ಉಡುಪಿ ನಗರಸಭೆಗೆ ಸಂಬಂಧಿಸಿದ ಅಲೆವೂರು ಗ್ರಾಪಂ ವ್ಯಾಪ್ತಿಯ ಕರ್ವಾಲುವಿನಲ್ಲಿರುವ ಘನ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು, ಕೋಟ್ಯಂತರ ರೂ. ನಷ್ಟ ಉಂಟಾಗಿರುವುದಾಗಿ ಅಂದಾಜಿಸಲಾಗಿದೆ.
ಇಂದು ಬೆಳಗಿನ ಜಾವ 3ಗಂಟೆ ಸುಮಾರಿಗೆ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆ ಇಡೀ ಘಟಕವನ್ನು ಆವರಿಸಿತು. ಇದರಿಂದ ಕಟ್ಟಡ, ಶೆಡ್‌ನಲ್ಲಿರುವ ಹಲವು ಯಂತ್ರೋಪಕಣಗಳು, ತ್ಯಾಜ್ಯಗಳು ಸಂಪೂರ್ಣವಾಗಿ ಸುಟ್ಟು ಹೋಗಿರುವುದಾಗಿ ತಿಳಿದುಬಂದಿದೆ.
ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಉಡುಪಿ ಅಗ್ನಿಶಾಮಕದಳದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಎರಡು ವಾಹನಗಳಲ್ಲಿ ಬೆಂಕಿ ನಂದಿಸುವ ಕಾರ್ಯ ನಡೆಸಿದರು. ಇದೀಗ ಬೆಂಕಿ ನಿಯಂತ್ರಣಕ್ಕೆ ಬಂದಿದೆ ಎಂದು ತಿಳಿದುಬಂದಿದೆ.
ಘಟನೆಯಿಂದ ಸುಮಾರು 6-7ಕೋಟಿ ರೂ. ನಷ್ಟ ಉಂಟಾಗಿರಬಹುದೆಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.