ಪ್ರವಾದಿ ಮುಹಮ್ಮದ್ ಪೈಗಂಬರರ ಸ್ಮರಣೆಗಾಗಿ ಮುಸ್ಲಿಮರು ಈದ್ ಮಿಲಾದ್ ಉನ್ ನಬಿ ಆಚರಣೆ ಮಾಡುತ್ತಾರೆ. ಇಂತಹ ಮಿಲಾದ್ ಹಬ್ಬದಲ್ಲಿ ಹಿಂದೂಗಳೂ ಪಾಲ್ಗೊಳ್ಳುವುದು ವಿಶೇಷವೆಂದೇ ಹೇಳಬೇಹುದು. ಅಂತಹ ಸಾಮರಸ್ಯದ ಬೆಳವಣಿಗೆಯನ್ನು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನಲ್ಲಿ ಕಾಣಬಹುದು. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಿಂದೂ-ಮುಸ್ಲಿಮರು ಒಂದಾಗಿ, ಜಾತಿ ಭೇದ ಮರೆತು ಈದ್ ಮಿಲಾದ್ ಆಚರಸಿ, ನಾವೆಲ್ಲರೂ ಒಂದು ಎಂಬ ಸಂದೇಶ ಸಾರಿದ್ದಾರೆ.
‘ನಾವೆಲ್ಲರೂ ಒಂದು’ ಎಂಬ ಘೋಷವಾಖ್ಯದ ಅಡಿಯಲ್ಲಿ ಕುಂದಗೋಳ ಪಟ್ಟಣದಲ್ಲಿ ಪಂಚಗೃಹ ಹಿರೇಮಠದ ಶಿಥಿಕಂಠೇಶ್ವರ ಶಿವಾಚಾರ್ಯ ಸ್ವಾಮೀಜಿ, ಕಲ್ಯಾಣಪುರ ಮಠದ ಅಭಿನವ ಬಸವಣ್ಣಜ್ಜನವರು, ಶಿವಾನಂದ ಮಠದ ಶಿವಾನಂದ ಸ್ವಾಮೀಜಿ ಮತ್ತು ಮುಸ್ಲಿಂ ಸುಮಾದಯದ ಮುಖಂಡರೆಲ್ಲ ಒಂಸಾಗಿ ಆಚರಿಸಿದ್ದಾರೆ. ಈ ವೇಳೆ ಶಿಥಿಕಂಠೇಶ್ವರ ಸ್ವಾಮೀಜಿ ಮಾತನಾಡಿ, ಮುಸ್ಲಿಂ ಬಾಂಧವರು ನೀಡಿದ ಸೌಹಾರ್ದತೆಯ ಸಂದೇಶ ಪ್ರಶಂಸನೀಯ. ನಾವೆಲ್ಲರೂ ಒಟ್ಟಾಗಿ ಬದುಕುವ ಮೂಲಕ ಕೋಮು ಸೌಹಾರ್ದತೆಯನ್ನು ಹೆಚ್ಚಿಸಬೇಕು. ಭವಿಷ್ಯದಲ್ಲಿಯೂ ಎಲ್ಲರೂ ಹೀಗೆ ಒಗ್ಗಟ್ಟಿನಿಂದ ಬಾಳೋಣ ಎಂದು ಕರೆಕೊಟ್ಟರು.
ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿ ಮಾತನಾಡಿ, ಈದ್ ಮಿಲಾದ್ ಕೇವಲ ಧಾರ್ಮಿಕ ಹಬ್ಬವಲ್ಲ, ಇದು ಮಾನವೀಯ ಮೌಲ್ಯಗಳು ಮತ್ತು ಸೌಹಾರ್ದತೆಯನ್ನು ಸಾರುವ ಹಬ್ಬವಾಗಿದೆ. ಈ ಸಂದರ್ಭದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಒಗ್ಗಟ್ಟಿನಿಂದ ಆಚರಿಸುತ್ತಿರುವುದು ದೇಶದ ವೈವಿಧ್ಯತೆಯಲ್ಲಿ ಏಕತೆಯನ್ನು ಪ್ರತಿಬಿಂಬಿಸುತ್ತದೆ ಎಂದರು. ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಶಿವಾನಂದ ಬೆಂತೂರ ಮಾತನಾಡಿ, ಈದ್ ಮಿಲಾದ್ ಹಬ್ಬವು ಮಾನವೀಯತೆಯನ್ನು ಬೆಸೆಯುವ ಸೇತುವೆಯಾಗಿದ್ದು, ಎಲ್ಲರೂ ಒಂದಾಗಿ ಬದುಕುವ ಮೂಲಕ ಸಮಾಜವನ್ನು ಇನ್ನಷ್ಟು ಸದೃಢಗೊಳಿಸಬೇಕು ಎಂದು ಹೇಳಿದರು.
ತಾಲೂಕಿನ ಯಲಿವಾಳ ಗ್ರಾಮದಲ್ಲಿ, ಪ್ರವಾದಿ ಮಹಮ್ಮದ್‌ರ ಜನ್ಮದಿನಾಚರಣೆಯ ಅಂಗವಾಗಿ, ಎಲ್ಲ ಧರ್ಮಿಯರೂ ಈದ್ ಮಿಲಾದ್‌ನಲ್ಲಿ ಭಾಗವಹಿಸಿದ್ದರು. ಗ್ರಾಮಸ್ಥರು ಜಾತಿ ಮತ ಮರೆತು ಪ್ರವಾದಿಗಳ ಜನ್ಮ ದಿನಾಚರಣೆಯನ್ನು ಶ್ರದ್ಧೆಯಿಂದ ಆಚರಿಸಿದರು. ತಾಲೂಕಿನ ಸಂಶಿ ಗ್ರಾಮದಲ್ಲೂ ವಿವಿಧ ಧರ್ಮಿಯರು ಸೇರಿಕೊಂಡು ಈದ್ ಮಿಲಾದ್ ಆಚರಣೆಯಲ್ಲಿ ಪಾಲ್ಗೊಂಡು ಸಾಮರಸ್ಯವನ್ನು ಗಟ್ಟಿಗೊಳಿಸುವಲ್ಲಿ ಮುನ್ನೆಜ್ಜೆ ಹಾಕಿದರು. ಹೀಗೆ ತಾಲೂಕಿನ ವಿವುಧ ಗ್ರಾಮಗಳಲ್ಲಿ ಶಾಂತಿ ಮತ್ತು ಸೌಹಾರ್ದಯುತವಾಗಿ, ವಿಶೇಷವಾಗಿ ಡಿಜೆ ಬಳಸದೇ ಪ್ರವಾದಿಗಳ ಸಂದೇಶಗಳನ್ನು ಸಾರುತ್ತಾ, ಮೆರವಣಿಗಳನ್ನು ಮಾಡಿದರು.
ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯದ ಮುಖಂಡರಾದ ಖಹಿಂ ನಾಲಬಂದ, ಆರ್. ಎಚ್. ಕಳ್ಳಿಮನಿ, ಸಲೀಂ ಕ್ಯಾಲಕೊಂಡ, ಎ. ಟಿ. ಹುಬ್ಬಳ್ಳಿ, ಮಲ್ಲಿಕ್ ಶಿರೂರ, ಬಾಬಾಜಾನ್ ಮಿಶ್ರೀಕೋಟಿ, ಸಲೀಂ ಕಡ್ಲಿ, ನಾಸಿರ್ ಬಾನಿ, ಮೌಲಾಸಾಬ್ ಶೇರವಾಡ, ಜಾಕಿರ್ ಹುಸೇನ್ ಯರಗುಪ್ಪಿ, ಹಜರತ್ ಅಲಿ ಕರ್ಜಗಿ, ಸಲೀಂ ಜಾಗಿರ್ದಾರ, ಮಹಮ್ಮದ್ ರಫಿಕ್ ಶೇರವಾಡ, ಮರ್ದಾನಿ ಮುಲ್ಲಾ, ಎಂ. ಎಂ. ಜಂಗ್ಲಿ, ಮಹಮ್ಮದ್ ಗೌಸ್ ಕಲೇಗಾರ, ಮಾಬೂಬ್‌ಅಲಿ ನದಾಫ್, ಬಾಬುಸಾಬ ಮಿಶ್ರೀಕೋಟಿ ಸೇರಿದಂತೆ ಸಮಾಜದ ಅನೇಕ ಗಣ್ಯರು ಉಪಸ್ಥಿತರಿದ್ದರು.
ಪಟ್ಟಣದಲ್ಲಿ ನಾತ್ ಶರೀಫ್ ಗಾಯನ ಮತ್ತು ಧಾರ್ಮಿಕ ಉಪನ್ಯಾಸಗಳು ನೆರವೇರಿದವು. ಈ ಉಪನ್ಯಾಸಗಳಲ್ಲಿ ಪ್ರವಾದಿಮಹಮ್ಮದ್‌ರ ಜೀವನ ಮತ್ತು ಬೋಧನೆಗಳ ಮಹತ್ವವನ್ನು ವಿವರಿಸಿದರು. ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಸಾಗಿದ ಮಿಲಾದ್ ಮೆರವಣಿಗೆಯಲ್ಲಿ ಎಲ್ಲರೂ ಪಾಲ್ಗೊಂಡು ಪ್ರವಾದಿಗಳ ಸಂದೇಶಗಳನ್ನು ಸಾರುವಲ್ಲಿ ಕೈಜೋಡಿಸಿದರು. ಈ ರೀತಿಯ ವಾತಾವರಣಗಳಿಂದ ಸೌಹಾರ್ದತೆಯು ಮತ್ತಷ್ಟು ಗಟ್ಟಿಗೊಳ್ಳುತ್ತದೆ ಎನ್ನುತ್ತಾರೆ ಜನರು.