ಇಂದಿನ ಮಕ್ಕಳಲ್ಲಿನ ಪ್ರತಿಭೆ ಹೊರತರುವ ಕಾರ್ಯ ಮಾಡಬೇಕಿರುವುದು ಅತ್ಯವಶ್ಯವಾಗಿದ್ದು, ಆ ಹಿನ್ನೆಲೆಯಲ್ಲಿ ಚಿಗುರು ವೇದಿಕೆ ಈ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಧಾರವಾಡ ರಂಗಾಯಣ ನಿರ್ದೇಶಕ ಡಾ. ರಾಜು ತಾಳಿಕೋಟೆ ಹೇಳಿದರು.
ತಾಲೂಕಿನ ಕಲಕೇರಿ ಸಂಗೀತ ವಿದ್ಯಾಲಯದ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧಾರವಾಡ ವತಿಯಿಂದ ಚಿಗುರು ಬಾಲ ಪ್ರತಿಭೆಗಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಗದುಗಿನ ಪಂಚಾಕ್ಷರಿ ಗವಾಯಿಗಳ ಆಶ್ರಮದ ಮಾದರಿಯಂತೆ ಕಲಕೇರಿ ಸಂಗೀತ ವಿದ್ಯಾಲಯದ ಪಾಠಶಾಲೆಗಳು ಜರುಗುತ್ತಿರುವುದು ಬಹಳ ಖುಷಿ ತಂದಿದೆ. ಈ ಸಂಗೀತ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ಪಂ.ಮಲ್ಲಿಕಾರ್ಜುನ ಮನಸೂರ, ಪಂ.ಬಸವರಾಜರಾಜಗುರು, ಡಾ.ಗಂಗೂಬಾಯಿ ಹಾನಗಲ್ ಅವರಂತೆ ಆಗಲಿ” ಎಂದು ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಮಾತನಾಡಿ, “ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ, ಮಕ್ಕಳಲ್ಲಿನ ಕಲೆ, ಸಾಹಿತ್ಯ, ಸಂಗೀತ, ನೃತ್ಯ ಸೇರಿದಂತೆ ವಿವಿಧ ಕಲಾ ಪ್ರಕಾರಗಳಲ್ಲಿ ಆಸಕ್ತಿ ವಹಿಸುವಂತೆ ಪ್ರೋತ್ಸಾಹ ನೀಡುವ ಕೆಲಸ ನಿರಂತರವಾಗಿ ಮಾಡುತ್ತಾ ಬರುತ್ತಿದೆ” ಎಂದರು.
ಇದನ್ನೂ ಓದಿ: ಧಾರವಾಡ | ವಿದ್ಯಾರ್ಥಿಗಳು ಕಷ್ಟಪಟ್ಟು ಓದದೆ, ಇಷ್ಟಪಟ್ಟು ಓದಬೇಕು: ಡಾ. ರುದ್ರೇಶ್ ಮೇಟಿ ಸಲಹೆ
ಬಾಲ ಪ್ರತಿಭೆಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಕೇರಿ ಸಂಗೀತ ವಿದ್ಯಾಯಲದ ಕುಮಾರಿ ಕೀರ್ತನಾ ನಾಯಕ್ ಮತ್ತು ವೃಂದದವರಿಂದ ಸುಗಮ ಸಂಗೀತ ನಡೆಸಿಕೊಟ್ಟರು. ಕು. ತುಳಸಿ ಮೊಕಾಶಿ ಮತ್ತು ತಂಡದವರಿಂದ ಜಾನಪದ ಗೀತೆಗಳು, ಕು. ದೀನಾ ರಾಘವೇಂದ್ರ ಅರಿವೇಡ್ ಮತ್ತು ತಂಡದಿಂದ ಸಮೂಹ ನೃತ್ಯ ಹಾಗೂ ಕು. ಪ್ರಣವ್ ಕಾಳೇನವರ ಮತ್ತು ತಂಡದಿಂದ ನಾಟಕ ಹಾಗೂ ಕು. ನಮನ ಬಿ ಕಲೆಗಾರ ಮತ್ತು ವೃಂದದಿಂದ ಶಾಸ್ತ್ರೀಯ ಸಂಗೀತ ಗಾಯನ ಮತ್ತು ಕು. ಮನಸ್ವಿ ಎಚ್.ಜೆ ಅವರು, ಏಕಪಾತ್ರಾಭಿನಯ ಪ್ರದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಕಲಕೇರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಭೀಮವ್ವ ಮರೇವಾಡ, ಉಪಾಧ್ಯಕ್ಷ ಮಂಜುನಾಥ ಇದ್ಲಿ, ಗ್ರಾಮ ಪಂಚಾಯತ್ ಸದಸ್ಯರು, ಕಲಕೇರಿ ಸಂಗೀತ ವಿದ್ಯಾಲಯದ ಕಾರ್ಯದರ್ಶಿ ಆ್ಯಡಮ್ ಉಡ್ವರ್ಡ್, ಹಿರಿಯ ರಂಗಭೂಮಿ ಕಲಾವಿದ ವೀರಣ್ಣ ಪತ್ತಾರ, ಪ್ರಭು ಹಂಚಿನಾಳ ಉಪಸ್ಥಿತರಿದ್ದರು.