ಸೆಪ್ಟೆಂಬರ 13 ರಂದು ಜಿಲ್ಲೆಯಲ್ಲಿ ಆಯೋಜಿಸಿರುವ ರಾಷ್ಟ್ರೀಯ ಲೋಕ ಅದಲಾತ್ ಕಾರ್ಯಕ್ರಮವನ್ನು ಕಕ್ಷಿದಾರರು ಹಾಗೂ ನ್ಯಾಯವಾದಿಗಳು ಸದುಪಯೋಗ ಪಡಿಸಿಕೊಳ್ಳಬೇಕು. ಮತ್ತು ಸರ್ವೊಚ್ಛ ನ್ಯಾಯಾಲಯದ ಆದೇಶದ ಮೇರೆಗೆ ರಾಷ್ಟ್ರದಾದ್ಯಂತ ಜುಲೈ 1 ರಿಂದ ಅಕ್ಟೋಬರ 7 ವರೆಗೆ ಜಾರಿಯಲ್ಲಿರುವ ರಾಜ್ಯ ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್ ಮೂಲಕ ವಿಧಿಸಿದ ದಂಡದ ಮೊತ್ತದಲ್ಲಿ ರಿಯಾಯಿತಿಯನ್ನು ಉಪಯೋಗಿಸಿಕೊಂಡು ಪ್ರಕರಣವನ್ನು ಮುಕ್ತಾಯಗೊಳಿಸಿಕೊಳ್ಳಬೇಕು ಎಂದು ಜಿಲ್ಲಾ ನ್ಯಾಯಾಲಯದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹಾಗೂ ಜಿಲ್ಲಾ ಸೇವೆಗಳ ಪ್ರಾಧಿಕಾರಿದ ಅಧ್ಯಕ್ಷೆ ಬಿ.ಎಸ್. ಭಾರತಿ ಮಾತನಾಡಿ ತಿಳಿಸಿದರು.
ಮುಂದುವರೆದು ಮಾತನಾಡುತ್ತಾ, ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ ಜುಲೈ 1 ವರೆಗೆ ಒಟ್ಟು 28,358 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಇವುಗಳಲ್ಲಿನ 725 ಪ್ರಕರಣಗಳನ್ನು ಮಧ್ಯಸ್ಥಿಕೆಗೆ ಗುರುತಿಸಲಾಗಿದೆ. ಮತ್ತು 328 ಪ್ರಕರಣಗಳನ್ನು ಮಧ್ಯಸ್ಥಿಕೆಗೆ ತೆಗೆದುಕೊಳ್ಳಲಾಗಿದೆ. 66 ಪ್ರಕರಣಗಳನ್ನು ಮಧ್ಯಸ್ಥಿಕೆಯಲ್ಲಿ ಇತ್ಯರ್ಥಪಡಿಸಲಾಗಿದೆ. ಮತ್ತು 127 ಪ್ರಕರಣಗಳು ಮಧ್ಯಸ್ಥಿಕೆ ಆಗದೇ ಬಾಕಿ ಉಳಿದಿವೆ. ಜುಲೈ 1 ರಿಂದ ಅಕ್ಟೋಬರ್ 7 ರವರೆಗೆ ದೇಶದ ಎಲ್ಲಾ ನ್ಯಾಯಾಲಯಗಳಲ್ಲಿರುವ ಪ್ರಕರಣಗಳನ್ನು ಮಧ್ಯಸ್ಥಿಕೆಯ ಮೂಲಕ, ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಲು ಮಧ್ಯಸ್ಥಿಕೆ ರಾಷ್ಟ್ರಕ್ಕಾಗಿ-90 ದಿನಗಳ ವಿಶೇಷ ಅಭಿಯಾನ ಆಯೋಜಿಸಲಾಗಿದೆ.
ರಾಷ್ಟ್ರೀಯ ಲೋಕ ಅದಾಲತ್‍ದಲ್ಲಿ ಭಾಗವಹಿಸುವದರಿಂದ ಬಹಳ ದಿನಗಳಿಂದ ಬಾಕಿ ಉಳಿದಿದ್ದ ಪ್ರಕರಣಗಳು ಇತ್ಯರ್ಥವಾಗುತ್ತವೆ. ಇದರಿಂದಾಗಿ ಕಕ್ಷಿದಾರರಿಗೆ ಆಗುವ ಅನಗತ್ಯ ವಿಳಂಬ ಮತ್ತು ವೆಚ್ಚ ತಪ್ಪುತ್ತದೆ. ಆದ್ದರಿಂದ ಲೋಕ ಅದಾಲತ್ ಮೂಲಕ ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸುವುದರಿಂದ ಸಾರ್ವಜನಿಕರಿಗೆ ಸಹಕಾರವಾಗುತ್ತದೆ. ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದ ಮೇರೆಗೆ ದೇಶದಾಂದತ್ಯ ಜಾರಿಯಲ್ಲಿರುವ ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್‍ನಲ್ಲಿ ದಾಖಲಾದ ಪ್ರಕರಣಗಳಿಗೆ ಶೇ. 50 ರಷ್ಟು ದಂಡದ ರಿಯಾಯಿತಿ ನೀಡಲಾಗಿದ್ದು, ಕಕ್ಷಿದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಿದ ಸದಸ್ಯ ಕಾರ್ಯದರ್ಶಿ ಪರಶುರಾಮ ಎಫ್. ದೊಡ್ಡಮನಿ ಮಾತನಾಡಿ, ರಾಷ್ಟ್ರೀಯ ಲೋಕ ಅದಾಲತ್ ನ್ಯಾಯಾಂಗದ ಮೇಲಿನ ಕೆಲಸದ ಹೊರೆಯನ್ನು ಕಡಿಮೆ ಮಾಡುವ ಜೊತೆಗೆ, ಕಕ್ಷಿದಾರರಿಗೆ ತ್ವರಿತ ನ್ಯಾಯ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಆಶಯ ವ್ಯಕ್ತಪಡಿಸಿದರು.
ಈ ಸುದ್ಧಿ ಓದಿದ್ದೀರಾ? ಧಾರವಾಡ | ಗಾಂಧೀಜಿ ಸ್ಮರಣೆಯಿಂದ ಸಂಸ್ಕಾರ ಬೆಳೆದು, ನಡೆ-ನುಡಿ ಒಂದಾಗಿರಬೇಕು: ಭುವನೇಶ ಪಾಟೀಲ್
ವಕೀಲರ ಸಂಘದ ಅಧ್ಯಕ್ಷರಾದ ಅಶೋಕ ಏಣಿಗಿ ಮಾತನಾಡಿ, ನ್ಯಾಯಾಲಯದಲ್ಲಿ ಬಾಕಿಯಿರುವ ಪ್ರಕರಣಗಳನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಲು ರಾಷ್ಟ್ರೀಯ ಲೋಕ ಅದಾಲತ್ ಅವಕಾಶ ನೀಡುತ್ತದೆ ಎಂದರು. ಲೋಕ ಅದಾಲತ್‍ನಲ್ಲಿ ಕಕ್ಷಿದಾರರು ನೇರವಾಗಿ ಸಂಧಾನಕಾರರೊಂದಿಗೆ ಮಾತುಕತೆ ನಡೆಸಿ, ಒಮ್ಮತಕ್ಕೆ ಬರುವ ಅವಕಾಶವಿರುತ್ತದೆ. ಇದರಿಂದ ಕಾನೂನು ಪ್ರಕ್ರಿಯೆಯ ಸಂಕೀರ್ಣತೆಗಳು ಕಡಿಮೆಯಾಗಿ, ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.