ಈರುಳ್ಳಿ ಬೆಳೆ ಹುಲುಸಾಗಿ ಬೆಳೆದು ಉತ್ತಮ ಇಳುವರಿ ಬಂದಿದ್ದನ್ನು ಕಂಡು ರೈತರ ಮೊಗದಲ್ಲಿ ಮಂದಹಾಸ ಮೂಡಿತ್ತು. ಈ ಬಾರಿ ಒಳ್ಳೆಯ ಬೆಲೆ ಬಂತೆಂದರೆ ನಮ್ಮ ಬದುಕು ಹಸನಾಗುತ್ತದೆಂಬ ನಿರೀಕ್ಷೆಯಿಂದ ಕಾಯುತ್ತಿದ್ದರು. ಇದೀಗ ಈರುಳ್ಳಿ ಕಟಾವಾಗಿ ಮೂರು ತಿಂಗಳಾಗಿದೆ. ಆದರೂ ತಮಗೆ ಒಳ್ಳೆ ಬೆಲೆ ಬರುತ್ತದೆಂದು ನೂರಾರು ಮೂಟೆಗಳನ್ನು ಜತನದಿಂದ ಕಾಪಾಡಿಕೊಂಡು ಬರುತ್ತಿರುವ ರೈತರು, ಕುಸಿಯುತ್ತಿರುವ ಈರುಳ್ಳಿ ಬೆಲೆಯನ್ನು ಕಂಡು ನಿಬ್ಬೆರಗಾಗಿದ್ದಾರೆ. ಅಲ್ಲದೆ ಉತ್ತಮ ಬೆಲೆ ಬರುತ್ತದೆಂಬ ಭರವಸೆ ದಿನೇ ದಿನೆ ಕ್ಷೀಣಿಸುತ್ತಿದೆ. ಮಾರುಕಟ್ಟೆಯಲ್ಲಿ ಈವರೆಗೂ ಸರಿಯಾದ ಬೆಲೆ ಬರದೇ ಇರುವುದರಿಂದ ಈರುಳ್ಳಿ ಬೆಳೆಗಾರರು ಕಂಗಾಲಾಗಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಿಮ್ಮನಾಯಕನಹಳ್ಳಿ ವ್ಯಾಪ್ತಿಯ ಈರುಳ್ಳಿ ಬೆಳೆಗಾರರು ಬೆಲೆ ಕುಸಿತದಿಂದ ನಷ್ಟ ಅನುಭವಿಸಿ ಹೈರಾಣಾಗಿದ್ದಾರೆ.
ನಾವು ಬೆಳೆ ನಾಟಿ ಮಾಡುವಾಗ ಉತ್ತಮ ಬೆಲೆಯಿರುತ್ತದೆ. ಆದರೆ ಬೆಳೆ ಕಟಾವಾಗುವ ವೇಳೆ ಬೆಲೆ ಇರುವುದಿಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದರೂ ಕೂಡ ರೈತರಿಗೆ ಬೆಲೆ ಸಿಗುತ್ತಿಲ್ಲ. ಹಾಗಾಗಿ ರೈತರು ಪ್ರಾಣ ಕಳೆದುಕೊಳ್ಳುವ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಂಡು ರೈತರಿಗೆ ಅನುಕೂಲ ಮಾಡಿಕೊಡಬೇಕು. ರೈತರು ಬೇರೆಯವರ ಬಳಿ ಸಾಲ ಪಡೆದು ಬೆಳೆ ಬಿತ್ತನೆ ಮಾಡಿ, ಈರುಳ್ಳಿ ಬೆಳೆಗೆ ಬೆಲೆ ಸಿಗದ ಹಿನ್ನಲೆಯಲ್ಲಿ ಕೊಟ್ಟ ಸಾಲ ತೀರಿಸಲಾಗದೆ ಬಚ್ಚಿಟ್ಟುಕೊಳ್ಳುವಂತಾಗಿದೆ. ಬೆಲೆ ಬರದಿರುವ ಸಂದರ್ಭದಲ್ಲಿ ಸಾಲ ಮರುಪಾವತಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸರ್ಕಾರ ಈರುಳ್ಳಿ ಬೆಳೆಗೆ ಬೆಂಬಲ ಬೆಲೆ ಕೊಡಬೇಕು ಎಂಬುದು ರೈತರ ಆಗ್ರಹವಾಗಿದೆ.

ಈರುಳ್ಳಿ ಬೆಳೆದ ರೈತರಿಗೆ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿದರೆ, ಸರ್ಕಾರ ರೈತರ ಪರವಾಗಿದೆಯೆಂದು ನಾವು ನಂಬುತ್ತೇವೆ. ಇಲ್ಲದಿದ್ದರೆ ಕೇವಲ ಹಸಿರು ಟವೆಲ್ ಹಾಕಿಕೊಂಡು ಷೋ ಮಾತ್ರ ತೋರಿಸ್ತಾರೆಂದು ಅಂದುಕೊಳ್ಳುತ್ತೇವೆ ಎಂಬುದು ರೈತರ ನೋವಿನ ಮಾತುಗಳಾಗಿವೆ.
ರೈತ ಸಂಘ(ಪುಟ್ಟಣ ಬಣ) ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಟಿ ಕೆ ಅರುಣ್ ಕುಮಾರ್ ಮಾತನಾಡಿ, “ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ, ತಿಮ್ಮನಾಯಕನಹಳ್ಳಿ, ತಲಕಾಲಬೆಟ್ಟ, ಗಂಜಿಕುಂಟೆ ಸೇರಿದಂತೆ ತಾಲೂಕಿನ ಎಲ್ಲ ಪಂಚಾಯಿತಿ ವ್ಯಾಪ್ತಿಯ ರೈತರು ಶೇ.60ಕ್ಕೂ ಅಧಿಕ ಪ್ರಮಾಣದಷ್ಟು ಈರುಳ್ಳಿ ಬೆಳೆಯನ್ನೇ ಬೆಳೆಯುತ್ತಾರೆ. ಈರುಳ್ಳಿ ಬೆಳೆ ಬೆಳೆದರೆ ನಾಲ್ಕು ಕಾಸು ಸಂಪಾದನೆಯಾಗುತ್ತದೆಂದು ಈರುಳ್ಳಿ ಬೆಳೆ ಬೆಳೆಯುತ್ತಾರೆ. ಆದರೆ ಈಗ ಈರುಳ್ಳಿ ಬೆಳೆಗೆ ಬೆಲೆ ಸಿಗದ ಹಿನ್ನಲೆಯಲ್ಲಿ ರೈತರು ಕಂಗಾಲಾಗಿದ್ದು, ಒಂದು ವೇಳೆ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಲಿಲ್ಲವೆಂದರೆ ರೈತ ಸಂಘದಿಂದ ನಾವೆಲ್ಲರೂ ಸೇರಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಎದುರು ತೀವ್ರ ಹೋರಾಟ ಮಾಡುತ್ತೇವೆ” ಎಂದು ಎಂದು ಎಚ್ಚರಿಕೆ ನೀಡಿದರು.

ಈರುಳ್ಳಿ ಬೆಳೆಗಾರ ಶ್ರೀನಿವಾಸ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಸುಮಾರು 3 ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆ ಬೆಳೆದಿದ್ದು, ಒಂದು ಮೂಟೆ ಈರುಳ್ಳಿ ಬೆಳೆಯಲು ₹500ರಿಂದ ₹600ರವರೆಗೆ ಖರ್ಚಾಗಿದೆ. ಆದ್ರೆ ಮಾರುಕಟ್ಟೆ ಬೆಲೆ ₹100ರಿಂದ ₹150ರಷ್ಟಿದೆ. ಈ ಬಾರಿ ಒಳ್ಳೆ ಇಳುವರಿ ಬಂದಿದ್ದು, ನನ್ನ ಬಳಿ 400ಕ್ಕೂ ಹೆಚ್ಚು ಈರುಳ್ಳಿ ಮೂಟೆಗಳಿವೆ. ನನಗೆ 2 ಲಕ್ಷಕ್ಕಿಂತ ಹೆಚ್ಚು ಹಣ ನಷ್ಟವಾಗುತ್ತದೆ. ನಾನು ಸಾಲ ಮಾಡಿ ಈರುಳ್ಳಿ ಬೆಳೆ ಬೆಳೆದಿದ್ದೆ, ಆದರೆ ಸಮರ್ಪಕ ಬೆಲೆ ಇಲ್ಲದೆ ನಮ್ಮ ಪರಿಸ್ಥಿತಿಯನ್ನು ಯಾರೂ ಕೇಳುವವರೇ ಇಲ್ಲದಂತಾಗಿದೆ. ಸರ್ಕಾರ ಕೂಡಲೇ ಈರುಳ್ಳಿ ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಇಲ್ಲದಿದ್ದರೆ ನಾವು ವಿಷ ಕುಡಿಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ” ಎಂದು ಕಳವಳ ವ್ಯಕ್ತಪಡಿಸಿದರು.

ತಿಮ್ಮನಾಯಕನಹಳ್ಳಿ ಈರುಳ್ಳಿ ಬೆಳೆಗಾರ ಮುನಿರೆಡ್ಡಿ ಮಾತನಾಡಿ, “ಈರುಳ್ಳಿ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದೆ ನಾವು ಕಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾನು ಸಾಲ ಮಾಡಿ, 4 ಎಕರೆ ಜಾಗದಲ್ಲಿ ಈರುಳ್ಳಿ ಬೆಳೆ ಬೆಳೆದಿದ್ದೆ. ಸುಮಾರು ₹3 ಲಕ್ಷಕ್ಕೂ ಹೆಚ್ಚು ಹಣ ಖರ್ಚಾಗಿದೆ. ಇದನ್ನು ಮಾರಾಟ ಮಾಡಿದರೆ ಕೇವಲ 1 ಲಕ್ಷ ರೂಪಾಯಿ ಬರುತ್ತದೆ ಅಷ್ಟೆ. ನಮಗೆ ತುಂಬಾ ನಷ್ಟವಾಗಿದ್ದು, ಸರ್ಕಾರ ಬೆಂಬಲ ಬೆಲೆ ನೀಡಬೇಕು” ಎಂದು ಆಗ್ರಹಿಸಿದರು.

ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೃಷ್ಣಪ್ಪ ಮಾತನಾಡಿ, “ನಮಗೆ ಈರುಳ್ಳಿ ಬೆಳೆ ಬೆಳೆಯಲು ಒಂದು ಮೂಟೆಗೆ ₹400 ಖರ್ಚು ಬರುತ್ತೆ, ಕೆಲಸ ಮಾಡುವವರಿಗೆ ನಾವು ದಿನಕ್ಕೆ ₹450 ಕೂಲಿ, ಎರಡು ಬಾರಿ ಊಟ ಕೊಡಬೇಕಾಗುತ್ತದೆ. ಒಂದು ಮೂಟೆ ಗೊಬ್ಬರಕ್ಕೆ ನಾವು ₹1,200 ಕೊಡಬೇಕು. ಈರುಳ್ಳಿ ಬೆಳೆಗೆ ನಿಗದಿ ಬೆಲೆ ಇಲ್ಲ, ಈರುಳ್ಳಿಗೆ ₹1,000ದಿಂದ ₹1,200ರಷ್ಟಾದರೂ ಬೆಲೆ ನಿಗದಿ ಮಾಡಿದರೆ ರೈತರಿಗೆ ಬಹಳ ಅನುಕೂಲವಾಗುತ್ತದೆ. ಇಲ್ಲದಿದ್ದರೆ ಈರುಳ್ಳಿ ಬೆಳೆಗಾರರು ವಿಷ ಕುಡಿಯುವ ಪರಿಸ್ಥಿತಿ ಎದುರಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿದ್ದೀರಾ? ಛತ್ತೀಸ್‌ಗಢದಲ್ಲಿ ಕ್ರೈಸ್ತ ಸನ್ಯಾಸಿನಿಯರ ಬಂಧನ: ಅಲ್ಪಸಂಖ್ಯಾತರ ಮೇಲಿನ ಗೂಂಡಾಗಿರಿ
“ಮಾವು ಬೆಳೆಗೆ ಸರ್ಕಾರ ಬೆಂಬಲ ಬೆಲೆ ನೀಡಿದ ರೀತಿಯಲ್ಲಿ ಈರುಳ್ಳಿ ಬೆಳೆಗಾರರಿಗೂ ನೀಡಿದರೆ ರೈತರಿಗೆ ಉಳಿಗಾಲವಿರುತ್ತದೆ. ನಮಗೆ ಈರುಳ್ಳಿ ಬೇಕು ಎನ್ನುವ ವ್ಯಾಪಾರಸ್ಥರೂ ಇಲ್ಲ, ನಾವು ಹಾಕಿರುವ ಬಂಡವಾಳವೂ ನಮ್ಮ ಕೈಗೆ ಸಿಗುತ್ತಿಲ್ಲ. ನಾವೆಲ್ಲ ರೈತರೂ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಬಗ್ಗೆ ಕೃಷಿ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ, ಸರ್ಕಾರ ಬೆಂಬಲ ಬೆಲೆ ನೀಡಲಿಲ್ಲವೆಂದರೆ ರೈತ ಸಂಘದಿಂದ ಪ್ರತಿಭಟನೆ ಮಾಡುತ್ತೇವೆ” ಎಂದರು.
