ಈಗಾಗಲೇ ಎಸ್.ಟಿ. ಪಟ್ಟಿಯಲ್ಲಿ 51 ಜಾತಿಗಳಿವೆ. ವಾಲ್ಮೀಕಿ ಸಮುದಾಯದ ಜನಸಂಖ್ಯೆ 40 ಲಕ್ಷಕ್ಕೂ ಹೆಚ್ಚಿದ್ದು, ಬೇರೆ ಜಾತಿ ಸೇರಿಸಿದರೆ ನಮಗೆ ಅನ್ಯಾಯವಾಗುತ್ತದೆ ಎಂದು ಎಸ್.ಟಿ. ಸಮಾಜದ ತಾಲೂಕಾಧ್ಯಕ್ಷ ರಾಜು ದೊಡ್ಡಶಂಕರ ಪರಿಶಿಷ್ಟ ಪಂಗಡ (ಎಸ್‌ಟಿ)ದ ಪಟ್ಟಿಗೆ ಕುರುಬ ಹಾಗೂ ಇತರೆ ಸಮಾಜಗಳನ್ನು ಸೇರಿಸಲು ರಾಜ್ಯ ಸರ್ಕಾರ ನಡೆಸುತ್ತಿರುವ ಹುನ್ನಾರ ಮತ್ತು ನಕಲಿ ಜಾತಿ ಪ್ರಮಾಣ ಪತ್ರ ವಿತರಣೆಯನ್ನು ವಿರೋಧಿಸಿ ಅಖೀಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಮತ್ತು ವಾಲ್ಮೀಕಿ ಸಮಾಜದ ಮುಖಂಡರು ಕುಂದಗೋಳದಲ್ಲಿ ನಡೆಸಿದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದರು.
ಪಟ್ಟಣದ ಗಾಳಿ ಮರೇಮ್ಮ ದೇವಸ್ಥಾನದಿಂದ ತಹಶಿಲ್ದಾರ್ ಕಚೇರಿಯವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಬೇರೆ ಸಮುದಾಯಗಳ ಸೇರ್ಪಡೆಯಿಂದ ಮೂಲ ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಂತರ ತಹಶಿಲ್ದಾರ್ ರಾಜು ಮಾವರಕರರಿಗೆ ಮನವಿ ಸಲ್ಲಿಸಿದರು. ಈ ವೇಳೆ ಪ್ರತಿಭಟನೆ ನೇತೃತ್ವ ವಹಿಸಿದ್ದ ಅವರು ಮಾತನಾಡುತ್ತಾ, ನಮ್ಮ ಶಾಸಕರು ಮತ್ತು ಸಚಿವರು ಸಮಾಜಕ್ಕೆ ಅನ್ಯಾಯವಾದಾಗ ಮಾತನಾಡುತ್ತಿಲ್ಲ. ನಮ್ಮ ಬೇಡಿಕೆ ಈಡೇರಿಸದಿದ್ದರೆ, ರಾಜನಹಳ್ಳಿ ಪ್ರಸನ್ನಾನಂದ ಪುರಿ ಮಹಾಸ್ವಾಮಿಗಳ ಸಮ್ಮುಖದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಬಸವರಾಜ ನಾಯ್ಕರ ಮಾತನಾಡಿ, ಮೀಸಲಾತಿ ಹೆಚ್ಚಳಕ್ಕಾಗಿ ಪ್ರಸನ್ನಾನಂದ ಪುರಿ ಮಹಾಸ್ವಾಮಿಗಳು ನಡೆಸಿದ್ದ ಪಾದಯಾತ್ರೆ ಫಲಕ್ಕೆ ಈಗಿನ ಸರ್ಕಾರ ಧಕ್ಕೆ ತರುತ್ತಿದೆ. ಸರ್ಕಾರ ಬೇರೆ ಸಮುದಾಯಗಳನ್ನು ಎಸ್.ಟಿ. ಪಟ್ಟಿಗೆ ಸೇರಿಸಲು ಮುಂದಾಗಿರುವುದು ಸರಿಯಲ್ಲ. ನಮ್ಮ ಜೊತೆಗೆ ಇಲ್ಲ ಸಲ್ಲದವರನ್ನು ಸೇರಿಸಿ ಮೀಸಲಾತಿ ನೀಡಲು ಹೊರಟಿರುವ ಸರ್ಕಾರಕ್ಕೆ ದಿಕ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ಧಿ ಓದಿದ್ದೀರಾ? ಧಾರವಾಡ | ಹುದ್ದೆಗಳ ಭರ್ತಿಗೆ ಆಗ್ರಹಿಸಿ ಜುಬಲಿ ವೃತ್ತದಲ್ಲಿ ಪ್ರತಿಭಟನೆ
ಈ ಸಂದರ್ಭದಲ್ಲಿ ರವಿ ದೊಡ್ಮನಿ, ಈರಣ್ಣ ಗೌಡನಾಯ್ಕರ, ಅರ್ಜುನ್ ತಳವಾರ, ಶಿದ್ದಲಿಂಗಪ್ಪ ಕರಿಯಮ್ಮನವರ, ಶಂಕರಣ್ಣ ಹಿತ್ತಲಮನಿ, ಬಸವರಾಜ ಗೋವಿಂದಪ್ಪನವರ, ಸುಭಾಷ ಮುತಗಿ, ಮಂಜು ಹುಡೇದ, ಶೇಖರ ತಳವಾರ, ಶೇಖಣ್ಣ ಗುಂಜಳ, ಮಂಜುನಾಥ ಇಚ್ಚಂಗಿ, ನಾರಾಯಣ ಕುರಹಟ್ಟಿ, ಯಲ್ಲಪ್ಪ ಬಾರಕೇರ, ರಾಘವೇಂದ್ರ ನಾಯ್ಕರ, ಮತ್ತಿತರರು.