದವಾಡ ಮಾತನಾಡಿ “ಗ್ರಾಮದಲ್ಲಿ ಬಡ, ದಲಿತ ಕುಟುಂಬಗಳು ಸೂರಿಲ್ಲದೇ ಬದುಕುತ್ತಿದ್ದಾರೆ. ಸತತ ಹೋರಾಟದ ಫಲವಾಗಿ ಪಟ್ಟಿ ಸಿದ್ಧಪಡಿಸಿದ್ದರೂ, ಜಾಗಗಳನ್ನು ಫಲಾನುಭವಿಗಳಿಗೆ ಹಂಚದೇ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡುವ ಪ್ರಕ್ರಿಯೆಯನ್ನು ಆದಷ್ಟು ಶೀಘ್ರ ನಡೆಸುವಂತೆ ಆಗ್ರಹಿಸಲು ಪಾದಯಾತ್ರೆ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ. ಶೀಘ್ರವೇ ಹಂಚಿಕೆ ಮಾಡದಿದ್ದರೆ ಆಡಳಿತದ ವಿರುದ್ಧ ಸತತ, ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಸಿದರು.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಭಾರತದ ಜಾತಿಗಳು ಹೋಮೋಜೀನಿಯಸ್ ಅಲ್ಲ, ಹೆಟ್ರೋ ಜೀನಿಯಸ್; ಚಿಂತಕ ವಿ ಎಲ್ ನರಸಿಂಹಮೂರ್ತಿ
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಕುಂದುವಾಡ ಜಿಲ್ಲಾ ಮಹಿಳಾ ಸಂಚಾಲಕಿ ವಿಜಯಲಕ್ಷ್ಮಿ , ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಮಾತಂಗಮ್ಮ ತಿಮ್ಮಣ್ಣ, ಚನ್ನಗಿರಿ ತಾಲೂಕಿನ ಸಂಚಾಲಕ ಚಿತ್ರಲಿಂಗಪ್ಪ, ನ್ಯಾಮತಿ ತಾಲೂಕ ಸಂಚಾಲಕರು ಚಂದ್ರಪ್ಪ, ಹೊನ್ನಾಳ್ಳಿ ತಾಲೂಕು ಸಂಚಾಲಕ ಪರಮೇಶ್, ಜಗಳೂರು ಕುಬೇರಪ್ಪ, ಚಿತ್ತನಹಳ್ಳಿ ನಾಗರಾಜ್, ಶಿವಶಂಕರ್ ಎಸ್ಎಂ, ಪ್ರದೀಪ್ ಕೆಟಿಜಿ ನಗರ, ಶಾಂತಿನಗರ ಮಂಜುನಾಥ್, ಚೌಡಪ್ಪ ಸಿ. ಭಾನುವಳ್ಳಿ, ಹನುಮಂತಪ್ಪ, ರಂಗಪ್ಪ, ಅಣ್ಣಪ್ಪ, ಸಂಜೀವ್, ಸೇರಿದಂತೆ ನೂರಾರು ಮಹಿಳೆಯರು, ಕಾರ್ಯಕರ್ತರು ಭಾಗವಹಿಸಿದ್ದರು.