ಧಾರವಾಡ ನಗರದ ಅಂಜುಮನ್-ಎ-ಇಸ್ಲಾಂ ಸಂಸ್ಥೆಯಲ್ಲಿ ಪ್ರವಾದಿ ಹಜರತ್ ಮೊಹಮ್ಮದ್ ಪೈಗಂಬರರ 1500ನೇ ಜನ್ಮ ದಿನಾಚರಣೆ ಅಂಗವಾಗಿ ಬೃಹತ್ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣೆಯನ್ನು ಏರ್ಪಡಿಸಲಾಗಿತ್ತು.
ಶಿಬಿರವನ್ನು ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಉದ್ಘಾಟಿಸಿ ಮಾತನಾಡಿ, “ಅಂಜುಮನ್ ಕಾಲೇಜಿನಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆಗೆ ಎಲ್ಲ ಜಾತಿಯವರು ಮತ್ತು ಸಾರ್ವಜನಿಕರು ಬಂದು ಪಾಲ್ಗೊಂಡಿದ್ದಾರೆ. ಕಣ್ಣಿನ ತಪಾಸಣೆ ಮಾಡಲಾಗುತ್ತಿದ್ದು, ಉಚಿತವಾಗಿ ಕನ್ನಡಕ ನೀಡಲಾಗುತ್ತದೆ ಮತ್ತು ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ” ಎಂದು ಮಾಹಿತಿ ನೀಡಿದರು.
ದೀಪಕ್ ಚಿಂಚೋರೆ ಮಾತನಾಡಿ, “ರಕ್ತದಲ್ಲಿ ಎಲ್ಲರೂ ಒಂದೇ ಮತ್ತು ಎಲ್ಲರ ರಕ್ತ ಒಂದೇ ಆಗಿದೆ. ಪ್ರವಾದಿಗಳ ಸಂದೇಶವೂ ಅದೇ ಆಗಿತ್ತು. ನಾನೂ ಕೂಡಾ ರಕ್ತದಾನದಲ್ಲಿ ಪಾಲ್ಗೊಂಡಿದ್ದೇನೆ. ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಲಿ” ಎಂದರು.
ತವನಪ್ಪ ಅಷ್ಟಗಿ ಮಾತನಾಡಿ, “ಇಂದು ರಕ್ತದಾನ ಶಿಬಿರವು ಇತಿಹಾಸ ನಿರ್ಮಿಸುವ ಕಾರ್ಯಕ್ರಮವಾಗಿದ್ದು, ಸುಮಾರು 1500 ಜನ ಈ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಈ ಶಿಬಿರದಿಂದ ಧಾರವಾಡಕ್ಕೂ ಹೆಸರು ಬರುತ್ತದೆ. ಮತ್ತು ಮತ್ತೊಂದು ಜೀವ ಉಳಿಸುವ ಇಂತಹ ಕಾರ್ಯಕ್ರಮಗಳು ನಿರಂತರ ನಡೆಯಲಿ” ಎಂದು ಹೇಳಿದರು.
ಇದನ್ನೂ ಓದಿ: ಧಾರವಾಡ | ಕಳ್ಳರನ್ನು ಬೆನ್ನಟ್ಟಿ ಹಿಡಿದ ಸ್ಥಳೀಯರು; ವಿಡಿಯೋ ವೈರಲ್!
ಈ ರಕ್ತದಾನ ಶಿಬಿರದಲ್ಲಿ ಎಲ್ಲ ಸಮುದಾಯದವರೂ ಪಾಲ್ಗೊಂಡಿದ್ದರು. ಎಸ್ ಡಿ ಎಮ್ ಆಸ್ಪತ್ರೆ 208 ಯುನಿಟ್ಸ್, ಕ್ಯಾನ್ಸರ್ ಆಸ್ಪತ್ರೆ 110 ಯುನಿಟ್ಸ್, ಜಿಲ್ಲಾಸ್ಪತ್ರೆ 217 ಯುನಿಟ್ಸ್, ರೋಟರಿ ಬ್ಲಡ್ ಕೇಂದ್ರ 415 ಯುನಿಟ್ಸ್, ಬ್ಲಡ್ ಬ್ಯಾಂಕ್ 320 ಯುನಿಟ್ಸ್ ಹಾಗೂ ಕಿಮ್ಸ್ ಆಸ್ಪತ್ರೆ 342 ಯುನಿಟ್ಸ್ ರಕ್ತ ಶೇಖರಿಸಿವೆ. ಉಚಿತ ಆರೋಗ್ಯ ತಪಾಸಣಾ ಶಿಭಿರದಲ್ಲಿ 1700 ಹೆಚ್ಚಿನ ಜನರು ಪಾಲ್ಗೊಂಡು ಉಚಿತ ಔಷದೋಪಚಾರವನ್ನು ಪಡೆದುಕೊಂಡರು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಅಂಜುಮನ್ ಸಂಸ್ಥೆಯ ಆಡಳಿತ ಮಂಡಳಿಯ ಎಲ್ಲ ಸದಸ್ಯರು, ಈದ್ ಮಿಲಾದ್ ಕಮಿಟಿಯ ಸದಸ್ಯರು, ಮೊಹಲ್ಲಾ ಮುತವಲ್ಲಿಗಳು ಅಂಜುಮನ್ ಸಂಸ್ಥೆಯ ಶಿಕ್ಷಕ/ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.