ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ತನಿಖೆಯ ಬಗ್ಗೆ ವಕೀಲ ಎನ್ ಮಂಜುನಾಥ್ ಸುಳ್ಳು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದರು ಎಂದು ಆರೋಪಿಸಲಾಗಿದೆ. ಈ ಆರೋಪ ಸಂಬಂಧ ಮಂಜುನಾಥ್ ವಿರುದ್ಧ ಪ್ರಕರಣವೂ ದಾಖಲಾಗಿದೆ. ಪ್ರಕರಣದಲ್ಲಿ ಅವರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಬೆಳ್ತಂಗಡಿ ಪೊಲೀಸರಿಗೆ ಹೈಕೋರ್ಟ್ ಸೂಚಿಸಿದೆ.
ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಅನ್ನು ರದ್ದುಗೊಳಿಸುವಂತೆ ಕೋರಿ ಮಂಜುನಾಥ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ವಿಚಾರಣೆ ನಡೆಸಿದ್ದಾರೆ. ಮುಂದಿನ ವಿಚಾರಣೆವರೆಗೆ ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ನಿರ್ದೇಶಿಸಿ ಮಧ್ಯಂತರ ಆದೇಶ ಹೊರಡಿಸಿದ್ದಾರೆ.
ಮಂಜುನಾಥ್ ಅವರ ಅರ್ಜಿಯಲ್ಲಿ ಪ್ರತಿವಾದಿಗಳೆಂದು ಉಲ್ಲೇಖಿಸಿರುವ ದೂರುದಾರ, ಧರ್ಮಸ್ಥಳದ ನಿವಾಸಿ ರಘುರಾಮ ಶೆಟ್ಟಿ ಮತ್ತು ಬೆಳ್ತಂಗಡಿ ಪೊಲೀಸ್ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದೆ. ಅಕ್ಟೋಬರ್ 8ರಂದು ನಡೆಯಲಿರುವ ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಹಾಜರಾಗುವಂತೆ ಸೂಚಿಸಿದೆ.
ಜುಲೈ 30ರಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದ ಮಂಜುನಾಥ್, “ಪಾಯಿಂಟ್ ನಂಬರ್ 1ರಲ್ಲಿ 2 ಶವಗಳು, ಪಾಯಿಂಟ್ ನಂಬರ್ 2 ಮತ್ತು 3ರಲ್ಲಿ ತಲಾ 2 ಮೃತದೇಹಗಳು, ಪಾಯಿಂಟ್ ನಂಬರ್ 4 ಮತ್ತು 5ರಲ್ಲಿ ತಲಾ 6 ಶವಗಳು, ಪಾಯಿಂಟ್ ನಂಬರ್ 6 ಮತ್ತು 7ರಲ್ಲಿ ತಲಾ 8 ಮೃತದೇಹಗಳು, ಪಾಯಿಂಟ್ ನಂಬರ್ 9ರಲ್ಲಿ 6-7, ಪಾಯಿಂಟ್ ನಂಬರ್ 10ರಲ್ಲಿ 3, ಪಾಯಿಂಟ್ ನಂಬರ್ 11ರಲ್ಲಿ 9 ಹಾಗೂ ಪಾಯಿಂಟ್ ನಂಬರ್ 12ರಲ್ಲಿ 4-5 ಮೃತದೇಹಗಳು ಪತ್ತೆಯಾಗಿವೆ. ಪಾಯಿಂಟ್ ನಂಬರ್ 13ರಲ್ಲಿ ಇನ್ನೂ ಅಧಿಕ ಮೃತದೇಹಗಳು ದೊರೆಯಲಿವೆ” ಎಂದು ಹೇಳಿದ್ದರು. ಅವರ ವಿರುದ್ಧ ಧರ್ಮಸ್ಥಳದ ರಘುರಾಮ್ ಶೆಟ್ಟಿ ಪೊಲೀಸರಿಗೆ ದೂರು ನೀಡಿದ್ದರು.