ಇಂದಿನ ಯುವ ಕ್ರೀಡಾಪಟುಗಳು ನಮ್ಮ ರಾಷ್ಟ್ರದ ಸಾಧಕ ಕ್ರೀಡಾಪಟುಗಳ ಜೀವನದ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಸೋಲು ಗೆಲವುಗಳನ್ನು ಸಮಾನವಾಗಿ ಕಾಣುವ ಕ್ರೀಡಾ ಮನೋಭಾವವೇ ಜೀವನದ ಯಶಸ್ಸಿನ ಗುಟ್ಟು. ಅದನ್ನು ಅರಿತು ನಡೆಯಬೇಕು ಎಂದು ಕರ್ನಾಟಕ ಬಾಲ ವಿಕಾಸ ಅಕಾಡಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ಧಾರವಾಡ ಜಿಲ್ಲಾ ಕ್ರೀಡಾಂಗಣದ ಒಳಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತವಾಗಿ ಮೇಜರ್ ಧ್ಯಾನ್‍ಚ್‍ಂದ ರವರ ಜನ್ಮ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, “ಕ್ರೀಡೆಯಲ್ಲಿ ಯಾವುದೇ ಜಾತಿ, ಧರ್ಮದ ಕಟ್ಟಳೆಗಳಿಲ್ಲ, ಮೇಲು ಕೀಳು ಎಂಬ ಭೇದಭಾವ ಇಲ್ಲ, ಬಡವ ಶ್ರೀಮಂತ ಎಂಬುದಿಲ್ಲ. ಕ್ರೀಡಾ ಸಾಧಕರಿಗೆ, ಸ್ಪರ್ಧಾ ವಿಜೇತರಿಗೆ ಸಿನಿಮಾ ನಟಿಯರಿಗಿಂತ ಹೆಚ್ವು ಗೌರವ, ಅಭಿಮಾನವಿದೆ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಮಾತನಾಡಿ, “ಪ್ರತಿಯೊಬ್ಬರಿಗೂ ಕ್ರೀಡಾ ಹವ್ಯಾಸವನ್ನು ಹೊಂದಿರಬೇಕು. ಸದೃಢ ದೇಹದಲ್ಲಿ ಸದೃಢವಾದ ಮನಸ್ಸು ಇರುತ್ತದೆ. ಕ್ರೀಡಾಪಟುಗಳಿಗೆ ಆಹಾರದ ಉತ್ತಮ ಹವ್ಯಾಸಗಳು ಇರುತ್ತವೆ. ಯಾವುದೇ ದುಷ್ಚಟಗಳಿಗೆ ಅಂಟಿಕೊಳ್ಳಬಾರದು. ಕ್ರೀಡಾ ಕ್ಷೇತ್ರದಲ್ಲಿ ನಮ್ಮ ರಾಷ್ಟ್ರಕ್ಕೆ ವಿಶ್ವಮಟ್ಟದಲ್ಲಿ ಉತ್ತಮ ಹೆಸರು, ಕೀರ್ತಿ ಇದೆ. ನಮ್ಮ ಕ್ರೀಡಾಪಟುಗಳು ಇನ್ನೂ ಹೆಚ್ವಿನ ಸಾಧನೆ ಮಾಡುವ ಮೂಲಕ ಧಾರವಾಡ ಜಿಲ್ಲೆಗೆ ಕೀರ್ತಿ ತರಬೇಕೆಂದು” ತಿಳಿಸಿದರು.
ಇದನ್ನೂ ಓದಿ: ಧಾರವಾಡ | ಅವಳಿನಗರ ವ್ಯಾಪ್ತಿಯಲ್ಲಿ ಆ.26ರಿಂದ ಸೆ.07ರವರೆಗೆ ಮದ್ಯ ಮಾರಾಟ, ಮದ್ಯಪಾನ ನಿಷೇಧ