ಮೈಸೂರಿನ ಪ್ರಾದೇಶಿಕ ತಂಬಾಕು ಮಂಡಳಿ ವಲಯ ಕಚೇರಿಯಲ್ಲಿ ಭಾರತ ಸರ್ಕಾರದ ತಂಬಾಕು ಮಂಡಳಿ ಕಾರ್ಯಕಾರಿ ನಿರ್ದೇಶಕರಾದ ವಿಶ್ವಶ್ರೀಯವರನ್ನು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರಾದ ಹೊಸೂರು ಕುಮಾರ್ ನೇತೃತ್ವದ ನಿಯೋಗ ಭೇಟಿ ಮಾಡಿ ರೈತರ ಮೇಲಿನ ದಂಡದ ಶುಲ್ಕವನ್ನು ಮನ್ನಾ ಮಾಡಬೇಕೆಂದು ಮನವಿ ಪತ್ರ ಸಲ್ಲಿಸಿದರು.
ಜಿಲ್ಲಾಧ್ಯಕ್ಷರಾದ ಹೊಸೂರ್ ಕುಮಾರ್ ಮಾತನಾಡಿ, ಈಗಾಗಲೇ ಶೇ% 25 ಮತ್ತು 50 ರಷ್ಟು ಪ್ರತಿಶತ ತಂಬಾಕು ಮಾರಾಟ ಮಾಡಿದ ರೈತರ ದಂಡದ ಹಣವನ್ನು ಮನ್ನಾ ಮಾಡಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಜೊತೆಗೆ, ಕರ್ನಾಟಕದಲ್ಲಿ ಶೇ% 70 ರಷ್ಟು ತಂಬಾಕು ರೈತರು ಸಣ್ಣ ಹಿಡಿವಳಿದಾರರಾಗಿದ್ದು ಕಳೆದ ವರ್ಷ ಅತಿಯಾದ ಮಳೆಯಿಂದಾಗಿ ಬೆಳೆ ನಷ್ಟ ಉಂಟಾಗಿ ರೈತರು ತಂಬಾಕು ಮಾರಾಟ ಮಾಡಲು ಸಾಧ್ಯವಾಗಿರುವುದಿಲ್ಲ. ಇದರೊಂದಿಗೆ ಕೆಳದರ್ಜೆ ತಂಬಾಕು ಉತ್ಪಾದನೆ ಆಗಿರುವ ಕಾರಣ, ಸದರಿ ತಂಬಾಕು ಮಾರಾಟ ಮಾಡಲಾಗುತ್ತಿಲ್ಲ. ಹಾಗೂ ಖರೀದಿದರಾರು ಸಹ ಮುಂದೆ ಬರುತ್ತಿಲ್ಲ.
ಈ ಕಾರಣದಿಂದ ತಂಬಾಕು ಮಾರಾಟ ಮಾಡಲಾಗದೆ, ರೈತರಿಗೆ ದಂಡದ ಶುಲ್ಕವನ್ನು ಕಟ್ಟಲು ಸಾಧ್ಯವಾಗುತ್ತಿಲ್ಲ. ಹಾಲಿ ವ್ಯವಸಾಯದ ಸಮಯವಾದ್ದರಿಂದ ದುಬಾರಿ ದಂಡದ ಶುಲ್ಕ ಹೊಂದಿಸಲು ರೈತರು ಅಸಮರ್ಥರಾಗಿದ್ದಾರೆ. ಆದ್ದರಿಂದ, ಈ ಬಾರಿಯ ದಂಡದ ಶುಲ್ಕವನ್ನು ಮನ್ನಾ ಮಾಡಿ ರೈತರ ಪರವಾನಿಗೆ ನವೀಕರಿಸಲು ಅನುಕೂಲ ಮಾಡಿಕೊಡಬೇಕು. ಈ ಹಿಂದಿನ ಮೂರು ವರ್ಷಗಳಿಂದ ಡ್ರಾಪ್ ಆಗಿರುವ ಲೈಸೆನ್ಸ್ ಗಳನ್ನು ನವೀಕರಿಸಿ ಕೊಡಬೇಕೆಂದು ಮನವಿ ಸಲ್ಲಿಸಿರುವುದಾಗಿ ಹೇಳಿದರು.
ಈ ವಿಶೇಷ ಸುದ್ದಿ ಓದಿದ್ದೀರಾ?ಆಶಾ ಕಾರ್ಯಕರ್ತೆಯರಿಗೆ ₹10 ಸಾವಿರ ನಿಶ್ಚಿತ ಗೌರವಧನದ ಆಶ್ವಾಸನೆ; ಕೊಟ್ಟ ಮಾತು ಮರೆತ ಆಡಳಿತ ಸರ್ಕಾರ
ಕರ್ನಾಟಕ ತಂಬಾಕು ಮಂಡಳಿ ಹರಾಜು ನಿರ್ದೇಶಕ ಶ್ರೀನಿವಾಸ್, ತಂಬಾಕು ಮಂಡಳಿ ನಿರ್ದೇಶಕ ವಿಕ್ರಂ ರಾಜೇಗೌಡ , ಆರ್‌ಎಂಒ ವೇಣುಗೋಪಾಲ್, ತಂಬಾಕು ಬೆಳೆಗಾರರ ಹಿತರಕ್ಷಣ ಸಮಿತಿಯ ಅಧ್ಯಕ್ಷ ಮೋದೂರು ಶಿವಣ್ಣ, ಗೌರವಾಧ್ಯಕ್ಷ ಉಂಡವಾಡಿ ಚಂದ್ರೇಗೌಡ, ರೈತ ಸಂಘದ ಮುಖಂಡ ಸತೀಶ್ ನಿಯೋಗದಲ್ಲಿ ಇದ್ದರು.