ಇಂದಿನ ದಿನಮಾನಗಳಲ್ಲಿ ಜನರಲ್ಲಿ ಪೌಷ್ಠಿಕತೆ ಮತ್ತು ಆರೋಗ್ಯದ ಕುರಿತು ಕಾಳಜಿ ಕಡಿಮೆಯಾಗುತ್ತಿದೆ. ಮಹಿಳೆಯರು ಮತ್ತು ಯುವತಿಯರಿಗೆ ಸರ್ಕಾರದ ವಿವಿಧ ಸೌಲಭ್ಯಗಳಿದ್ದರೂ ಆರೋಗ್ಯವಾಗಿರಲು ಸಾಧ್ಯವಾಗುತ್ತಿಲ್ಲ. ನಾರಿಯರು ಶಕ್ತರಾದರೆ ನಮ್ಮ ಪರಿವಾರ ಮತ್ತು ಸಮಾಜ ಶಕ್ತಿಯುತವಾಗುತ್ತದೆ ಎಂದು ಕುಂದಗೋಳ ತಾಲೂಕಿನ ಸಂಶಿ ಗ್ರಾಮ ಪಂಚಾಯತಿ ಅಧ್ಯಕ್ಷ ಗಿರೀಶಗೌಡ ಪಾಟೀಲ ಅಭಿಪ್ರಾಯಪಟ್ಟರು.
ತಾಲೂಕಿನ ಸಂಶಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ‘ಸ್ವಸ್ಥ ನಾರಿ ಶಕ್ತ ಪರಿವಾರ’ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, “ಸರ್ಕಾರದ ಮೂಲಭೂತ ಸೌಲಭ್ಯಗಳನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಹಾಗೂ ಮಹಿಳೆ ಕೇವಲ ಕುಟುಂಬದ ಆಧಾರಸ್ತಂಭವಲ್ಲ, ಆಕೆಯು ಸಮಾಜದ ಪ್ರಗತಿಯ ಪ್ರತೀಕ. ನಾವು ನಮ್ಮ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳ ಆರೋಗ್ಯ ಮತ್ತು ಸಬಲೀಕರಣಕ್ಕೆ ಬೆಂಬಲ ನೀಡಿದಾಗ ಮಾತ್ರ ಒಂದು ಬಲಿಷ್ಠ ಮತ್ತು ಸಮೃದ್ಧ ಸಮಾಜವನ್ನು ನಿರ್ಮಿಸಲು ಸಾಧ್ಯ” ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಹರೀಶ ಲಕ್ಷ್ಮೇಶ್ವರ ಮಾತನಾಡಿ, “ಒಬ್ಬ ಮಹಿಳೆ ವಿದ್ಯಾವಂತಳಾದರೆ ಇಡೀ ಕುಟುಂಬ ವಿದ್ಯಾವಂತವಾಗುತ್ತದೆ’ ಎಂಬ ನಮ್ಮ ಹಿರಿಯರ ಮಾತಿನಂತೆ, ಒಬ್ಬ ಮಹಿಳೆ ಆರೋಗ್ಯವಂತಳಾದರೆ ಇಡೀ ಕುಟುಂಬ ಮತ್ತು ಸಮಾಜವೇ ಆರೋಗ್ಯವಂತವಾಗಿರುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರ ಆರೋಗ್ಯವು ಅನೇಕ ಬಾರಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ. ಪೌಷ್ಟಿಕಾಂಶದ ಕೊರತೆ, ಸೂಕ್ತ ವೈದ್ಯಕೀಯ ಸೇವೆಗಳ ಕೊರತೆ ಮತ್ತು ಅನಾರೋಗ್ಯದ ಕುರಿತು ಇರುವ ತಪ್ಪು ಕಲ್ಪನೆಗಳು ಮಹಿಳೆಯರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ.
ಈ ಪರಿಸ್ಥಿತಿಯನ್ನು ಬದಲಾಯಿಸುವುದು ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ನಮ್ಮ ಗ್ರಾಮ ಪಂಚಾಯತಿ ಕೂಡ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಆರೋಗ್ಯ ಕೇಂದ್ರಗಳಲ್ಲಿ ನಿಯಮಿತ ತಪಾಸಣಾ ಶಿಬಿರಗಳನ್ನು ಆಯೋಜಿಸುವುದು, ಪೌಷ್ಟಿಕ ಆಹಾರದ ಮಹತ್ವದ ಕುರಿತು ಜಾಗೃತಿ ಮೂಡಿಸುವುದು ಮತ್ತು ಸರ್ಕಾರದ ಆರೋಗ್ಯ ಯೋಜನೆಗಳ ಬಗ್ಗೆ ಮಾಹಿತಿ ನೀಡುವುದು ನಮ್ಮ ಆದ್ಯತೆಗಳಲ್ಲಿ ಸೇರಿವೆ. ಮಹಿಳೆಯರು ಕೇವಲ ಮನೆಯ ಕೆಲಸಕ್ಕೆ ಸೀಮಿತರಾಗದೆ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಬಲರಾಗಬೇಕು. ಮಹಿಳಾ ಸ್ವ-ಸಹಾಯ ಗುಂಪುಗಳನ್ನು ಪ್ರೋತ್ಸಾಹಿಸುವ ಮೂಲಕ ನಾವು ಅವರನ್ನು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ನೆರವಾಗಬಹುದು” ಎಂದು ತಿಳಿಸಿದರು.
ಇದನ್ನೂ ಓದಿ: ಧಾರವಾಡ | ಓಝೋನ್ ಪದರು; ಮನುಕುಲದ ಜೀವ ರಕ್ಷಕವಾಗಿದೆ: ಡಾ. ಎನ್ ಬಿ ನಾಲತವಾಡ
ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಸುರೇಶ ಕಳಸಣ್ಣವರ, ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಲೀಲಾವತಿ ಸೂಲದ, ಸದಸ್ಯರಾದ ಪಕ್ಕಿರೇಶ ಪಶುಪತಿಹಾಳ, ಶಂಕ್ರಪ್ಪ ಬ್ಯಾಹಟ್ಟಿ, ಪರಶುರಾಮ ಸೂಲದ, ಬಸವರಾಜ ಇಟಗಿ, ದೊಡ್ಡೇಶ,ಡಿ. ಕವಿತಾ. ಕೆ ಎಚ್, ಅನಿತಾ ಕೂನಬೇವು, ಮಂಜುಳಾ ಸುಂಕದ, ವಿಜಯಲಕ್ಷ್ಮಿ ಗಬ್ಬೂರ, ಗಿರಿಜಾ ಹೊಸಮನಿ, ಪಾತೀಮಾ ಅಣ್ಣಿಗೇರಿ, ಕಮಲಾ ಅರ್ಕಸಾಲಿ, ನಿರ್ಮಲಾ ಗಾಂಜಿ, ರೇಣುಕಾ ಗುಡಗೇರಿ, ಮಂಜುಳಾ ಗಡಗಿ, ಶೈಲಾ ಕೊಡ್ಲಿವಾಡ, ಸವಿತಾ ಲಕ್ಷ್ಮೇಶ್ವರ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.