ಜಾತಿ ಮತ್ತು ಧರ್ಮಕ್ಕಿಂತಲೂ ದೇಶದ ಹಿತಾಸಕ್ತಿಯೇ ಮುಖ್ಯ. ಧರ್ಮ ಯಾವುದೇ ಇರಲಿ, ನಾವೆಲ್ಲರೂ ಭಾರತೀಯರು ಎಂಬ ಉದಾತ್ತ ಭಾವನೆಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಧಾರವಾಡದ ಸಾಯಿ ಮಹಾವಿದ್ಯಾಲಯದ ಅಧ್ಯಕ್ಷೆ ಡಾ. ವೀಣಾ ಬಿರಾದಾರ ಸಾಯಿ ಕಾಲೇಜಿನಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು ಆಯೋಜಿಸಿದ್ದ ಶಿಕ್ಷಣದಲ್ಲಿ ರಾಷ್ಟ್ರೀಯ ಭಾವೈಕ್ಯತೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತದ ಏಳಿಗೆಯೇ ನಮ್ಮೆಲ್ಲರ ಧ್ಯೇಯವಾಗಬೇಕು. ಎಲ್ಲಾ ಮತ-ಪಂಥಗಳ ಜೀವನ ಶೈಲಿ ಮತ್ತು ನೀತಿ-ನಿಯಮಗಳ ಕುರಿತು ಗೌರವ ಭಾವನೆ ನಮ್ಮಲ್ಲಿ ಬೆಳೆಯಬೇಕು. ಬಸವಾದಿ ಶರಣರು ಮತ್ತು ಭಕ್ತಿ ಪಂಥದ ಪ್ರತಿಪಾದಕರು ಸಹ ಸರ್ವಸಮಾನತೆಯನ್ನು ತರಲು ಸಾಮರಸ್ಯದ ಬದುಕೇ ಶ್ರೇಷ್ಠ ಎಂದು ಸಾರಿದ್ದರು ಎಂದರು.
ಉಪನ್ಯಾಸಕರಾಗಿ ಧಾರವಾಡ ಜಿಲ್ಲಾ ಇತಿಹಾಸ ಬೋಧಕರ ಸಂಘದ ಅಧ್ಯಕ್ಷ ಉದಯ ನಾಯಕ ಮಾತನಾಡಿ, “ದೇಶದ ಪ್ರಗತಿಯ ಪಥದಲ್ಲಿ ಜಾತಿಯ ವಿಷ ಬೀಜ ಕಪ್ಪು ಚುಕ್ಕೆಯಾಗಿದೆ. ನಮ್ಮ ಜಾತಿ-ಧರ್ಮ, ಆಚಾರ-ವಿಚಾರಗಳು ವಿಭಿನ್ನವಾಗಿದ್ದರೂ ನಾವೆಲ್ಲಾ ಭಾರತೀಯರು ಎಂಬ ಉದಾತ್ತ ಭಾವನೆಯೇ ಮುಖ್ಯ. ವೈವಿಧ್ಯತೆಯಲ್ಲಿ ಏಕತೆ ನಮ್ಮೆಲ್ಲರ ಸಂಸ್ಕೃತಿಯಾಗಬೇಕು. ನಾವೆಲ್ಲರೂ ಪರಸ್ಪರ ದ್ವೇಷ, ಅಸೂಯೆ ದೂರವಿರಿಸಿ ಅನ್ಯೋನ್ಯತೆಯಿಂದ ಬಾಳಬೇಕು” ಎಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡೈಟ್ ನಿವೃತ್ತ ಉಪನ್ಯಾಸಕ ಕೆ.ಜಿ.ದೇವರಮನಿ ಮಾತನಾಡಿ, “ಭಾವೈಕ್ಯತೆಯ ಭಾವನೆ ಮೊದಲು ನಮ್ಮ ಮನೆಯಿಂದಲೇ ಪ್ರಾರಂಭವಾಗಬೇಕು. ಧರ್ಮ, ಜಾತಿಗಿಂತ ಮಾನವೀಯತೆ ಶ್ರೇಷ್ಠ ಎಂಬ ಭಾವನೆಯನ್ನು ನಾವೆಲ್ಲಾ ಅಳವಡಿಸಿಕೊಳ್ಳಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಸ್ವಸಹಾಯ ಗುಂಪುಗಳ ಮಹಿಳೆಯರೇ ನಿರ್ವಹಿಸುವ ಅಕ್ಕ-ಕಫೆ ಉದ್ಘಾಟನೆ
ಸವಿತಾ ಕರಿಕಟ್ಟಿ ಸ್ವಾಗತಿಸಿದರು. ಕ.ವಿ.ವ. ಸಂಘದ ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಮೌನೇಶ ಬಡಿಗೇರ ನಿರೂಪಿಸಿದರು. ಎಂ. ಜಿ. ಸುಬೇದಾರ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.