ಬೆಳೆ ಸಾಲದ ಭಾರವನ್ನು ತಾಳಲಾರದೆ ರೈತರೊಬ್ಬರು ಬೇವಿನ ಮರದ ಟೊಂಗೆಗೆ ಟವಲ್‌ನಿಂದ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಕುಂದಗೋಳ ತಾಲೂಕಿನ ಯರೇಬೂದಿಹಾಳ ಗ್ರಾಮದಲ್ಲಿ ಸೆ. 05ರಂದು ನಡೆದಿದೆ.
ಹಜರೇಸಾಬ ಬುಡ್ಡೆಸಾಬ ತಹಶೀಲ್ದಾರ (75) ಆತ್ಮಹತ್ಯೆಯಾದ ರೈತರೆಂದು ಗುರುತಿಸಲಾಗಿದ್ದು, ಸಾಲ ಮರುಪಾವತಿ ಚಿಂತೆಯಿಂದ ಹಜರೇಸಾಬ ಮಾನಸಿಕ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಯರೇಬೂದಿಹಾಳ ಗ್ರಾಮದ ನಿವಾಸಿಯಾಗಿದ್ದ ಹಜರೇಸಾಬ ತಮ್ಮ 3 ಎಕರೆ 2 ಗುಂಟೆ ಜಮೀನಿನಲ್ಲಿ ಗೋವಿನ ಜೋಳ ಬೆಳೆ ಬೆಳೆದಿದ್ದರು. ಕೃಷಿ ಚಟುವಟಿಕೆಗಾಗಿ ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನಲ್ಲಿ ಒಟ್ಟು ರೂ. 2,00,000/- (ಎರಡು ಲಕ್ಷ ರೂಪಾಯಿ) ಬೆಳೆ ಸಾಲ ತೆಗೆದುಕೊಂಡಿದ್ದರು. ಫಸಲಿನ ನಿರೀಕ್ಷೆಯು ವಿಫಲವಾದ ಕಾರಣ, ಮಾಡಿದ ಸಾಲವನ್ನು ಮರುಪಾವತಿಸುವುದು ಹೇಗೆ ಎಂಬ ಚಿಂತೆಯಿಂದ ಗ್ರಾಮದ ಬಸವಣ್ಯಪ್ಪ ಮಾಗಿನಮನಿ ಅವರ ಹೊಲದ ಬದುವಿನಲ್ಲಿರುವ ಬೇವಿನ ಮರದ ಟೊಂಗೆಗೆ ಟವಲ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಸುದ್ಧಿ ಓದಿದ್ದೀರಾ? ಧಾರವಾಡ | ಯರಗುಪ್ಪಿಯಲ್ಲಿ ಸಿಲಿಂಡರ್ ಸ್ಪೋಟ; 6 ಲಕ್ಷ ಮೌಲ್ಯದ ಹೋಟೆಲ್ ಸಾಮಗ್ರಿ ಸುಟ್ಟು ಭಸ್ಮ
ಘಟನೆ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.