ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಕಟ್ಟು ಕಥೆಗಳು ಧಾರವಾಹಿಯಾದರೂ ಆಶ್ಚರ್ಯವಿಲ್ಲ ಎಂದು ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿ ಟಿ ಬಿ ಜಯಚಂದ್ರ ಅವರು ತುಮಕೂರು ನಗರದಲ್ಲಿ ಹೇಳಿಕೆ ನೀಡಿದ್ದಾರೆ.
“ಧರ್ಮಸ್ಥಳದ ವಿಚಾರವಾಗಿ ಅಪಪ್ರಚಾರವನ್ನು ಮಾಡಿದ್ದು, ಧರ್ಮಸ್ಥಳದ ವಿಚಾರವಾಗಿ ಕಥೆಗಳನ್ನು ಕಟ್ಟಿದ್ದು, ಸೋಶಿಯಲ್ ಮಿಡಿಯಾ ಮುಖಾಂತರ ಜನಾಭಿಪ್ರಾಯವನ್ನ ತದ್ವಿರುದ್ಧ ಮಾಡುವಂಥದ್ದು, ಎಲ್ಲೋ ಒಂದು ಕಡೆ ಮಂಜುನಾಥನಿಗೆ ಬೇಸರವಾಗುವಂತ ರೀತಿ, ಧರ್ಮಾಧಿಕಾರಿಗಳಿಗೂ ಬೇಸರವಾಗುವಂತ ರೀತಿಯಲ್ಲಿ ವಾತಾವರಣ ಸೃಷ್ಟಿ ಮಾಡಿದ್ದು ಸ್ಥಳೀಯ ಸಂಘಟನೆಗಳು. ಆ ಸಂಘಟನೆಗಳು ಒಂದಲ್ಲ ಒಂದು ರೀತಿಯಲ್ಲಿ ಬಿಜೆಪಿ ಜತೆಗೆ ಗುರುತಿಸಿಕೊಂಡಿರುವಂತವು ಹಾಗೂ ಬಿಜೆಪಿಯ ಹಿಂಬಾಲಕರು, ಬಿಜೆಪಿ ಬಗ್ಗೆ ಅನುಕಂಪ ಇರುವಂತವರು” ಎಂದು ಹೇಳಿದರು.
“ಇದು ಬಹಳ ವರ್ಷ ಬೆಳೆದ ಮೇಲೆ ಇವರು ಈಗ ಸಾಲು ಸಾಲಾಗಿ ನಾ ಮುಂದು ತಾ ಮುಂದು ಎಂದು ಕಾರುಗಳಲ್ಲಿ ಹೋಗುತ್ತಿರುವುದನ್ನು ನೋಡಿದಾಗ ಎಲ್ಲೋ ಒಂದು ಕಡೆ ಬಿಜೆಪಿ ಗೊಂದಲವನ್ನು ಸೃಷ್ಟಿ ಮಾಡಿ ಅದರ ರಾಜಕೀಯ ಲಾಭವನ್ನು ಪಡೆದುಕೊಳ್ಳುವುದು, ರಾಜಕೀಯ ಲೇಪನ ಕೊಡುವುದು, ಎಲ್ಲೋ ಒಂದು ಕಡೆ ಆಡಳಿತ ಪಕ್ಷದ ವಿರುದ್ಧ ಎತ್ತಿ ಕಟ್ಟುವುದನ್ನು ಮಾಡುತ್ತಿದೆ” ಎಂದು ಹೇಳಿದರು.
“ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷ ಟೀಕೆ ಮಾಡಬೇಕು, ಆಡಳಿತ ಪಕ್ಷವನ್ನು ತಿದ್ದುವಂತಹ ಕೆಲಸ ಮಾಡಬೇಕು. ಆದರೆ ಅವರು ಪ್ರತಿ ಹಂತದಲ್ಲೂ ಇಂತಹ ಧರ್ಮ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಧರ್ಮ ಕ್ಷೇತ್ರಗಳ ಬಗ್ಗೆ ಅಪನಂಬಿಕೆ ಬರುವಂತ ರೀತಿಯಲ್ಲಿ ಮಾಡುತ್ತಿದ್ದಾರೆ. ಇದು ಬಹುಶಃ ಯಾರಿಗಲ್ಲದೆ ಇದ್ದರೂ ಮಂಜುನಾಥನಿಗೆ ಮೆಚ್ಚುಗೆಯಾಗಲಾರದು” ಎಂದರು.
“ಯಾವ ಹಿನ್ನೆಲೆಯಲ್ಲಿ ಎಸ್ಐಟಿ ರಚನೆ ಆಯ್ತು. ಬಹುಶಃ ಎಸ್ಐಟಿ ರಚನೆ ಆಗದೇ ಇದ್ದಿದ್ದರೆ ಸತ್ಯಾಂಶ ಆಚೆ ಬರುತ್ತಿರಲಿಲ್ಲ. ಇವರ ಕಟ್ಟುಕಥೆಗಳು ದಿನ ದಿನಕ್ಕೂ ಮಾಧ್ಯಮಗಳಲ್ಲಿ ಬರುತ್ತಿರುವುದನ್ನು ನೋಡಿದಾಗ, ಅವರಿಗೆ ಮಾನಸಿಕವಾಗಿ ಎಷ್ಟು ತೇಜೋವಧೆ ಆಗಿದೆ ಎನ್ನುವಂತದ್ದನ್ನು ಯೋಚನೆ ಮಾಡಬೇಕಾಗಿದೆ. ಆ ತೇಜೋವಧೆ ಮಾಡುವಂತ ಕೆಲಸಕ್ಕೆ ಹಿಂಬಾಲಕರು ಯಾರಿದ್ದರು, ಹಿನ್ನೆಲೆ ಗಾಯಕರು ಯಾರಿದ್ದರು. ಈಗ ಎಸ್ಐಟಿ ಆಗಿಹೋಗಿದೆ ಕಥೆಗಳು, ಪುರಾಣಗಳು ಹೊರಗೆ ಬರುತ್ತಿವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಜಮಖಂಡಿ | ಭೂಸ್ವಾಧೀನ ಪರಿಹಾರ ನೀಡದ ಹಿನ್ನೆಲೆ ಉಪವಿಭಾಗಾಧಿಕಾರಿ ವಾಹನ ಜಪ್ತಿ
“ಬಹುಶಃ ಅಲ್ಲಿ ಬರುತ್ತಿರುವ ಸೀಕ್ವೆನ್ಸ್‌ಗಳನ್ನ ನೋಡಿದಾಗ, ಇನ್ಮುಂದೆ ಧಾರವಾಹಿಗಳಿಗೆ, ಸಿನಿಮಾಗಳಿಗೆ, ಮತ್ತೊಂದಕ್ಕೆ ಅದೇ ಆಧಾರವಾದರೂ ಆಶ್ಚರ್ಯ ಪಡಬೇಕಿಲ್ಲ. ಅಲ್ಲದೆ ಅವುಗಳನ್ನು ಹೊಸ ಹೊಸ ಕಥೆಗಳನ್ನು ಸೃಷ್ಟಿ ಮಾಡಲೂ ಆಧಾರ ಮಾಡಿಕೊಳ್ಳಬಹುದು. ನನ್ನ ಬಯಕೆ ಹೇಳಿದರೆ ಎಸ್ಐಟಿ ಒಂದು ನಿರ್ಧಾರಕ್ಕೆ ಬರುತ್ತದೆ. ಇದರ ಜತೆಗೆ ಹಿಂಬಾಲಕರು ಯಾರೇ ಇದ್ದರೂ ಕೂಡ ಯಾವುದೇ ಪಕ್ಷದವರು ಆದರೂ ಕೂಡ ಅವರಿಗೆ ತಕ್ಕ ಶಿಕ್ಷೆ ಆಗಬೇಕು” ಎಂದು ಆಗ್ರಹಿಸಿದರು.
“ತಕ್ಕ ಶಿಕ್ಷೆಯಾಗುವಂಥ ನಿಟ್ಟಿನಲ್ಲಿ ಎಸ್ಐಟಿ ತನಿಖೆ ಮುಂದುವರಿಯುತ್ತದೆ. ಅಂತಿಮವಾಗಿ ಮಂಜುನಾಥ ಮೆಚ್ಚುವಂತಹ ಸಮಾಧಾನಕರವಾದ ತೀರ್ಪು ಬರುತ್ತದೆ” ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.