ಭೋವಿ ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ನಡೆಯುತ್ತಿರುವ ಅನ್ಯಾಯವನ್ನು ಖಂಡಿಸಿ, ಗುರುವಾರ ಕುಂದಗೋಳ ತಹಶೀಲ್ದಾರ ಕಚೇರಿ ಆವರಣದಲ್ಲಿ ಭೋವಿ ಸಮಾಜದವರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಪ್ರತಿಭಟನಾಕಾರರು ಸಲ್ಲಿಸಿದ ಮನವಿಯಲ್ಲಿ, ಭೋವಿ ಸಮಾಜವನ್ನು ಸರಕಾರವೇ 1950ರಲ್ಲಿಯೇ ಪರಿಶಿಷ್ಟ ಜಾತಿಗೆ ಸೇರಿಸಿ ಆದೇಶ ಹೊರಡಿಸಿದೆ. ಹಲವಾರು ಬಾರಿ ಸರ್ಕಾರಿ ಸುತ್ತೊಲೆಗಳು ಹೊರಬಿದ್ದಿದ್ದರೂ, ಪ್ರಸ್ತುತ ತಹಶೀಲ್ದಾರರು ಪ್ರಮಾಣ ಪತ್ರ ನೀಡಲು ನಿರಾಕರಿಸುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳು ಅನ್ಯಾಯಕ್ಕೆ ಗುರಿಯಾಗುತ್ತಿದ್ದಾರೆ. ಹಿಂದಿನ ತಹಶೀಲ್ದಾರರು ನಾಗರಿಕ ಹಕ್ಕು ಜಾರಿ ನಿರ್ದೇಶನದ ಆಧಾರದ ಮೇಲೆ ತನಿಖೆ ನಡೆಸಿ ಪ್ರಮಾಣ ಪತ್ರ ನೀಡುತ್ತಿದ್ದರು. ಉಚ್ಚ ನ್ಯಾಯಾಲಯದ ಆದೇಶಗಳೂ ನಮ್ಮ ಪರವಾಗಿವೆ. ಆದರೂ ಉದ್ದೇಶಪೂರ್ವಕವಾಗಿ ನಿರಾಕರಣೆ ಮಾಡುತ್ತಿರುವುದರಿಂದ, ದೌರ್ಜನ್ಯ ತಡೆ ಕಾಯ್ದೆಯಡಿ ಕ್ರಮಕೈಗೊಳ್ಳಬೇಕು. ಇಲ್ಲವಾದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಆಮರಣ ಉಪವಾಸಕ್ಕೆ ಮುಂದಾಗುತ್ತೇವೆ ಎಂದು ರಾಜ್ಯಾಧ್ಯಕ್ಷ ಲಕ್ಷ್ಮಣ ಭೋವಿ ಎಚ್ಚರಿಸಿದರು.
ಮನವಿ ಸ್ವೀಕರಿಸಿದ ತಹಶೀಲ್ದಾರ ರಾಜು ಮಾವರಕ ಮಾತನಾಡಿ, ನಾವು ಕಾನೂನಿನ ಚೌಕಟ್ಟಿನೊಳಗೆ ಕೆಲಸ ಮಾಡಬೇಕಾಗಿದೆ. ಗುರುವಿನಹಳ್ಳಿ ಗ್ರಾಮದ ಭೋವಿ ಸಮಾಜಕ್ಕೆ ಸಂಬಂಧಿಸಿದ ದಾಖಲೆ ಪರಿಶೀಲನೆಯಾಗುತ್ತಿರುವಾಗ, ಸಮಾಜದ ಮುಖಂಡರೊಬ್ಬರು ನ್ಯಾಯಾಲಯದಿಂದ ತಡೆಯಾಜ್ಞೆ (Stay Order) ತಂದಿದ್ದಾರೆ. ಆದ್ದರಿಂದ ಪ್ರಕ್ರಿಯೆ ತಾತ್ಕಾಲಿಕವಾಗಿ ನಿಂತಿದೆ. ಆದರೆ ಮನವಿಯನ್ನು ಸರ್ಕಾರಕ್ಕೆ ಕಳುಹಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಸಮುದಾಯದವರ ಆತಂಕ ನಿವಾರಿಸಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.
ಈ ಸುದ್ಧಿ ಓದಿದ್ದೀರಾ? ಧಾರವಾಡ | ಗಾಂಧಿ ಜಯಂತಿಗೆ ಮುಕ್ತಾಯಗೊಳ್ಳುವ 15 ದಿನಗಳ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ
ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಲಕ್ಷ್ಮಣ ಭೋವಿ, ಹುಚ್ಚಪ್ಪ ಬೋವಿ, ಕಿರಣ ಬೋವಿ, ಯಲ್ಲಪ್ಪ ಬೋವಿ, ರಾಗು ಬೋವಿ, ನಾಗರಾಜ ಬೋವಿ, ಶಂಕರ ಜಾಲಿಹಾಳ, ವೇಂಕಪ್ಪ ಬೋವಿ, ಗೋವಿಂದಪ್ಪ ಬೋವಿ, ಅಜ್ಜಪ್ಪ ಬೋವಿ, ಚಂದ್ರಪ್ಪ ಪಡೆಸೂರ, ಮಂಜಪ್ಪ ಶಿರಸಂಗಿ, ಚಿದಾನಂದಪ್ಪ ಕರಿಶಣ್ಣವರ, ಶಂಕರ ಬೋವಿ, ಪಾರ್ವತಿ ಬೋವಿ, ಶಂಕ್ರವ್ವ ಬೋವಿ, ಲಕ್ಷ್ಮವ್ವ ಬೋವಿ, ರೇಣುಕಾ ಶಿರಸಂಗಿ ಭಾಗವಹಿಸಿದ್ದರು.