ಮಹಾತ್ಮಾ ಗಾಂಧಿಯವರ ಆತ್ಮಕಥೆ ‘ನನ್ನ ಸತ್ಯಾನ್ವೇಷಣೆ’ ಪ್ರಕಟಗೊಂಡು ನೂರು ವರ್ಷಗಳು ಪೂರ್ಣಗೊಂಡ ಪ್ರಯುಕ್ತವಾಗಿ, ಸತ್ಯಾನ್ವೇಷಣೆಯ ಶತಮಾನೋತ್ಸವ ಸಂಭ್ರಮ; ಮುಕ್ತ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಧಾರವಾಡ ಪಟ್ಟಣದ ವಿದ್ಯಾವರ್ಧಕ ಸಂಘದ ಚಿತ್ರಕಲಾ ಭವನದಲ್ಲಿ ಶಿವಮೊಗ್ಗ ಲೋಹಿಯಾ ಜನ್ಮ ಶತಾಬ್ದ ಪ್ರತಿಷ್ಠಾನ, ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ, ಗಾಂಧಿ ಶಾಂತಿ ಪ್ರತಿಷ್ಠಾನ, ವಚನ ಸಾಹಿತ್ಯ ಪ್ರಚಾರ ಸಮಿತಿ ಹಾಗೂ ಬೆಂಗಳೂರಿನ ಗಾಂಧಿ ಸ್ಮಾರಕ ನಿಧಿ ಮತ್ತು ಜಾಗೃತ ಕರ್ನಾಟಕ ಸಹಯೋಗದೊಂದಿಗೆ ಹಮ್ಮಿಕೊಂಡಿಗಿತ್ತು..
ಮಲ್ಲೇಶ ಹಟಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, “ಜಗತ್ತಿನಲ್ಲಿಯೇ ನಾವು ಕಾಣಬಹುದಾದ ಅತ್ಯಂತ ದಿಟ್ಟ ಮತ್ತು ಶ್ರೇಷ್ಠ ಆತ್ಮಕಥೆಗಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಆತ್ಮಕಥೆ ಅಥವಾ ನನ್ನ ಸತ್ಯಾನ್ವೇಷಣೆ ಒಂದಾಗಿದೆ. ಇದು ಇಂದಿನ ಪೀಳಿಗೆಯ ಯುವಜನತೆ ಓದಲೇ ಬೇಕಾದ ಹಾಗೂ ಚರಿತ್ರೆಯ ನೈಜತೆಯನ್ನು ತಿಳಿದುಕೊಳ್ಳಬೇಕಾದರೆ ಅಧ್ಯಯನ ಮಾಡಬೇಕಾದ ಅತ್ಯುತ್ತಮ ಕೃತಿಯಾಗಿದೆ” ಎಂದರು.
“ಗಾಂಧೀಜಿಯವರ ಆತ್ಮಕಥೆ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಮೌಲ್ಯಾಧಾರಿತ ಶಿಕ್ಷಣಕ್ಕಿಂತ ಅಂಕ ಆಧಾರಿತ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಇದರಿಂದ ಯುವಜನತೆ ನೈಜ ಚರಿತ್ರೆ ಹಾಗೂ ಓದಿನಿಂದ ವಂಚಿತರಾಗುತ್ತಿದ್ದಾರೆ. ತಮ್ಮ ಬದುಕಿನ ಎಲ್ಲ ಮುಖಗಳನ್ನು ಗಾಂಧೀಜಿಯವರಷ್ಟು ಪ್ರಾಮಾಣಿಕವಾಗಿ ಬಿಚ್ಚಿಟ್ಟವರು ಮತ್ತೊಬ್ಬರಿಲ್ಲ. ಮಹಿಳೆಯರನ್ನು ಕೀಳಾಗಿ ನೋಡುವ, ಸಮಾಜದ ನಡವಳಿಕೆಯನ್ನು ಇದು ತಪ್ಪು ಎಂದು ದಿಟ್ಟವಾಗಿ ಹೇಳಿದವರು ಮಹಾತ್ಮ ಗಾಂಧಿ” ಎಂದರು.
ಈ ಕಾರ್ಯಕ್ರಮದಲ್ಲಿ ಸುಮಾರು 60 ಜನ ಭಾಗಿಯಾಗಿದ್ದು, ಸಂವಾದದಲ್ಲಿ ಮಾಜಿ ಸಂಸದ ಐ. ಜಿ. ಸನದಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಡಾ. ಸಂಜೀವ ಕುಲಕರ್ಣಿ, ಶಿವಾನಂದ ಶೆಟ್ಟರ, ಬಸವ ಪ್ರಭು ಹೊಸಕೇರಿ, ರಕ್ಷಿತಾ ಜಂಬಗಿ, ಸಮರ್ಥ ಹಳಕಟ್ಟಿ, ಅಭಿಷಿಕ ರಾಯಕೊಪ್ಪ, ನಿರ್ಮಲಾ ಬಾಗೋಡಿ, ಪ್ರತಿಭಾ ಕುಲಕರ್ಣಿ, ವನದೇವಿ ಸೋಮಣ್ಣವರ, ಹೇಮಂತ ರಾಮಡಗಿ, ಚೈತ್ರಾ ಗೊಂದಿ, ಹನಮಂತ ದಾಸರ, ಸುಧೀರ ಪಿಡ್ಡಿ, ಧರ್ಮರಾಜ ಚೋರಿ ಮಾತನಾಡಿದರು. ಕುಮಾರ ಲಾಲ ನಿರೂಪಿಸಿದರು. ಮಲ್ಲೇಶ ಹಳಕಟ್ಟಿ ವಂದಿಸಿದರು.




