ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದ ಕೃಷಿ ಮೇಳದಲ್ಲಿ ಪ್ರದರ್ಶನಕ್ಕೆಂದು ತಂದಿದ್ದ ಮಿನಿ ಟ್ರ್ಯಾಕ್ಟರ್‌ವೊಂದು ಕೆಳಗಿಳಿಸುವ ವೇಳೆ ಪಲ್ಟಿಯಾಗಿ, ತುಮಕೂರು ಮೂಲದ ಪರಶುರಾಮ ಆರ್. (32) ಎಂಬ ಯುವಕನ ಮೇಲೆ ಬಿದ್ದು ಸಾವನ್ನಪ್ಪಿದ್ದಾನೆ.
ಕ್ಯಾಂಟರ್ ವಾಹನದಿಂದ ಮಿನಿ ಟ್ರ್ಯಾಕ್ಟರ್‌ನ್ನು ಕೆಳಗಿಳಿಸುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ್ದು, ರಸ್ತೆಯ ಅವ್ಯವಸ್ಥೆಯೇ ದುರಂತಕ್ಕೆ ಕಾರಣವೆಂದು ತಿಳಿದುಬಂದಿದೆ. ಕೃಷಿ ಮೇಳದ ಟ್ರ್ಯಾಕ್ಟರ್ ಪ್ರದರ್ಶನ ಮಳಿಗೆಯ ಆವರಣದಲ್ಲಿ ರಸ್ತೆಯು ಸರಿಯಾಗಿಲ್ಲ. ಕೆಸರು ಗದ್ದೆಯಂತಾಗಿರುವ ಪರಿಸ್ಥಿತಿಯೇ ಈ ಘಟನೆಗೆ ಕಾರಣ ಎಂದು ಮೃತನ ಸಂಬಂಧಿಕರು ಹಾಗೂ ಸ್ಥಳೀಯ ಕೆಲವರು ಆರೋಪಿಸಿ, ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು. ಮೃತದೇಹವನ್ನು ಸ್ಥಳದಿಂದ ತೆರವುಗೊಳಿಸಲು ಬಿಡಲಿಲ್ಲ.
ಈ ಸುದ್ಧಿ ಓದಿದ್ದೀರಾ? ಧಾರವಾಡ | ಕೃಷಿಕ್ರಾಂತಿ-ಹಸಿರು ಕ್ರಾಂತಿ ವೇಗದಲ್ಲಿ ಆಹಾರ ಉತ್ಪಾದನೆ ಆಗುತ್ತಿಲ್ಲ: ಸಿ.ಎಂ.ಸಿದ್ದರಾಮಯ್ಯ
ಮೃತನ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಪ್ರತಿಭಟಿಸಿದ ನಂತರ, ಕೃಷಿ ವಿಶ್ವವಿದ್ಯಾಲಯವು, ಮೃತನ ಕುಟುಂಬಕ್ಕೆ ₹5 ಲಕ್ಷ ಪರಿಹಾರದ ಚೆಕ್ ವಿತರಿಸಿದೆ. ತದನಂತರ ಮೃತದೇಹವನ್ನು ತೆರವುಗೊಳಿಸಿದರು. ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.