ಧಾರವಾಡದ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಮಧ್ಯರಾತ್ರಿ ವಾಣಿಜ್ಯ ಬಳಕೆ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಭಾರೀ ಪ್ರಮಾಣದ ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಯರಗುಪ್ಪಿ ಗ್ರಾಮದ ಸಂಜೀವರೆಡ್ಡಿ ಎಂಬುವವರಿಗೆ ಸೇರಿದ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ಮಧ್ಯರಾತ್ರಿ ವೇಳೆಗೆ ಹೋಟೆಲ್‌ನ ಒಳಗಿದ್ದ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಹೋಟೆಲ್‌ನ ಶೆಟರ್ ಮುರಿದು ಹೋಗಿದ್ದು, ಒಳಭಾಗದಲ್ಲಿದ್ದ ಎಲ್ಲ ಸಾಮಗ್ರಿಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.
ಸಿಲಿಂಡರ್ ಸ್ಫೋಟಕ್ಕೆ ಹೋಟೆಲ್‌ನಲ್ಲಿದ್ದ ನಿತ್ಯ ಬಳಕೆಯ ಪಾತ್ರೆಗಳು, ಟೇಬಲ್‌ಗಳು, ಕಿರಾಣಿ ವಸ್ತುಗಳು, ಇತರೆ ಹೋಟೆಲ್ ಸಾಮಗ್ರಿಗಳು ಮತ್ತು ಹೋಟೆಲ್ ಒಳಗೆ ನಿಲ್ಲಿಸಲಾಗಿದ್ದ ಬೈಕ್ ಸೇರಿದಂತೆ ಅಂದಾಜು 6 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಹಾಳಾಗಿವೆ ಎಂದು ಹೋಟೆಲ್ ಮಾಲೀಕರು ಮತ್ತು ಕುಟುಂಬಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ: ಧಾರವಾಡ | ನವಜಾತ ಗಂಡು ಮಗುವಿನಲ್ಲಿ ಭ್ರೂಣ ಪತ್ತೆ
ಈ ಘಟನೆ ಮಧ್ಯರಾತ್ರಿ ಸಂಭವಿಸಿದ್ದರಿಂದ ಯಾವುದೇ ಜೀವಹಾನಿ ಸಂಭವಿಸದಿರುವುದು ನೆಮ್ಮದಿಯ ಸಂಗತಿ. ಘಟನೆ ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮತ್ತು ಮುಂದಿನ ಕ್ರಮ ಕೈಗೊಂಡಿದ್ದಾರೆ.