ಧಾರವಾಡ ಜಿಲ್ಲೆಯಲ್ಲಿ ಅತಿಯಾದ ಮಳೆಯಿಂದಾಗಿ ಸಾವಿರಾರು ಎಕರೆಗಳಲ್ಲಿ ಬೆಳೆದ ಬೆಳೆ ನಾಶವಾಗಿರುವುದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಮಧ್ಯಂತರ ಬೆಳೆ ವಿಮೆ ಬಿಡುಗಡೆ ಮಾಡಲು ಹಾಗೂ ರೈತರ ಸಾಲ ಮನ್ನಾ ಮಾಡಬೇಕೆಂದು ರೈತ ಸಂಘಟನೆಗಳು ಆಗ್ರಹಿಸಿವೆ.
ಜಿಲ್ಲೆಯ ಕಲಘಟಗಿ, ಕುಂದಗೋಳ, ಅಳ್ಳಾವರ, ಅಣ್ಣಿಗೇರಿ, ನವಲಗುಂದ ಹಾಗೂ ಧಾರವಾಡ ಗ್ರಾಮೀಣ ಭಾಗಗಳಲ್ಲಿ ಸೋಯಾಬಿನ್, ಉದ್ದು, ಗೋವಿನ ಜೋಳ, ಉಳ್ಳಾಗಡ್ಡಿ, ಹತ್ತಿ, ಹೆಸರು ಸೇರಿದಂತೆ ಹಲವು ಬೆಳೆಗಳು ಹಾನಿಗೊಳಗಾಗಿವೆ. ಈಗಾಗಲೇ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರು ವಿಮೆ ಕಂತುಗಳನ್ನು ಪಾವತಿಸಿರುವುದರಿಂದ, ಸರ್ಕಾರ ತಕ್ಷಣವೇ ಮಧ್ಯಂತರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ರೈತರು “ಹಿಂಗಾರು ಬಿತ್ತನೆ ಮಾಡಲು ಹಣವಿಲ್ಲದೆ ನಾವು ಸಂಕಷ್ಟದಲ್ಲಿದ್ದೇವೆ. ಪರಿಹಾರ ಹಣ ಹಾಗೂ ವಿಮೆ ಮೊತ್ತವನ್ನು ತಕ್ಷಣವೇ ಬಿಡುಗಡೆ ಮಾಡದಿದ್ದರೆ ಹುಬ್ಬಳ್ಳಿ–ಧಾರವಾಡ ನಗರ ಬಂದ್ ಮೂಲಕ ಹೋರಾಟ ನಡೆಸುತ್ತೇವೆ” ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಧಾರವಾಡ | ಗಣೇಶ ವಿಸರ್ಜನೆ ವೇಳೆ ಡಿಜೆ ವಿಚಾರಕ್ಕೆ ಗುಂಪು ಜಗಳ
ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಅಡಿಯಲ್ಲಿ ತುರ್ತು ಪರಿಹಾರ ನೀಡಬೇಕು ಎಂದು ಮನವಿ ಸಲ್ಲಿಸಲಾಗಿದ್ದು, ಆತ್ಮಹತ್ಯೆ ಮಾಡಿಕೊಂಡ ರೈತರ ಉದಾಹರಣೆಗಳನ್ನು ಉಲ್ಲೇಖಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಲಾಗಿದೆ.
ಈ ಹೋರಾಟಕ್ಕೆ ರಾಜ್ಯ ಸಂಚಾಲಕ ಸಿದ್ದಣ್ಣ ತೇಜಿ, ಜಿಲ್ಲಾಧ್ಯಕ್ಷ ರವಿರಾಜ ಕಂಬಳಿ ಮತ್ತು ರೈತ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದಾರೆ.