ಕೇವಲ ಶ್ರೀಮಂತರು, ಅಧಿಕಾರಿಗಳು, ರಾಜಕೀಯ ವಂಶಸ್ಥರಿಗಷ್ಟೇ ಸೀಮಿತವಲ್ಲದೆ, ಸಾಮಾನ್ಯ ಜೀವಿಗೂ ತನ್ನ ಧ್ವನಿ ಎತ್ತುವ ವೇದಿಕೆ ಕಲ್ಪಿಸುವುದೇ ಪ್ರಜಾಪ್ರಭುತ್ವದ ನಿಜವಾದ ಸೊಗಸು. ಬದುಕು ಸಾಗಿಸಲು ದಿನವಿಡೀ ಪ್ಲಾಸ್ಟಿಕ್ ಆಯುವವರಿಗೂ ಕೈಯಲ್ಲಿ ಮತಪತ್ರ ಹಿಡಿದು ಜನಪ್ರತಿನಿಧಿಯಾಗುವ ಕನಸು ಕಾಣುವ ಹಕ್ಕು ಇದೆ ಎನ್ನುವುದನ್ನು ಇತ್ತೀಚಿನ ಘಟನೆಯೊಂದು ನೆನಪಿಸಿದೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಬೀದಿಗಳಲ್ಲಿ ಪ್ಲಾಸ್ಟಿಕ್ ಆಯುವ ಸರಳ ಜೀವಿ ಶಿವಪ್ಪ ಮೀಲಾಣಿ. ಸಾರ್ವಜನಿಕರು ನೀರು ಕುಡಿದು ಎಲ್ಲೆಂದರಲ್ಲಿ ಬಿಸಾಡಿದ ಪ್ಲಾಸ್ಟಿಕ್ ಬಾಟಲಿಗಳನ್ನು ಆಯ್ದುಕೊಂಡು, ಅವನ್ನು ಮಾರಾಟ ಮಾಡುವುದೇ ಅವರ ಬದುಕಿನ ಆಧಾರ. ಆ ಹಣದಲ್ಲೇ ಅವರ ಜೀವನ ಸಾಗುತ್ತದೆ.
ಆದರೆ, ಬದುಕಿನ ಕಷ್ಟದ ಹಿಂದೆ ಶಿವಪ್ಪ ಮೀಲಾಣಿ ಅವರ ಮನಸ್ಸು ದೊಡ್ಡ ಕನಸನ್ನು ಕಾಣುತ್ತಿದೆ. ಬಡವನಾಗಲೀ, ಸಿರಿವಂತನಾಗಲೀ ಪ್ರಜಾಪ್ರಭುತ್ವದಲ್ಲಿ ಸ್ಪರ್ಧಿಸುವ ಹಕ್ಕು ಎಲ್ಲರಿಗೂ ಇದೆ ಎಂಬ ನಂಬಿಕೆಯಿಂದ ಅವರು ಹೋರಾಟಕ್ಕೆ ಇಳಿಯುತ್ತಾರೆ. ಅದಕ್ಕಾಗಿಯೇ ಅವರು ವಿಧಾನಸಭೆ, ಎಪಿಎಂಸಿ, ಪುರಸಭೆ, ಸಹಕಾರಿ ಬ್ಯಾಂಕ್, ಸಕ್ಕರೆ ಕಾರ್ಖಾನೆ ಚುನಾವಣೆಗಳಲ್ಲಿ ಸ್ಪರ್ಧಿ ನಿರಂತರ ಸ್ಫರ್ಧೆಗಿಳಿಯುತ್ತಾರೆ. ಸ್ಪರ್ಧಿಸಿದ ಪ್ರತಿ ಬಾರಿಯೂ ಸೋಲು ಅನುಭವಿಸಿದ್ದಾರೆಯೇ ಹೊರತು, ಇದುವರೆಗೂ ಸ್ಪರ್ಧೆಯಿಂದ ಹಿಂದೆ ಸರಿದಿಲ್ಲ. ಇದು ಈಗಿನ ಬಹುತೇಕ ಯುವಕರಿಗೆ ಸ್ಫೂರ್ತಿ.

ಅವರ ಸ್ಪರ್ಧೆ ಗೆಲುವಿಗಾಗಿ ಮಾತ್ರವಲ್ಲ, ಸಮಾಜಕ್ಕೆ ಸಂದೇಶ ನೀಡುವ ಹಾದಿಯಾಗಿದೆ. ಹಣ ಇಲ್ಲದಿದ್ದರೂ, ಬೆಂಬಲದ ದೊಡ್ಡ ಬಳಗವಿಲ್ಲದಿದ್ದರೂ, ಧೈರ್ಯವಿದ್ದರೆ ಏನನ್ನೂ ಎದುರಿಸಬಹುದು ಎಂಬುದನ್ನು ಅವರು ತೋರಿಸಿದ್ದಾರೆ. ಶಿವಪ್ಪ ಮೀಲಾಣಿ ಕೇವಲ ಪ್ಲಾಸ್ಟಿಕ್ ಆಯ್ದುಕೊಳ್ಳುವ ವ್ಯಕ್ತಿಯಾಗಿ ಉಳಿಯದೆ, ಧೈರ್ಯ, ಆತ್ಮವಿಶ್ವಾಸ ಮತ್ತು ಪ್ರಜಾಪ್ರಭುತ್ವದ ಜೀವಂತ ಪಾಠವಾಗಿದ್ದಾರೆ.
ಈ ಕುರಿತು ಈ ದಿನ.ಕಾಮ್ ಜತೆ ಮಾತನಾಡಿದ ಶಿವಪ್ಪ ಮೀಲಾಣಿ, “ನಾನು ಬೆಳಗ್ಗೆ ಮೂರು ಗಂಟೆಗೆ ಎದ್ದು ಪಟ್ಟಣದಲ್ಲಿ ಸಾರ್ವಜನಿಕರು ನೀರು ಕುಡಿದು ಬಿಸಾಡಿದ ಪ್ಲಾಸ್ಟಿಕ್ ಆಯ್ದುಕೊಂಡು ಮಾರಾಟ ಮಾಡುತ್ತೇನೆ. ಜತೆಗೆ ಕಸವಿದ್ದರೆ ಅದನ್ನು ಸ್ವಚ್ಛಗೊಳಿಸುತ್ತೇನೆ. ನನ್ನದು ನಿಸ್ವಾರ್ಥ ಸೇವೆ. ಇದರಲ್ಲಿಯೇ ಬದುಕು ಸಾಗಿಸುತ್ತೇನೆ. ಜತೆಗೆ ಬಂದ ಹಣದಲ್ಲಿಯೇ ನಿರ್ಗತಿಕರಿಗೆ ಸಹಾಯ ಮಾಡುತ್ತೇನೆ. ಅಲ್ಲದೆ ನಾನು ವಿಧಾನಸಭಾಯಿಂದ ಹಿಡಿದು, ಸೊಸೈಟಿ ಚುನಾವಣೆ, ಸಕ್ಕರೆ ಕಾರ್ಖಾನೆಯ ಚುನಾವಣೆಗಳಲ್ಲಿಯೂ ಸ್ಪರ್ಧಿಸಿದ್ದೇನೆ. ಯಾವ ಚುನಾವಣೆಯಲ್ಲಿಯೂ ಗೆಲುವು ಸಾಧಿಸಿಲ್ಲ. ಆದರೆ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ. ಸೋಲೋ ಗೆಲುವೋ… ಸ್ಪರ್ಧಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಸ್ಪರ್ಧಿಸುವ ಹಕ್ಕು ಇದೆ. ಚುನಾವಣೆಗಳಲ್ಲಿ ನಾನು ಉಳಿದವರಂತೆ ಹಣ ಹಂಚುವುದಿಲ್ಲ. ಸರಾಯಿ ಹಂಚಿ ಮತದಾರರ ಆರೋಗ್ಯ ಹಾಳು ಮಾಡುವ ಕೆಲಸಕ್ಕೆ ಕೈ ಹಾಕುವುದಿಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡುವ ಅವಮಾನವಾಗುತ್ತದೆ. ಸೆಪ್ಟೆಂಬರ್ 14ರಂದು ನಡೆದ ಬೆಳಗಾವಿಯ ಶ್ರೀ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯ ಚುನಾವಣೆಯಲ್ಲಿ ದೊಡ್ಡವರ ವಿರುದ್ಧ ಸ್ಪರ್ಧೆ ಮಾಡಿ 678 ಮತಗಳನ್ನು ಪಡೆದಿದ್ದೇನೆ. ಚುನಾವಣೆಯಲ್ಲಿ ಸೋತಿರಬಹುದು, ಆದರೆ ಸ್ಪರ್ಧೆ ಮಾಡಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಶಿವಪ್ಪ ಮೀಲಾಣಿಯವರ ಚುನಾವಣೆಗಳಲ್ಲಿ ಸ್ಪರ್ಧಿಸುವ ಗುಣ ರಾಜಕೀಯ ಬದುಕು ಎಂಬುದು ಹಣವಿದ್ದವರಿಗೆ ಮಾತ್ರವಲ್ಲ, ಬಡವನಿಗೂ ಇದೆ ಎಂಬ ಸಂದೇಶ ನೀಡುತ್ತದೆ. ಆದರೆ ವಾಸ್ತವ ರಾಜಕೀಯದಲ್ಲಿ ಪರಿಸ್ಥಿತಿ ಬೇರೆಯೇ ಇದೆ. ಇಂದು ಚುನಾವಣೆಗಳು ಆಸ್ತಿ, ಹಣ, ಜಾತಿ, ಪ್ರಭಾವದ ಸುತ್ತ ತಿರುಗುತ್ತಿವೆ. ಮತದಾನ ಒಂದು ವ್ಯಾಪಾರ, ಅಭ್ಯರ್ಥಿ ಒಂದು ಹೂಡಿಕೆದಾರ, ಜನತೆ ಒಂದು ಮಾರುಕಟ್ಟೆ ಎಂಬ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಶಿವಪ್ಪ ಮೀಲಾಣಿ ಅವರ ನಿಲುವು ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ ವ್ಯಕ್ತಿಗೂ ಸ್ಥಳವಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಪ್ಲಾಸ್ಟಿಕ್ ಆಯ್ದು ಬದುಕುವ ವ್ಯಕ್ತಿ ಸಹ ಚುನಾವಣೆ ಅಂಗಳಕ್ಕಿಳಿಯುತ್ತಾನೆ ಎಂದರೆ, ಅದು ಪ್ರಜಾಪ್ರಭುತ್ವದ ಶಕ್ತಿ. ಆದರೆ, ಇಂತಹ ಧೈರ್ಯಶಾಲಿಗಳಿಗೆ ಸಮಾಜ ನೀಡುವ ಬೆಂಬಲವೇನು? ಮತದಾರರ ಮನಸ್ಸಿನಲ್ಲಿ ಹಣದ ಪ್ರಭಾವ, ಜಾತಿ ಲೆಕ್ಕಾಚಾರ, ಬಲದ ಆಕರ್ಷಣೆ ಹೀಗೆಯೇ ಮುಂದುವರಿದರೆ, ಸಾಮಾನ್ಯ ವ್ಯಕ್ತಿಯ ಸ್ಪರ್ಧೆಯೇ ಅರ್ಥಹೀನವಾಗುವುದಲ್ಲವೇ ?
ಶಿವಪ್ಪ ಮೀಲಾಣಿ ಅವರ ಹಾದಿ ರಾಜಕೀಯ ವ್ಯವಸ್ಥೆಯ ದೋಷಗಳಿಗೆ ಕನ್ನಡಿ ಹಿಡಿಯುತ್ತದೆ. ಪ್ರಜಾಪ್ರಭುತ್ವದ ನಿಜವಾದ ಶಕ್ತಿಯನ್ನು ಬದುಕಿನ ಮೂಲಕ ತೋರಿಸಿದರೂ, ವ್ಯವಸ್ಥೆಯ ದೋಷಗಳು ಅವರಂತಹವರನ್ನು ಗೆಲ್ಲದಂತೆ ತಡೆದಿವೆ.
ಇದನ್ನೂ ಓದಿ: ಬೆಳಗಾವಿ | ಡಿಸಿಸಿ ಬ್ಯಾಂಕ್ ಚುನಾವಣೆ; ಗ್ರಾಮ ದೇವತೆ ಮೇಲೆ ಆಣೆ ಪ್ರಮಾಣ
ಮೀಲಾಣಿ ಅವರ ಹಾದಿ ನಮ್ಮ ಸಮಾಜಕ್ಕೆ ಪ್ರಜಾಪ್ರಭುತ್ವದ ನಿಜವಾದ ಅರ್ಥವನ್ನು ತೋರಿಸುವ ಪಾಠವಾಗಿದೆ. ಹಣ, ಜಾತಿ, ಬಲ, ಪ್ರಭಾವಗಳ ನೆರವಿಲ್ಲದೆ ಸಾಮಾನ್ಯನೂ ಚುನಾವಣಾ ಅಂಗಳಕ್ಕಿಳಿಯಬಲ್ಲರೆಂಬುದು ಅವರ ಬದುಕಿನಿಂದ ತಿಳಿಯುತ್ತದೆ. ಆದರೆ, ಇಂತಹ ಧೈರ್ಯಶಾಲಿಗಳಿಗೆ ಸಮಾಜವೇ ಬೆಂಬಲ ನೀಡದಿದ್ದರೆ, ಪ್ರಜಾಪ್ರಭುತ್ವದ ಆತ್ಮವೇ ಕುಗ್ಗಿಬಿಡುತ್ತದೆ. ನಿಜವಾದ ಬದಲಾವಣೆಯಾಗಬೇಕಾದರೆ, ಜನರು ತಮ್ಮ ಮತವನ್ನು ಹಣಕ್ಕಲ್ಲ, ಮೌಲ್ಯಗಳಿಗೆ ನೀಡಬೇಕು. ಪ್ರಜಾಪ್ರಭುತ್ವ ಬಲಗೊಳ್ಳಬೇಕಾದರೆ ಪ್ರತಿಯೊಬ್ಬ ಸಾಮಾನ್ಯನಿಗೂ ಅವಕಾಶ ಸಿಗುವ ವಾತಾವರಣ ನಿರ್ಮಾಣವಾಗುವುದು ಅವಶ್ಯಕವಾಗಿದೆ. ಚುನಾವಣಾ ಹೋರಾಟಕ್ಕೆ ಹಣಬಲ ಬೇಕೇ ಬೇಕು ಎನ್ನುವ ಸಾರ್ವಕಾಲಿಕ ಕಲ್ಪನೆಯೊಂದನ್ನು ಮೀರಿ, ಸಮಾಜದ ತಳ ವರ್ಗದದವರೂ ಜನರ ಬೆಂಬಲದ ಭರವಸೆಯೊಂದಿಗೆ ರಾಜಕೀಯ ಕಣ ಪ್ರವೇಶಿಸಲು ಧೈರ್ಯ ಮಾಡುವ ಮೀಲಾಣಿಯವರಂತಹ ಜೀವನೋತ್ಸಾಹ, ಅವರಲ್ಲಿರುವ ಅರಿವು, ಅವರು ಜೀವನಕ್ಕೆ ನೀಡುವ ಮೌಲ್ಯಗಳು ನಿಜಕ್ಕೂ ಸಮಾಜದ ಬಹುಜನರಿಗೆ ಮಾರ್ಗದರ್ಶನ, ಸ್ಫೂರ್ತಿಯ ಸೆಲೆ.