ಮಕ್ಕಳಲ್ಲಿ ಅದಮ್ಯವಾದ ಸೃಜನಶೀಲ ಮನಸ್ಸಿರುತ್ತದೆ. ಅದನ್ನು ಪಾಲಕರು ಹಾಗೂ ಗುರುಗಳು ಗುರುತಿಸಿ ಬೆಳೆಸಬೇಕು. ಕವಿತೆ ರಚನೆ ಸುಲಭವಲ್ಲ. ಅದಕ್ಕೆ ಗಟ್ಟಿಯಾದ ಓದು, ಚಿಂತನೆಯ ಅಗತ್ಯವಿದೆ. ಇಂದಿನ ವಿದ್ಯಾರ್ಥಿಗಳು ಓದುವಿಕೆಗೆ ಹೆಚ್ಚು ಮಹತ್ವ ಕೊಡಬೇಕಾಗಿದೆ ಎಂದು ಸಾಹಿತಿ ಡಾ. ಚಿದಾನಂದ ಮಾಸನಕಟ್ಟಿ ಅಭಿಪ್ರಾಯ ಪಟ್ಟರು.
ಧಾರವಾಡ ನಗರದ ಮಕ್ಕಳ ಅಕಾಡೆಮಿಯಲ್ಲಿ 22ನೇ ತ್ರಿಭಾಷಾ ಮಕ್ಕಳ ಕವಿಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, “ಕಾವ್ಯವು ಮಕ್ಕಳಿಗೆ ಆಲೋಚನೆ, ಚಿಂತನೆ ಹಾಗೂ ಅಭಿಪ್ರಾಯವನ್ನು ಮನಮುಟ್ಟುವಂತೆ ಪ್ರತಿಪಾದಿಸಲು ಸಹಾಯಕವಾಗುತ್ತದೆ. ಕವಿತೆಗಳ ರಚನೆಯಿಂದ ಕೀರ್ತಿ, ಜ್ಞಾನ, ಸಂಪತ್ತು, ಅನಿಷ್ಠಗಳ ನಿವಾರಣೆ, ಆನಂದ ದೊರೆಯುತ್ತದೆ” ಎಂದರು.
ಸಂಸ್ಥೆಯ ಅಧ್ಯಕ್ಷ ಡಾ. ರಾಜೇಂದ್ರ ದೇಶಪಾಂಡೆ ಮಾತನಾಡಿ, “ಮಕ್ಕಳಲ್ಲಿರುವ ಪ್ರತಿಭೆಗಳಿಗೆ ಪ್ರೋತ್ಸಾಹಿಸುವುದೇ ನಮ್ಮ ಕರ್ತವ್ಯವಾಗಿದ್ದು, ಕೇವಲ ಅಂಕ ಗಳಿಕೆಯ ಯಾಂತ್ರಿಕ ಕಲಿಕೆಗಿಂತ ಅನುಭವಾತ್ಮಕ ಕಲಿಕೆ ಅಗತ್ಯವಿದೆ. ಮಕ್ಕಳು ವಾಚಿಸಿದ ಆಯ್ದ ಕವನಗಳನ್ನು ಡಾ. ಬಾಳಪ್ಪ ಚಿನಗುಡಿಯವರ ಸಂಪಾದಕತ್ವದಲ್ಲಿ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಬೆಳೆಯುವ ಮಕ್ಕಳ ಕವಿ ಮನಸ್ಸುಗಳಿಗೆ ಪ್ರೋತ್ಸಾಹಿಸಲಾಗುವುದು” ಎಂದರು.
ಕನ್ನಡ ವಿಭಾಗದಲ್ಲಿ ಕು, ವೈಷ್ಣವಿ ಪ್ರಥಮ, ಕು, ಪ್ರಿಯಾಂಕಾ ದ್ವಿತೀಯ, ಕು, ಶೃತಿ ಗಾಣಿಗೇರ ತೃತೀಯ ಸ್ಥಾನ , ಹಿಂದಿ ವಿಭಾಗದಲ್ಲಿ ಕು,ಶೌರ್ಯ ಬರ್ನವಾಲ ಪ್ರಥಮ,ಕು, ಫೀಜಾ ದ್ವಿತೀಯ, ಕು, ಆಧ್ಯಶ್ರೀ ಚಂದ್ರಾ ತೃತೀಯ ಸ್ಥಾನ, ಇಂಗ್ಲೀಷ್ ವಿಭಾಗದಲ್ಲಿ ಕು,ತೇಜಸ್ಸ್ ಹೆಗಡೆ ಪ್ರಥಮ, ಕು, ಅವನಿ ದ್ವಿತೀಯ, ಕು ಸಾನ್ವಿ ಪಾಟೀಲ ತೃತೀಯ ಸ್ಥಾನವನ್ನು ಪಡೆದರು. ಇವರಿಗೆ ಪ್ರಶಸ್ತಿ ಪತ್ರ, ಫಲಕವನ್ನು ಹಾಗೂ ಭಾಗವಹಿಸಿದ ಎಲ್ಲ ಮಕ್ಕಳಿಗೂ ಪ್ರಶಸ್ತಿ ಪತ್ರವನ್ನು ಅಧ್ಯಕ್ಷರು ವಿತರಿಸಿದರು.
ಇದನ್ನೂ ಓದಿ: ಧಾರವಾಡ | ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಡಾ. ಬಾಳಪ್ಪ ಚಿನಗುಡಿ, ಪ್ರೊ. ಐ ಎಸ್ ಹುಯಿಲಗೋಳ, ಎಮ್ ಡಿ ಹುಂಡೆಕಾರ ನಿರ್ಣಾಯಕರಾಗಿದ್ದರು. ಶ್ರೀನಿವಾಸ ವಾಡಪ್ಪಿ ಅತಿಥಿಗಳನ್ನು ಪರಿಚಯಿಸಿದರು. ನಗರದ ವಿವಿಧ ಶಾಲೆಗಳಿಂದ ಸುಮಾರು 60 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನ್ನಡ, ಇಂಗ್ಲೀಷ್, ಹಿಂದಿ ಹಾಗೂ ಉರ್ದು ಭಾಷೆಗಳಲ್ಲಿ, ಗುರು, ತಾಯಿ, ತಂದೆ, ಶಾಲೆ, ರೈತ, ಸೈನಿಕ, ಮಗಳು, ಮಾನವ, ಕಪ್ಪುಹಣ, ಪರಿಸರ, ಸ್ನೇಹ, ಪ್ರೀತಿ, ಕನಸ್ಸುಗಳ ವಿಷಯಗಳಾದಾರಿತ ಚುಟುಕು, ಹಾಸ್ಯಗಳಲ್ಲಿ ಕವನ ವಾಚಿಸಿದರು.
ಪ್ರೊ. ಐ.ಎಸ್ ಹುಂಡೆಕಾರ, ಪ್ರೊ. ಎನ್ ಬಿ ನಾಲತವಾಡ ಸೇರಿದಂತೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಗುರುಗಳು, ಪಾಲಕರು ಹಾಗೂ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.