ಪ್ರವಾದಿ ಮಹಮ್ಮದ್ ಪೈಗಂಬರರ 1500ನೇ ಜನ್ಮದಿನದ ಅಂಗವಾಗಿ ಆಚರಿಸಲಾಗುವ ಈದ್ ಮಿಲಾದ್ ಹಬ್ಬದ ಪ್ರಯುಕ್ತ ದಾವಣಗೆರೆಯ ವಕೀಲರಾದ ರಿಜ್ವಿಖಾನ್ ಬ್ರಿಗೇಡ್ ಗ್ರೂಪ್ ವತಿಯಿಂದ ಮತ್ತು ವಕೀಲರ ಬಳಗದಿಂದ ದಾವಣಗೆರೆಯಲ್ಲಿ ಜಿಲ್ಲಾ ನ್ಯಾಯಾಲಯದ ಮುಂಭಾಗ ತಂಪು ಪಾನೀಯ ವಿತರಿಸುವ ಮೂಲಕ ಜನ್ಮದಿನಾಚರಣೆ ನಡೆಸಿ ಶುಭ ಕೋರಲಾಯಿತು.

ಈ ವೇಳೆ ಪ್ರವಾದಿ ಪೈಗಂಬರವರ ಸಂದೇಶಗಳನ್ನು ಪ್ರದರ್ಶಿಸುವುದರ ಮೂಲಕ ಜಿಲ್ಲಾ ವಕೀಲರ ಸಂಘದ ನೂತನ ಅಧ್ಯಕ್ಷರಾದ ಟಿ ಆರ್ ಗುರುಬಸವರಾಜ್ ಕಾರ್ಯಕ್ರಮ ಉಧ್ಘಾಟಿಸಿದರು. ಇದೇ ವೇಳೆ ವಕೀಲರ ಸಂಘದ ಹಿರಿಯ ವಕೀಲರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ವಕೀಲರ ಸಂಘದ ನಿಕಟ ಪೂರ್ವ ಅಧ್ಯಕ್ಷ ಎಲ್ ಎಚ್ ಅರುಣ್ ಕುಮಾರ್ ಮಾತನಾಡಿ “ಎಲ್ಲಾ ವಕೀಲರು ಸೇರಿದಂತೆ ಗೆಳೆಯರು ವಿಶೇಷ ರೀತಿಯಲ್ಲಿ ಪ್ರವಾದಿ ಪೈಗಂಬರರ ಜನ್ಮದಿನವನ್ನು ಆಚರಿಸುತ್ತಿರುವುದು ಸಂತಸದ ವಿಷಯ. ಎಲ್ಲರೂ ಸಂತಸದಿಂದ ಶಾಂತಿ ಸಹಬಾಳ್ವೆಯಿಂದ ಬದುಕಬೇಕೆಂದು ಪೈಗಂಬರರ ಆಶಯವಾಗಿದೆ. ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಬಸವಣ್ಣನವರ ದಯೆ, ಕಾಯಕದ ಆಶಯದಂತೆ ಪೈಗಂಬರರು ಕಾರ್ಮಿಕರಿಗೆ ಅವನ ಬೆವರು ಆರುವ ಮುನ್ನ ಕೂಲಿ ಕೂಡಿ ಎಂದು ಶ್ರಮಿಕರ ಕಾಯಕದ ಮಹತ್ವ ತಿಳಿಸಿದ್ದರು. ಹಸಿದವರಿಗೆ ಅನ್ನ ಹಂಚುವ ಮಹತ್ವವನ್ನು ತಿಳಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ” ಎಂದು ಸ್ಮರಿಸಿದರು.

ಮಹಮ್ಮದ್ ಪೈಗಂಬರರ ಸಂದೇಶದ ಪ್ರತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ವಕೀಲರ ಸಂಘದ ನೂತನ ಅಧ್ಯಕ್ಷ “ಗುರು ಬಸವರಾಜ್ ಪ್ರವಾದಿ ಪೈಗಂಬರರ ಸಂದೇಶ ಕೇವಲ ಒಂದು ವರ್ಗಕ್ಕೆ ಸೀಮಿತವಾದ ಸಂದೇಶವಲ್ಲ. ಇದು ಸಮಾಜಕ್ಕೆ ಆದರ್ಶವಾದ್ದು. ಅವರ ಜನ್ಮದಿನ ಆಚರಣೆಯ ದಿನದಂದು ಈ ರೀತಿ ವಿನೂತನವಾಗಿ ಎಲ್ಲ ವಕೀಲರು ಸೇರಿ ಆಚರಿಸುತ್ತಿರುವುದು ಸಂತೋಷ ತಂದಿದೆ. ಇದೇ ರೀತಿ ಎಲ್ಲಾ ವರ್ಗ ಜಾತಿ, ಕೋಮುಗಳ ಜನ ಸೇರಿ ಸಹಬಾಳ್ವೆ ನಡೆಸಬೇಕಿದೆ. ಎಲ್ಲರೂ ಶಾಂತಿಯಿಂದ ಬದುಕಬೇಕಿದೆ” ಎಂದು ಕರೆ ನೀಡಿದರು.

ಹಿರಿಯ ವಕೀಲರಾದ ರಿಜ್ವಿಖಾನ್ ಮಾತನಾಡಿ “ಮಹಮದ್ ಪೈಗಂಬರರ 1500ನೇ ಜನ್ಮದಿನವನ್ನು ವಕೀಲರು ಸೇರಿ ಸಾರ್ವಜನಿಕವಾಗಿ ತಂಪು ಪಾನೀಯ ಹಂಚುವ ಮೂಲಕ ಆಚರಿಸುತ್ತಿದ್ದೇವೆ. ಪ್ರವಾದಿ ಪೈಗಂಬರರ ಸಂದೇಶದಂತೆ ವಿಶ್ವದಲ್ಲಿ ಎಲ್ಲರೂ ಒಟ್ಟಾಗಿ ಬದುಕಬೇಕು. ಶಾಂತಿ, ಸಹಬಾಳ್ವೆ, ಸಮೃದ್ಧಿ ನೆಲೆಸಬೇಕಿದೆ” ಎಂದು ಅಭಿಪ್ರಾಯಪಟ್ಟರು.

ಹಿರಿಯವಕೀಲರಾದ ಬಿಎಂ ಹನುಮಂತಪ್ಪ ಮಾತನಾಡಿ “ಎಲ್ಲ ವರ್ಗದ ವಕೀಲ ಸ್ನೇಹಿತರು ಸೇರಿ ಮಹಮದ್ ಪೈಗಂಬರರ ಜನ್ಮದಿನಾಚರಣೆ ಮಾಡುತ್ತಿರುವುದು ಸಂತಸ ತಂದಿದೆ. ಜಾತ್ಯತೀತ ಭಾರತದಲ್ಲಿ ಎಲ್ಲಾ ಧರ್ಮಗಳು ಸರ್ವ ಸಮಾನ. ಯಾವ ಧರ್ಮವು ಮೇಲು ಯಾವ ಧರ್ಮವು ಕೀಳಲ್ಲ. ಇಲ್ಲಿ ಎಲ್ಲರೂ ಸಮಾನರು” ಎಂದು ಅಭಿಪ್ರಾಯಪಟ್ಟರು.
ಇದೇವೇಳೆ ಮಾತನಾಡಿದ ಹಿರಿಯ ವಕೀಲ ಅನೀಸ್ ಪಾಷಾ “ಸಮಸ್ತ ಜಗತ್ತಿಗೆ ಶಾಂತಿ, ಸಹಬಾಳ್ವೆಯ ಸಂದೇಶ ನೀಡಿದ ಇಸ್ಲಾಂ ಧರ್ಮದ ಪ್ರವಾದಿ ಮಹಮ್ಮದ್ ಪೈಗಂಬರರ ಹುಟ್ಟುಹಬ್ಬವನ್ನು ಸ್ನೇಹಿತರು ತಂಪು ಪಾನೀಯ ಹಂಚುವುದರ ಮೂಲಕ ಆಚರಿಸಿ ಇಸ್ಲಾಂ ಧರ್ಮದ ಶಾಂತಿ ಮತ್ತು ಸಹಬಾಳ್ವೆಯ ಬಗ್ಗೆ ಎಲ್ಲರಿಗೂ ಅರಿವು ಮೂಡಿಸುತ್ತಿರುವುದು ಉತ್ತಮ ಕೆಲಸವಾಗಿದೆ” ಎಂದು ಸಂತಸ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ದಲಿತ ಕಾಲೋನಿಯ ಮೂಲಸೌಕರ್ಯ ಅಭಿವೃದ್ಧಿಗೆ ದಸಂಸ ಪ್ರತಿಭಟನೆ

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಕೆಜಿಕೆ ಸ್ವಾಮಿ, ಕಾರ್ಯದರ್ಶಿ ಮಂಜುನಾಥ, ಸಹಕಾರ್ಯದರ್ಶಿ ರೇವಣ್ಣ, ಖಜಾಂಚಿ ವನಜಾಕ್ಷಿ, ರಜ್ವಿಖಾನ್ ಬ್ರಿಗೇಡ್ ನ ಮುಖ್ಯಸ್ಥ ರಜ್ವಿಖಾನ್, ಹಿರಿಯ ವಕೀಲರಾದ ಮುಷ್ತಾಕ್ ಮಾಳ್ವಿ, ಸೈಯದ್ ಸಲೀಮ್, ಎಲ್ ದಯಾನಂದ್, ಎ ಎಮ್ ಹೆಗಡೆ, ಕೆ ಕೆ ರಂಗಸ್ವಾಮಿ, ಸಮದ್, ಖಲೀಲ್, ಆಯೋಜಕರಾದ ಮಂಜೂರ್ ಇಲಾಹಿ, ಆರಿಫ್, ಪೈಲ್ವಾನ್, ಅಕ್ಬರ್ ಪೈಲ್ವಾನ್, ಮಹಬೂಬ್, ವಸೀಮ್ ಖಾದ್ರಿ ಸೇರಿದಂತೆ ಇತರ ವಕೀಲರು ಹಾಜರಿದ್ದರು.
