ಪೌರಾಡಳಿತ ಇಲಾಖೆಯಿಂದ ನಗರೋತ್ಥಾನ ಯೋಜನೆಯಡಿ ಧಾರವಾಡದ ಕಲಘಟಗಿ ಪಟ್ಟಣ ಪಂಚಾಯತ ಕಟ್ಟಡ ಹಾಗೂ ಗ್ರಂಥಾಲಯ ನಿರ್ಮಾಣಕ್ಕೆ ನಗರದಲ್ಲಿ ಮೀಸಲಿರುವ ಜಾಗದಲ್ಲಿ ಅಲೆಮಾರಿ ಜನಾಂಗದವರು ಅನಧಿಕೃತವಾಗಿ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿರುವ ಸ್ಥಳದಿಂದ ಅವರನ್ನು ಒಕ್ಕಲೆಬ್ಬಿಸದಂತೆ ಸಚಿವ ಸಂತೋಷ್ ಲಾಡ್‌ಗೆ ಮನವಿ ಮಾಡಲಾಗಿದೆ.
ಸ್ಥಳ ಒತ್ತುವರಿಯನ್ನು ಪಟ್ಟಣ ಪಂಚಾಯತ ಅಧಿಕಾರಿಗಳು ಇತ್ತೀಚೆಗೆ ತೆರವುಗೊಳಿಸಿದ್ದರು. ಈ ಕುರಿತು ಕಲಘಟಗಿ ಪಟ್ಟಣದಲ್ಲಿ ಸಂತ್ರಸ್ಥರಿಂದ ಸಚಿವ ಸಂತೋಷ ಲಾಡ್ ಮನವಿ ಸ್ವೀಕರಿಸಿದರು.
ಈ ವೇಳೆ ಮಾತನಾಡಿದ ಅವರು, “ಈಗಾಗಲೇ ಹಲವು ಬಾರಿ ಅಲೆಮಾರಿ ಕುಟುಂಬಗಳಿಗೆ ಶಾಶ್ವತ ಮನೆ ಹೊಂದಲು ಪಟ್ಟಣ ಪಂಚಾಯತಿಗೆ ಮನವಿ ಸಲ್ಲಿಸಲು ಸೂಚಿಸಲಾಗಿತ್ತು. ಆದರೆ ಯಾರು ಸಹ ಇಲ್ಲಿವರೆಗೆ ಮನೆ ಕೇಳಿ ಅರ್ಜಿ ಸಲ್ಲಿಸಿಲ್ಲ. ಪಟ್ಟಣದ ಖಾಲಿ ಇರುವ ಜಾಗಗಳಲ್ಲಿ ಈ ರೀತಿ ಗುಡಿಸಲು ಹಾಕಿರುವುದು ತಪ್ಪು. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ, ಸರಕಾರಿ ಕಟ್ಟಡಗಳಿಗೆ ಮೀಸಲಿಟ್ಟು ಸ್ಥಳ ಒತ್ತುವರಿ, ಅನಧಿಕೃತ ಬಳಕೆ ಮಾಡಿದರೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸುತ್ತಾರೆ” ಎಂದರು.

ಅನಧಿಕೃತವಾಗಿ ಶೆಡ್ ನಿರ್ಮಿಸಿದ್ದ, ತೆರವುಗೊಳಿಸಿದ ಕುಟುಂಬಗಳಿಗೆ ಗಾಂಧಿನಗರ ಹಾಗೂ ಇತರ ಸ್ಥಳಗಳಲ್ಲಿ ತಾತ್ಕಾಲಿಕ ಆಶ್ರಯ ಕಲ್ಪಿಸಲಾಗಿದೆ. ಅಲೆಮಾರಿ ಜನಾಂಗದ ಬಾಧಿತ 13 ಕುಟುಂಬಗಳ ವಾಸಸ್ಥಳ ಹಾಗೂ ಇತರ ಅಧಿಕೃತ ದಾಖಲೆಗಳನ್ನು ಪಡೆದುಕೊಂಡು, ಸ್ಥಾನಿಕ ಚೌಕಸಿ ಮಾಡಿಕೊಂಡು ಪಟ್ಟಣ ಪಂಚಾಯತ್ ಆಡಳಿತ ಮಂಡಳಿ ಸಭೆಯಲ್ಲಿ ಅನುಮೋದಿಸಿ, ನಿವೇಶನ ನೀಡಲು ತಕ್ಷಣ ಕ್ರಮ ವಹಿಸಲು ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ” ಎಂದು ತಿಳಿಸಿದರು.
ಇದನ್ನೂ ಓದಿ: ಧಾರವಾಡ | ಗಾಂಧಿ ಜಯಂತಿ ಅಂಗವಾಗಿ ಜಿಲ್ಲಾ, ರಾಜ್ಯಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ
ಅಲೆಮಾರಿ ಕುಟುಂಬಗಳು ಈಗ ತಾತ್ಕಾಲಿಕವಾಗಿ ನೆಲೆಸಿರುವ ಸ್ಥಳಗಳಿಂದ ಒಕ್ಕಲೆಬ್ಬಿಸದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿ, ಅರ್ಹರಿಗೆ ಆದಷ್ಟು ಬೇಗ ನಿವೇಶನ ನೀಡಲು ಕ್ರಮವಹಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ತಹಶೀಲ್ದಾರ ಬಸವರಾಜ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಚಂದ್ರಶೇಖರ. ಬಿ. ಹಾಗೂ ಇತರರು ಇದ್ದರು.