ಇದೇ ವರ್ಷ ನವೆಂಬರ್ ತಿಂಗಳ ಒಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡಿಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಕುರ್ಚಿ ಬಿಟ್ಟು ಕೊಡಲಿದ್ದಾರೆ. ಇಲ್ಲದಿದ್ದರೆ ಡಿಕೆಶಿಯವರು ಬಲವಂತವಾಗಿ ಕುರ್ಚಿ ಕಸಿದುಕೊಳ್ಳುತ್ತಾರೆ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಭವಿಷ್ಯ ನುಡಿದರು.
ಕಡಬ ತಾಲೂಕಿನ ಆರೆಲ್ಲಡಿ ಉಳ್ಳಾಕು, ಕೆಡೆಂಜೊಡಿತ್ತಾಯ ದೇವಸ್ಥಾನದಲ್ಲಿ ನೂತನ ಸಭಾಭವನದ ಶಿಲಾನ್ಯಾಸ ನೆರವೇರಿಸಿದ ಬಳಿಕ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಅವರ ಮನೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, “ನನಗೆ ಸಿಕ್ಕಿರುವ ಮಾಹಿತಿಯಂತೆ ಸಿದ್ದರಾಮಯ್ಯ ಹಾಗೂ ಡಿಕೆಶಿ ಮಧ್ಯೆ 50-50 ಅಧಿಕಾರ ಹಂಚಿಕೆಯ ಒಪ್ಪಂದವಾಗಿದೆ. ಇತ್ತ ಸಿದ್ದರಾಮಯ್ಯ 5 ವರ್ಷ ನಾನೇ ಸಿಎಂ ಎಂದು ಹೇಳಿದ್ದಾರೆ. ಇದರಿಂದ ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡುವುದಿಲ್ಲ ಎಂದು ತಿಳಿದು, ಡಿಕೆಶಿ ಈಗ ತಮ್ಮ ಹಕ್ಕು ಕೇಳುವುದಕ್ಕೆ ಪ್ರಾರಂಭಿಸಿದ್ದಾರೆ. ನವೆಂಬರ್ ತಿಂಗಳ ಒಳಗೆ ಈ ವಿದ್ಯಮಾನ ಮುಗಿಯಲಿದೆ. ಒಂದು ವೇಳೆ ಸಿದ್ಧರಾಮಯ್ಯ ಸಿಎಂ ಕುರ್ಚಿ ನೀಡದಿದ್ದರೆ ಬಲವಂತವಾಗಿ ಡಿಕೆಶಿ ಕುರ್ಚಿಯನ್ನು ಕಸಿದುಕೊಳ್ಳಲಿದ್ದಾರೆ” ಎಂದರು.
ಇದನ್ನೂ ಓದಿ: ಮಂಗಳೂರು | ಒಬ್ಬಂಟಿ ಮಹಿಳೆ ಕೊಲೆ ಪ್ರಕರಣ: ಆರೋಪಿಯ ಬಂಧನ
“ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಅನುದಾನ ಇರುವುದಕ್ಕೆ ಮಾತ್ರ ಆ ಭಾಗದ ಶಾಸಕರಿಗೆ ಒಂದಷ್ಟು ಅನುದಾನ ಸಿಗುತ್ತದೆ. ಆದರೆ ಉಳಿದ ಭಾಗದ ಶಾಸಕರಿಗೆ ಯಾವುದೇ ಅನುದಾನ ಸಿಗುತ್ತಿಲ್ಲ. ಅವರಿಂದ ಯಾವುದೇ ಅಭಿವೃದ್ದಿ ಮಾಡಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯ ಜನರಿಗೆ ಬೆಲೆ ಏರಿಕೆಯ ಶಿಕ್ಷೆ ನೀಡುತ್ತಿದೆ. ಮಹಿಳೆಯರಿಗೆ ಗೃಹಲಕ್ಷ್ಮಿ ದುಡ್ಡು ಕೊಡದೆ ನಾಲ್ಕು ತಿಂಗಳಾಗಿವೆ. ಯಾವುದಾದರೂ ಚುನಾವಣೆ ಬಂದರೆ ಒಂದು ಕಂತು ಹಾಕುತ್ತಾರೆ. ಹೀಗಾಗಿ ಕಾಂಗ್ರೆಸ್ ಸರ್ಕಾರ ಜನರ ವಿಶ್ವಾಸ ಕಳೆದುಕೊಳ್ಳುತ್ತ ಬರುತ್ತಿದೆ” ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರದ ದುರಾಡಳಿತ ನೋಡಿರುವ ರಾಜ್ಯದ ಜನತೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುತ್ತಾರೆ. ಮುಂದಿನ ಬಾರಿ ನಾವು ಅಧಿಕಾರಕ್ಕೆ ಬರುವುದು ಖಚಿತ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದಿದ್ದಾರೆ.