ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಯೋಜನೆಯಲ್ಲಿ ಬಿಡುಗಡೆಯಾಗುವ ಅನುದಾನವನ್ನು ಸಂಪೂರ್ಣವಾಗಿ ಸದುಪಯೋಗ ಮಾಡಿಕೊಂಡು ಶೇ.100 ರಷ್ಟು ಗುರಿ ಸಾಧಿಸಬೇಕು. ಬಿಡುಗಡೆಯಾಗಿರುವ ಅನುದಾನವು ಲ್ಯಾಪ್ಸ್ ಆಗದಂತೆ ಎಚ್ಚರಿಕೆ ವಹಿಸಬೇಕು. ಸರ್ಕಾರದ ಯೋಜನೆಗಳನ್ನು ನಿರ್ದಿಷ್ಠ ಸಮಯದಲ್ಲಿ ಅರ್ಹ ಪಲಾನುಭವಿಗಳಿಗೆ ತಲುಪಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಜಿಲ್ಲಾಧಿಕಾರಿಗಳ ನೂತನ ಸಭಾಭವನದಲ್ಲಿ 2025-26 ನೇ ಸಾಲಿನ ಅಗಸ್ಟ್ ಮಾಹೆಯ ಅಂತ್ಯದವರೆಗಿನ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ, ಅಧ್ಯಕ್ಷತೆ ವಹಿಸಿ, ಮಾತನಾಡಿದ ಅವರು, ಕೃಷಿ ಇಲಾಖೆಯಲ್ಲಿ ಸರಕಾರದ ಯೋಜನೆಗಳನ್ನು ಒಂದು ಬಾರಿ ಯೋಜನೆಯನ್ನು ಸದುಪಯೋಗ ಪಡೆದುಕೊಂಡ ಫಲಾನುಭವಿಗಳು ಪುನಃ ಆ ಯೋಜನೆಯ ಸೌಲಭ್ಯವನ್ನು ಪಡೆಯುತ್ತಿರುವುದು ಗಮನಕ್ಕೆ ಬಂದಿದ್ದು, ಅಂತಹ ಅರ್ಜಿಗಳನ್ನು ಪರಿಶೀಲಿಸಿ, ಕ್ರಮಕೈಗೊಳ್ಳಬೇಕು. ತೋಟಗಾರಿಕೆ ಮಾಡುವಂತಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ರೈತರನ್ನು ಗುರುತಿಸಿ, ಸರ್ಕಾರದ ಯೋಜನೆಗಳ ಬಗ್ಗೆ ರೈತರು ಉಪಯೋಗ ಪಡೆದುಕೊಳ್ಳುವ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಸೂಚಿಸಿದರು.
ರಸ್ತೆ ಕಾಮಗಾರಿ ಹಾಗೂ ವಿವಿಧ ಕಾಮಗಾರಿಗಳನ್ನು ಮಾಡುವಾಗ ಸರಿಯಾದ ರೂಪರೇಷೆಗಳನ್ನು ಸಿದ್ಧಪಡಿಸಿಕೊಂಡು ಹಣ ವ್ಯಯ ಮಾಡದೆ, ಸರಿಯಾಗಿ ಯೋಜನೆಯನ್ನು ರೂಪಿಸಿಕೊಂಡು ಅನುದಾನ ಉಪಯೋಗಿಸಿ. ಅಂಗನವಾಡಿಗಳಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರಗಳನ್ನು ಸರಿಯಾಗಿ ವಿತರಣೆ ಮಾಡಿ ಮತ್ತು ಸರ್ಕಾರ ಪೌಷ್ಟಿಕ ಆಹಾರ ವಿತರಣೆ ಮಾಡುವ ಯೋಜನೆಗಳ ಬಗ್ಗೆ ಅರಿವು ಮೂಡಿಸಬೇಕು. ಸರ್ಕಾರದ ನಿರ್ದೇಶನದಂತೆ ಮಕ್ಕಳಿಗೆ 14 ವರ್ಷ ಕಡ್ಡಾಯ ಶಿಕ್ಷಣ ಇದರಲ್ಲಿ ಎಷ್ಟು ವಿದ್ಯಾರ್ಥಿಗಳು ಶಾಲೆಯಿಂದ ಹಿಂದುಳಿದ್ದಾರೆ ಅವರನ್ನು ಗುರುತಿಸಿ, ಪಟ್ಟಿ ಸಿದ್ಧಪಡಿಸಿ. ಅಂತಹ ಮಕ್ಕಳನ್ನು ಸಹ ಮುಖ್ಯ ವಾಹಿನಿಗೆ ತರುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಯಾವ ಮಕ್ಕಳು ಸಹ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಹೇಳಿದರು.
ಮದರಸಗಳನ್ನು ಭೇಟಿ ಮಾಡಿ ಅವರ ಸಹಾಯವನ್ನು ಸಹ ತೆಗೆದುಕೊಂಡು ಡ್ರಾಪೌಟ್ ಆದ ಮಕ್ಕಳನ್ನು ಗುರುತಿಸಿ ಹಾಗೂ ಕ್ರಿಶ್ಚಿಯನ್ ಶಾಲೆಗಳಿಗೂ ಸಹ ಭೇಟಿ ನೀಡಬೇಕು. ಹೆಸ್ಕಾಂ ಇಲಾಖೆಯವರು ಮಳೆಗಾಲದಲ್ಲಿ ಬಿದ್ದಿರುವ ಹಾಗೂ ಬಾಗಿರುವ ಕಂಬಗಳನ್ನು ಆದಷ್ಟು ಬೇಗ ಸರಿಪಡಿಸಿ ಮತ್ತು ಯಾವ ಅರ್ಜಿಗಳು ಬಂದಿರುತ್ತವೆಯೋ ಅವುಗಳನ್ನು ಸರಿಯಾದ ಸಮಯದಲ್ಲಿ ವಿಲೇವಾರಿ ಮಾಡಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ 2025 ನೇ ಸಾಲಿನ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಮೂರನೇ ತ್ರೈಮಾಸಿಕ ಸಭೆ ಮತ್ತು ಸಫಾಯಿ ಕರ್ಮಚಾರಿಗಳ ಜಿಲ್ಲಾ ಸಮಿತಿ ಸಭೆ ಜರುಗಿತು. ಜಿಲ್ಲಾ ಪಂಚಾಯತ್ ಮುಖ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಉಪಪೊಲೀಸ್ ಆಯುಕ್ತ ಮಹಾನಿಂಗ ನಂದಗಾವಿ ವೇದಿಕೆಯಲ್ಲಿ ಇದ್ದರು.
ಈ ಸುದ್ಧಿ ಓದಿದ್ದೀರಾ? ಧಾರವಾಡ | ಹುದ್ದೆಗಳ ಭರ್ತಿಗೆ ಆಗ್ರಹಿಸಿ ಜುಬಲಿ ವೃತ್ತದಲ್ಲಿ ಪ್ರತಿಭಟನೆ
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಶುಭ. ಪಿ. ಸ್ವಾಗತಿಸಿ, ಸಭೆ ನಿರ್ವಹಿಸಿದರು. ಸಭೆಯಲ್ಲಿ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರು, ಸಫಾಯಿ ಕರ್ಮಚಾರಿಗಳ ಜಿಲ್ಲಾ ಸಮಿತಿ ಸದಸ್ಯರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸರ್ಕಾರಿ ವಕೀಲರು ಭಾಗವಹಿಸಿದ್ದರು.