ದೊಡ್ಡಬಳ್ಳಾಪುರದಲ್ಲಿ ಕೈಗಾರಿಕಾ ಪ್ರದೇಶದಲ್ಲಿ ಉದ್ಯಾನ(ಪಾರ್ಕ್ ಜಾಗ)ಕ್ಕೆಂದು ಮೀಸಲಿಟ್ಟ ಜಾಗದಲ್ಲಿ ಕೈಗಾರಿಕೆ ತ್ಯಾಜ್ಯವನ್ನು ಹೂತುಹಾಕಲಾಗುತ್ತಿತ್ತು. ಇದನ್ನು ರೆಡ್ ಹ್ಯಾಂಡ್ ಆಗಿ ಪತ್ತೆಹಚ್ಚಿದ ಗ್ರಾಮಸ್ಥರು ಗುತ್ತಿಗೆದಾರನನ್ನು ಪ್ರಶ್ನೆ ಮಾಡಿದರೆ ಆತ ಗ್ರಾಮಸ್ಥರ ಮೇಲೆಯೇ ದರ್ಪ ಮೆರೆದಿದ್ದಾನೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಓಬದೇನಹಳ್ಳಿ ಕೈಗಾರಿಕಾ ಪ್ರದೇಶ ಮತ್ತು ಅಲೂರು ದುದ್ದನಹಳ್ಳಿ ಗ್ರಾಮ ಪಂಚಾಯಿತಿ ಗಡಿಭಾಗದಲ್ಲಿನ ಉದ್ಯಾನಕ್ಕೆ ಮೀಸಲಿಟ್ಟ ಜಾಗ, ಸುಟ್ಟಘಟ್ಟ ಗ್ರಾಮಕ್ಕೆ ಸೇರಿದ ಈ ಜಾಗದಲ್ಲಿ ಕಸ ತ್ಯಾಜ್ಯ ವಿಲೇವಾರಿ ಮಾಡುವ ಗುತ್ತಿಗೆದಾರ ನಂಜೇಗೌಡ ಎಂಬಾತ ಯಾರಿಗೂ ಗೊತ್ತಾಗದಂತೆ ಗುಂಡಿ ತೋಡಿ ಕೈಗಾರಿಕಾ ತ್ಯಾಜ್ಯವನ್ನು ಹೂತು ಹಾಕುತ್ತಿದ್ದಾನೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.
ಓಬದೇನಹಳ್ಳಿ ನಿವಾಸಿ ಮುನಿರಾಜು ಮಾತನಾಡಿ, “ಥರ್ಮಾಕೋಲ್, ಆಹಾರ ತ್ಯಾಜ್ಯ, ಮೆಡಿಕಲ್ ವೇಸ್ಟೇಜ್, ರಾಸಾಯನಿಕ ಯುಕ್ತ ತ್ಯಾಜ್ಯವನ್ನು ತಂದು ಪಾರ್ಕ್ ಜಾಗದಲ್ಲಿ ಸುರಿಯಲಾಗುತ್ತಿದೆ. ಈ ತ್ಯಾಜ್ಯಕ್ಕೆ ಬೆಂಕಿ ಹಚ್ಚುತ್ತಾರೆ. ಮಣ್ಣುಸುರಿದು ಮುಚ್ಚುತ್ತಾರೆ. ಬೆಂಕಿ ಹಚ್ಚಿದಾಗ ಊರೆಲ್ಲ ದಟ್ಟ ಹೊಗೆಯಿಂದ ಆವರಸಿಕೊಳ್ಳುತ್ತದೆ. ಇದರಿಂದ ಯಾರೂ ಮನೆಗಳಲ್ಲಿ ವಾಸ ಮಾಡುವುದಕ್ಕೆ ಆಗುವುದಿಲ್ಲ. ಗುಡ್ಡದಹಳ್ಳಿ ನಂಜೇಗೌಡ ಎಂಬ ವ್ಯಕ್ತಿ ಟ್ರ್ಯಾಕ್ಟರ್ ಮೂಲಕ ತ್ಯಾಜ್ಯವನ್ನು ತಂದು ಸುರಿಯುತ್ತಿರುವುದನ್ನು ಗಮನಿಸಿ ಪ್ರಶ್ನೆ ಮಾಡಿದಾಗ ನಮ್ಮ ಮೇಲೆ ದರ್ಪದಿಂದ ಮಾತನಾಡಿ, ಹಲ್ಲೆ ಮಾಡಲು ಮುಂದಾಗಿದ್ದಾನೆ. ನಮಗೆ ನಮ್ಮ ಮಕ್ಕಳಿಗೆ ಹಾಗೂ ಮುಂದಿನ ಪೀಳಿಗೆಗೆ ಏನಾದರೂ ಹೆಚ್ಚುಕಮ್ಮಿಯಾದರೆ ಯಾರು ಹೊಣೆ. ಈ ಕೂಡಲೇ ತ್ಯಾಜ್ಯ ಸುರಿಯುವುದನ್ನು ನಿಲ್ಲಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಅಭಿವೃದ್ಧಿ ಅನುದಾನದಿಂದ ಪರಿಹಾರ ನೀಡುವುದು ಯಾವ ನ್ಯಾಯ: ಪಾಲಿಕೆ ಸದಸ್ಯ ಪ್ರಶ್ನೆ
ಸ್ಥಳಕ್ಕೆ ಅಲೂರು ದುದ್ದನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ನಂದಿನಿ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ, “ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು, ಮಣ್ಣಿನಲ್ಲಿ ಹೂತುಹಾಕಿರುವ ತ್ಯಾಜ್ಯವನ್ನು ಹೊರಗೆ ತೆಗೆದು ಸೂಕ್ತ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡುವಂತೆ ಗುತ್ತಿಗೆದಾರನಿಗೆ ಎಚ್ಚರಿಕೆ ನೀಡಲಾಗಿದೆ. ತ್ಯಾಜ್ಯ ಸುರಿದ ಕೈಗಾರಿಕೆ ಮತ್ತು ಗುತ್ತಿಗೆದಾರನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು” ಎಂದು ಹೇಳಿದರು.