ಅವಳಿ ನಗರಗಳ ಬೆಳವಣಿಗೆಗೆ ಅಧಿಕಾರಿಗಳು ಪರಸ್ಪರ ಒಗ್ಗಟ್ಟಿನಿಂದ ಕೆಲಸ ಮಾಡಲು ಮುಂದಾಗಿ, ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಸೂಚಿಸಿದರು.
ಹುಬ್ಬಳ್ಳಿಯ ಐಟಿ ಪಾರ್ಕ್ನಲ್ಲಿರುವ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಸಭಾಂಗಣದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅಧಿಕಾರಿಗಳನ್ನು ತರಾಟಗೆ ತೆಗೆದುಕೊಂಡರು.
“ಬೆಂಗಳೂರು ನಗರದಂತೆ ಹುಬ್ಬಳ್ಳಿ ಧಾರವಾಡ ನಗರಗಳು ಬೆಳವಣಿಗೆ ಹೊಂದುತ್ತಿವೆ. ಹೀಗಾಗಿ ಅವಳಿ ನಗರಗಳ ಭವಿಷ್ಯದ ಹಿತದೃಷ್ಟಿಯಿಂದ ಮುಂದಿನ 25 ವರ್ಷಗಳಲ್ಲಿ ನಗರಗಳನ್ನು ಬೆಳವಣಿಗೆ ಮಾಡಲು ಉತ್ತಮ ಯೋಜನೆಗಳನ್ನು ರೂಪಿಸಬೇಕಿದೆ” ಎಂದರು.

ಆಧುನಿಕ ವಿಜ್ಞಾನ ತಂತ್ರಜ್ಞಾನವನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ಕಾರ್ಯರೂಪಕ್ಕೆ ತರಲು ಯತ್ನಿಸಬೇಕು. ಆನ್ಲೈನ್ ವ್ಯವಸ್ಥೆ, ಹೊಸ ತಂತ್ರಜ್ಞಾನ ಮತ್ತು ನವೀನ ಕಲ್ಪನೆಯ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಸಾರ್ವಜನಿಕರಿಗೆ ಮೂಲ ಸೌಕರ್ಯಗಳನ್ನು ಒದಗಿಸುವುದು, ಘನ ತ್ಯಾಜ್ಯ ನಿರ್ವಹಣೆ ಘಟಕಗಳಿಗೆ ಕಾಂಪೌಂಡ್ ನಿರ್ಮಾಣ, ಸರ್ಕಾರಿ ಉದ್ಯಾನಗಳನ್ನು ಕೈಗಾರಿಕೋದ್ಯಮಿಗಳು ಹಾಗೂ ಎನ್ಜಿಒಗಳಿಗೆ ನಿರ್ವಹಣೆ ಮಾಡಲು ಅವಕಾಶ ಕಲ್ಪಿಸಬೇಕಿದೆ ಎಂದರು.
ಬಿಲ್ ಕಲೆಕ್ಟರ್ ಗಳು ವಲಯವಾರು ಆಸ್ತಿಗಳನ್ನು ಸರಿಯಾಗಿ ಗುರುತಿಸಿ, ಆಸ್ತಿ ತೆರಿಗೆಯನ್ನು ಸಂಗ್ರಹಿಸಬೇಕು. ಪಾಲಿಕೆ ವ್ಯಾಪ್ತಿಯ ಆಸ್ತಿಗಳ ಬಗ್ಗೆ ಅಧಿಕಾರಿಗಳು ಮಾಹಿತಿ ಕ್ರೋಢೀಕರಿಸಬೇಕು ಎಂದು ಸೂಚಿಸಿದರು.
ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ., ಮಹಾಪೌರರಾದ ರಾಮಣ್ಣ ಬಡಿಗೇರ, ಉಪಮಹಾಪೌರರಾದ ದುರ್ಗಮ್ಮ ಬೀಜವಾಡ, ಪಾಲಿಕೆಯ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ, ಪಾಲಿಕೆಯ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
