ಜಿಲ್ಲೆಯಲ್ಲಿ ಸೆ. 22ರಿಂದ ಆರಂಭವಾಗುವ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪ್ರತಿಯೊಂದು ಕುಟುಂಬವು ಭಾಗವಹಿಸಿ, ಅಗತ್ಯ ಮಾಹಿತಿ ನೀಡುವ ಮೂಲಕ ಸಮೀಕ್ಷೆಗೆ ಸಹಕಾರ ನೀಡಬೇಕೆಂದು ಜಿಲ್ಲಾ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಮನವಿ ಮಾಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಮೀಕ್ಷೆದಾರರಿಗೆ ಈಗಾಗಲೇ ಜಿಲ್ಲಾ ಹಾಗೂ ತಾಲೂಕು ಹಂತದಲ್ಲಿ ತರಬೇತಿ ನೀಡಲಾಗಿದೆ. ಸಮೀಕ್ಷೆ ಮಾಡುವ ಮನೆಗಳಿಗೆ ಈಗಾಗಲೇ ಸ್ಟಿಕರ್ ಸಹ ಆಂಟಿಸಿ, ಸಮೀಕ್ಷೆಗಾಗಿ ಗುರುತಿಸಲಾಗಿದೆ. ಸಮೀಕ್ಷೆ ಮುಗಿಯುವವರೆಗೆ ಮನೆ ಬಾಗಿಲಿಗೆ ಅಂಟಿಸಿರುವ ಸ್ಟಿಕರ್ ತೆಗೆಯಬಾರದು. ಸಮೀಕ್ಷೆದಾರರು ಮನೆಗೆ ಬಂದಾಗ ಕುಟುಂಬದ ಎಲ್ಲ ಸದಸ್ಯರು ಶಿಕ್ಷಣ, ಉದ್ಯೋಗ, ಸೌಲಭ್ಯ ಪಡೆದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ, ಸಮೀಕ್ಷೆ ಕಾರ್ಯ ಯಶಸ್ವಿಯಾಗಿ ಜರುಗುವಂತೆ ಸಹಕರಿಸಬೇಕು. ಈಗಾಗಲೇ ಸಮೀಕ್ಷೆ ಮಾಡುವ ಮನೆಗಳಿಗೆ ಸ್ಟಿಕ್ಕರ್ ಅಂಟಿಸುವಿಕೆ ಹಾಗೂ ಗಣತಿದಾರರಿಗೆ ಯಾವ ಮನೆಗಳ ಸಮೀಕ್ಷೆ ಮಾಡಬೇಕೆಂಬ ಹೊಣೆಗಾರಿಕೆ ನಿಗದಿ ಮಾಡಲಾಗಿದೆ. ಮತ್ತು ಅವರಿಗೆ ತರಬೇತಿಯನ್ನೂ ಸಹ ನೀಡಲಾಗಿದೆ ಎಂದರು.

ಈ ಸುದ್ಧಿ ಓದಿದ್ದೀರಾ? ಧಾರವಾಡ | ಜಾನಪದ ಸಾಹಿತ್ಯದಲ್ಲಿ ಮಹಿಳೆಯರ ಪಾತ್ರವೇ ಪ್ರಧಾನವಾಗಿದೆ: ಜ್ಯೋತಿ ಪಾಟೀಲ್
ಒಂದು ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಪಡಿತರ ಚೀಟಿ ಹೊಂದಿದ್ದಲ್ಲಿ, ಪಡಿತರ ಚೀಟಿವಾರು ಪ್ರತ್ಯೇಕ ಕುಟುಂಬವೆಂದು ಪರಿಗಣಿಸಿ ಸಮೀಕ್ಷೆ ನಡೆಸಲಾಗುವುದು. ಜಿಲ್ಲೆಯಲ್ಲಿ ಅಂದಾಜು 5,46,012 ಕುಟುಂಬಗಳ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡಲಾಗುತ್ತಿದೆ. ಒಬ್ಬ ಸಮೀಕ್ಷೆದಾರ ಗರಿಷ್ಠ 150 ಕುಟುಂಬಗಳಿಗೆ ಭೇಟಿ ನೀಡಿ, ಮಾಹಿತಿ ದಾಖಲಿಸಲಿದ್ದಾರೆ. 4,880 ಗಣತಿದಾರರು ಸೆ.22 ರಿಂದ ಅ.7 ರ ವರೆಗೆ ಅಂದಾಜು 5,46,012 ಕುಟುಂಬಗಳ ಸಮೀಕ್ಷೆ ಮಾಡಲಿದ್ದಾರೆ. ಕುಟುಂಬಸ್ಥರು ಅಗತ್ಯ ಮಾಹಿತಿ ನೀಡಿ, ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಯಶಸ್ವಿಯಾಗಿ ಕೈಗೊಳ್ಳಲು ಸಾರ್ವಜನಿಕರು ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ.