ಧರ್ಮಸ್ಥಳದಲ್ಲಿ ಅನಧಿಕೃತ ಶವ ಹೂತ ಪ್ರಕರಣದಲ್ಲಿ 3ನೇ ದಿನದ ಕಳೇಬರ ಪತ್ತೆ ಕಾರ್ಯದಲ್ಲಿ, ದೂರುದಾರ ಹೇಳಿದ 6ನೇ ಪಾಯಿಂಟ್‌ನಲ್ಲಿ ಭೂಮಿ ಅಗೆದಾಗ ಅಸ್ಥಿಪಂಜರದ ಕುರುಹು ಸಿಕ್ಕಿರುವುದು ದೃಢವಾಗಿದೆ.
ಸ್ಪಾಟ್ 6ರಲ್ಲಿ ಸಿಕ್ಕ ಮೂಳೆಗಳನ್ನು ಎಸ್‌ಐಟಿ ಅಧಿಕಾರಿಗಳು ಎರಡು ಪ್ಲಾಸ್ಟಿಕ್ ಡಬ್ಬದಲ್ಲಿ ಸೀಲು ಮಾಡಿ ಕೊಂಡೊಯ್ದಿದ್ದಾರೆ. ಎಸ್‌ಐಟಿ ಆ ಮೂಳೆಗಳನ್ನು ವೈಜ್ಞಾನಿಕ ತನಿಖೆಗೊಳಪಡಿಸಲಿದ್ದು, ಎಫ್‌ಎಸ್‌ಎಲ್ ಟೀಮ್ ಎರಡು ಬಾಕ್ಸ್‌ನಲ್ಲಿ ಪ್ಯಾಕ್ ಮಾಡಿ ತೆಗೆದುಕೊಂಡು ಹೋಗಿದ್ದಾರೆ.
ಉತ್ಖನನ ಕಾರ್ಯಕ್ಕೆ ಕರೆದೊಯ್ದಿದ್ದ ಕಾರ್ಮಿಕರನ್ನು ಗುರುವಾರ ಸಂಜೆ 6ರ ಸುಮಾರಿಗೆ ಹೊರಕ್ಕೆ ಕಳುಹಿಸಿದ್ದ ಅಧಿಕಾರಿಗಳು, ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿದ ಬಳಿಕ ಹಿಂದಿರುಗಿದ್ದಾರೆ. ಬರುವ ವೇಳೆ ಎರಡು ಡಬ್ಬಗಳಲ್ಲಿ ಸಿಕ್ಕಿರುವ ಮೂಳೆಗಳನ್ನು ಸೀಲು ಮಾಡಿ, ಹೊರತಂದಿದ್ದಾರೆ.
ಮೂರನೇ ದಿನವಾದ ಗುರುವಾರ ಬೆಳಗ್ಗೆ ಮೂಳೆಗಳು ಪತ್ತೆಯಾಗಿರುವುದಾಗಿ ವರದಿಯಾಗಿತ್ತು. ಸಂಜೆಯ ವೇಳೆಗೆ ಎಷ್ಟು ಮೂಳೆಗಳು ಸಿಕ್ಕಿದೆ ಎಂಬುದರ ಬಗ್ಗೆ ಎಸ್‌ಐಟಿ ಅಧಿಕಾರಿಗಳು ಅಧಿಕೃತ ಪ್ರಕಟಣೆಯನ್ನು ಹೊರಡಿಸಿಲ್ಲ. ಸದ್ಯ ಮೂರನೇ ದಿನದ ಉತ್ಖನನ ಕಾರ್ಯವನ್ನು ಎಸ್‌ಐಟಿ ಸ್ಥಗಿತಗೊಳಿಸಿದ್ದು, ಶುಕ್ರವಾರ ಸ್ಪಾಟ್ 7ರಲ್ಲಿ ಉತ್ಖನನ ಕಾರ್ಯವನ್ನು ನಡೆಸಲಿದೆ ಎಂದು ತಿಳಿದುಬಂದಿದೆ.
