2025-26 ನೇ ಸಾಲಿನಲ್ಲಿ, ಧಾರವಾಡ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನ ಬಿತ್ತನೆ ಬೀಜಗಳನ್ನು ವಿತರಿಸಲು ಒಟ್ಟು 14 ರೈತ ಸಂಪರ್ಕ ಕೇಂದ್ರಗಳು ಹಾಗೂ 13 ಹೆಚ್ಚುವರಿ ಬೀಜ ವಿತರಣಾ ಕೇಂದ್ರಗಳನ್ನು ಒಳಗೊಂಡಂತೆ ಒಟ್ಟು 27 ಬೀಜ ವಿತರಣಾ ಕೇಂದ್ರಗಳನ್ನು ಗುರುತಿಸಲಾಗಿರುತ್ತದೆ ಎಂದು ಕೃಷಿ ಇಲಾಖೆಯಿಂದ ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿಗೆ ವಿತರಿಸುವ ವಿವಿಧ ಬೀಜಗಳನ್ನು ರೈತರಿಗೆ ವಿತರಿಸಿದ ಕಾರ್ಮಿಕ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಮಾತನಾಡಿದರು.
ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು ಹಿಂಗಾರು ಬಿತ್ತನೆ ಪ್ರಾರಂಭವಾಗಿದೆ. ಕೃಷಿ ಇಲಾಖೆಯು ಹಿಂಗಾರು ಹಂಗಾಮಿಗೆ ಕಡಲೆ, ಗೋಧಿ, ಜೋಳ, ಮೆಕ್ಕೆಜೋಳ, ಶೇಂಗಾ ಹಾಗೂ ವಿವಿಧ ಬೆಳೆಗಳ ಬೀಜಗಳನ್ನು ರಿಯಾಯಿತಿ ದರದಲ್ಲಿ ರೈತರಿಗೆ ಮಾರಾಟ ಮಾಡಲಾಗುತ್ತಿದೆ. ರೈತರು ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಧಾರವಾಡ ಜಿಲ್ಲೆಯ ಬೀಜ ವಿತರಣಾ ಕೇಂದ್ರದ ವಿವರ:
ರೈತ ಸಂಪರ್ಕ ಕೇಂದ್ರಗಳಾದ ಧಾರವಾಡ ತಾಲೂಕಿನಲ್ಲಿ ಅಳ್ಳಾವರ, ಧಾರವಾಡ, ಅಮ್ಮಿನಭಾವಿ, ಹೆಚ್ಚುವರಿ ಬೀಜ ವಿತರಣಾ ಕೇಂದ್ರ ನರೇಂದ್ರ, ಹೆಬ್ಬಳ್ಳಿ, ಉ.ಬೆಟಗೇರಿ. ಕಲಘಟಗಿ ತಾಲೂಕಿನಲ್ಲಿ ಕಲಘಟಗಿ, ತಬಕದಹೊನ್ನಳ್ಳಿ, ದುಮ್ಮವಾಡ. ಹುಬ್ಬಳ್ಳಿ ತಾಲೂಕಿನಲ್ಲಿ ಚಬ್ಬಿ ಶಿರಗುಪ್ಪಿ, ಹುಬ್ಬಳ್ಳಿ. ಹೆಚ್ಚುವರಿ ಬೀಜ ವಿತರಣಾ ಕೇಂದ್ರ ನೂಲ್ವಿ, ಕುಸುಗಲ್ಲ, ಕೋಳಿವಾಡ, ಬಿಡನಾಳ. ಕುಂದಗೋಳ ತಾಲೂಕಿನಲ್ಲಿ ಕುಂದಗೋಳ, ಸಂಶಿ. ಹೆಚ್ಚುವರಿ ಬೀಜ ವಿತರಣಾ ಕೇಂದ್ರ ಯಲಿವಾಳ, ಶಿರೂರು, ನವಲಗುಂದ ತಾಲೂಕಿನಲ್ಲಿ ಅಣ್ಣಿಗೇರಿ, ಮೊರಬ್ಬ ಯರಗುಪಿ, ಹೆಚ್ಚುವರಿ ಬೀಜ ವಿತರಣಾ ಕೇಂದ್ರ ಶಲವಡಿ, ನವಲಗುಂದಗಳಲ್ಲಿ ರೈತರಿಗೆ ಬೀಜ ವಿತರಣೆ ಮಾಡಲಾಗುತ್ತಿದೆ.
ರೈತರು ಕಡಲೆ, ಗೋಧಿ, ಜೋಳ, ಮೆಕ್ಕೆಜೋಳ, ಶೇಂಗಾ ಹಾಗೂ ವಿವಿಧ ಬೆಳೆಗಳನ್ನು ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡುತ್ತಾರೆ. ಹಾಗಾಗಿ ಇಲಾಖೆ ವತಿಯಿಂದ ಸಹಾಯಧನದಡಿ ಬೀಜ ವಿತರಣೆ ಮಾಡಲು ಕಡಲೆ 28,799 ಕ್ವಿಂಟಲ್, ಗೋಧಿ 385 ಕ್ವಿಂಟಲ್, ಜೋಳ 300 ಕ್ವಿಂಟಲ್, ನೆಲಗಡಲೆ 276 ಕ್ವಿಂಟಲ್ ಹಾಗೂ ಇನ್ನಿತರೆ ಬೀಜಗಳನ್ನು ಒಳಗೊಂಡಂತೆ ಒಟ್ಟು 29,906 ಕ್ವಿಂಟಲ್ ಬಿತ್ತನೆ ಬೀಜ ವಿತರಣೆ ಗುರಿಯನ್ನು ಹೊಂದಲಾಗಿದೆ. ಈಗಾಗಲೇ ವಿವಿಧ ಇನ್ನಿತರೆ ಬೀಜ ಉತ್ಪಾದನಾ ಸಂಸ್ಥೆಗಳ ಬೀಜಗಳನ್ನು ಎಲ್ಲ ಬೀಜ ವಿತರಣಾ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದ್ದು ವಿತರಣೆ ಪ್ರಾರಂಭವಾಗಿದೆ ಎಂದು ಹೇಳಿದರು.
ಈ ಸುದ್ಧಿ ಓದಿದ್ದೀರಾ? ಧಾರವಾಡ | ಸ್ವಸಹಾಯ ಗುಂಪುಗಳ ಮಹಿಳೆಯರೇ ನಿರ್ವಹಿಸುವ ಅಕ್ಕ-ಕಫೆ ಉದ್ಘಾಟನೆ
ಈ ಸಂದರ್ಭಲ್ಲಿ ಶಾಸಕ ಎನ್.ಎಚ್.ಕೋನರಡ್ಡಿ, ಪ್ರಭಾರ ಜಿಲ್ಲಾಧಿಕಾರಿ ಜಿ.ಪಂ.ಸಿಇಓ ಭುವನೇಶ ಪಾಟೀಲ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಕೃಷಿ ಇಲಾಖೆ ಜಂಟಿ ನಿದೇರ್ಶಕ ಮಂಜುನಾಥ ಅಂತರವಳ್ಳಿ ಸೇರಿದಂತೆ ಕೃಷಿ ಇಲಾಖೆ ಅಧಿಕಾರಿಗಳು, ರೈತ ಮುಖಂಡರು, ರೈತರು ಹಾಗೂ ಇತರರು ಇದ್ದರು.