ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ದೊಣೆಹಳ್ಳಿಯ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ಹತ್ತಿರ ವ್ಯಾಪಾರದ ವಿಚಾರವಾಗಿ ಕೋಳಿ ಕತ್ತರಿಸುವ ಮಚ್ಚಿನಿಂದ ತಿಪ್ಪೇಶ್ ಎನ್ನುವವನು ರಮೇಶ್ ಎಂಬ ವ್ಯಕ್ತಿಯ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಘಟನೆಯಲ್ಲಿ ರಮೇಶನ ಕೈಗೆ ಮಚ್ಚಿನಿಂದ ಬಲವಾದ ಹಲ್ಲೆಯಿಂದ ಗಂಭೀರ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಗಳೂರು ತಾಲೂಕಿನ ದೊಣೆಹಳ್ಳಿಯ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ಬಳಿ ಆಕನೂರು ಗ್ರಾಮದ ನಿಂಗಪ್ಪ ಮತ್ತು ತಿಪ್ಪೇಸ್ವಾಮಿ ಕೋಳಿ ಮಾಂಸ ಮಾರಾಟದ ಅಂಗಡಿಗಳನ್ನು ಇಟ್ಟುಕೊಂಡಿದ್ದಾರೆ. ಕೋಳಿ ಅಂಗಡಿ ಪಕ್ಕ ದೊಣ್ಣೆಹಳ್ಳಿ ಹೊಸೂರು ಗ್ರಾಮದ ತಿಪ್ಪೇಶ ಎಗ್‌ರೈಸ್ ಅಂಗಡಿ ಇಟ್ಟುಕೊಂಡಿದ್ದಾನೆ.
ಇದೇ ತಿಪ್ಪೇಶ ಕಳೆದ ಜೂ. 9ರಂದು ರಾತ್ರಿ ತಿಪ್ಪೇಸ್ವಾಮಿಯ ಹತ್ತಿರ ವಿಚಾರವೊಂದಕ್ಕೆ ಗಲಾಟೆ ಮಾಡಿಕೊಂಡಿದ್ದಾನೆ. ಈ ವಿಚಾರದ ಬಗ್ಗೆ ವಿಚಾರಿಸಲು ರಮೇಶ್ ಮತ್ತು ಸುರೇಶ್ ಎಂಬುವವರು ಜೂ. 10ರಂದು ಮಧ್ಯಾಹ್ನ ತಿಪ್ಪೇಶನ ಎಗ್ ರೈಸ್ ಅಂಗಡಿ ಹತ್ತಿರ ಹೋಗಿದ್ದರು. ಈ ವೇಳೆ ತಿಪ್ಪೇಶ ಏಕಾಏಕಿ ನಿಂಗಪ್ಪನ ಕೋಳಿ ಅಂಗಡಿಯಲ್ಲಿದ್ದ ಮಚ್ಚು ತೆಗೆದುಕೊಂಡು ರಮೇಶನ ತಲೆಯತ್ತ ಬೀಸಿದ್ದಾನೆ. ಈ ಮಧ್ಯೆ ರಮೇಶ ಎಡಗೈಯನ್ನು ಅಡ್ಡ ತಂದಿದ್ದರಿಂದ ಮಚ್ಚಿನೇಟು ಬಲವಾಗಿ ಬಿದ್ದಿದೆ. ಸುರೇಶ್ ಮತ್ತು ಪುನೀತ್ ರಮೇಶ್‌ನನ್ನು ಜಗಳೂರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಪತ್ರಕರ್ತರ ಮೇಲೆ ಹಲ್ಲೆ ವಿರುದ್ಧ ಕ್ರಮಕ್ಕೆ ಕಾರ್ಯನಿರತ ಪತ್ರಕರ್ತರ ಸಂಘ ಪ್ರತಿಭಟನೆ
ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ಶಿಫಾರಸ್ಸು ಮಾಡಿದ್ದು, ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ರವಿ ಎಂಬಾತ ಜಗಳೂರು ಠಾಣೆಗೆ ದೂರು ನೀಡಿದ್ದು ಪಿಎಸ್‌ಐ ಆಶಾ ತನಿಖೆ ಕೈಗೊಂಡಿದ್ದಾರೆ.