ದಕ್ಷಿಣ ಕನ್ನಡ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಮತ್ತು ಹಿರಿಯ ಪತ್ರಕರ್ತ ಅಬ್ದುಲ್ ಸಲಾಮ್ ಪುತ್ತಿಗೆ ವಿರುದ್ಧ ಪುತ್ತೂರು ವೈದ್ಯಕೀಯ ಸಂಘವು (ಐಎಂಎ) ದೂರು ದಾಖಲಿಸಿದೆ. ಐಎಂಎ ನಡೆಯು ಹತಾಶೆಯ ಪರಮಾವಧಿ ಮತ್ತು ಪ್ರಜಾಪ್ರಭುತ್ವ ವಿರೋಧಿ ಧೋರಣೆಯಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಸಿಪಿಐ(ಎಂ),”ಖಾಸಗಿ ಆಸ್ಪತ್ರೆಗಳ ವಿರುದ್ಧದ ಮುನೀರ್ ಕಾಟಿಪಳ್ಳ ಅವರು ನಿರಂತರವಾಗಿ ನಡೆಸುತ್ತಿರುವ ಹೋರಾಟವನ್ನು ಸೆದೆಬಡಿಯಲು, ಪುತ್ತೂರು ಸಾರ್ವಜನಿಕ ಆಸ್ಪತ್ರೆಯ ಘಟನೆಗೆ ಸಂಬಂಧಿಸಿ ಕೋಮು ಧ್ರುವೀಕರಣದ ಹೋರಾಟದಲ್ಲಿ ವೈದ್ಯರ ಕಳಂಕ ಪೂರಿತ ಪಾತ್ರವನ್ನು ಬಹಿರಂಗಗೊಳಿಸಿದ ಕಾರಣಕ್ಕಾಗಿ ಅವರ ವಿರುದ್ಧ ಕೋಮುವಾದಿ ಮನೋಭಾವ ಹೊಂದಿರುವ ವೈದ್ಯರ ಸಂಘದ ಪದಾಧಿಕಾರಿಗಳು ಸುಳ್ಳು ದೂರು ದಾಖಲಿಸಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದೆ.
“ಭಾರತೀಯ ವೈದ್ಯಕೀಯ ಸಂಘ ಪುತ್ತೂರು ಇದರ ಘಟಕ ಕಾರ್ಯದರ್ಶಿಯವರು ಪ್ರಾರಂಭದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ, ಅದರಲ್ಲಿ ಸತ್ಯಾಂಶ ಇಲ್ಲವೆಂದು ಹಿಂಬರಹ ದೊರೆತ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ವೈದ್ಯಕೀಯ ವೃತ್ತಿಯ ಘನತೆ, ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಖಾಸಗಿ ದೂರು ನೀಡಿ ಆ ಮೂಲಕ ತನ್ನ ಕುಕೃತ್ಯದ ಬೇಳೆ ಬೇಯಿಸುವ ಹುನ್ನಾರವನ್ನು ಪಕ್ಷ ಬಲವಾಗಿ ವಿರೋಧಿಸುತ್ತದೆ. ಎಲ್ಲಾ ರೀತಿಯಿಂದಲೂ ಇದರ ವಿರುದ್ಧ, ಕಾನೂನಾತ್ಮಕವಾಗಿ ಮತ್ತು ಸಂಘಟಿತ ಜನಾಂದೋಲನ, ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ” ಎಂದು ಪಕ್ಷವು ತಿಳಿಸಿದೆ.
ಈ ಲೇಖನ ಓದಿದ್ದೀರಾ?: ಕರ್ನಾಟಕದ ನೂತನ ಪೊಲೀಸ್ ಮುಖ್ಯಸ್ಥ ಎಂ.ಎ ಸಲೀಂ ಯಾರು?
“ಸಂಘದ ಕಾರ್ಯದರ್ಶಿ ಡಾ. ಗಣೇಶ್ ಪ್ರಸಾದ್ ಮುದ್ರಾಜೆಯವರ ಬಗ್ಗೆ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಕೋಮು ವಿಷ ಬೀಜ ಬಿತ್ತುವ ಪ್ರವೃತ್ತಿಯ ವಿರುದ್ಧ ಜನರಲ್ಲಿ ವ್ಯಾಪಕ ಅಸಮಾಧಾನವಿದೆ. ಪಕ್ಷವು, ವೈದ್ಯಕೀಯ ರಂಗವನ್ನು ಕೋಮುವಾದದಿಂದ ಮಲಿನಗೊಳಿಸುತ್ತಿರುವ ಶಕ್ತಿಗಳ ವಿರುದ್ಧ ದೃಢವಾದ ಹೋರಾಟ ನಡೆಸಲಿದೆ. ಕೋಮು ಶಕ್ತಿಗಳೊಂದಿಗೆ ಪುತ್ತೂರು ವೈದ್ಯರ ಸಂಘದ ನಾಯಕತ್ವ ಹೊಂದಿರುವ ಅನೈತಿಕ ಮೈತ್ರಿಯನ್ನು ಬಹಿರಂಗಪಡಿಸಲಿದೆ. ಮುನೀರ್ ಕಾಟಿಪಳ್ಳ ಅವರ ಮೇಲಿನ ದುರುದ್ದೇಶಪೂರಿತ ಎಫ್‍ಐಆರ್ ವಿರುದ್ಧ ಕಾನೂನು ಸಮರ ನಡೆಸುತ್ತೇವೆ” ಎಂದು ಸಿಪಿಐಎಂ ಹೇಳಿದೆ.
ಪುತ್ತೂರು ವೈದ್ಯಕೀಯ ಸಂಘ ಮತ್ತು ಮಂಗಳೂರು ಶಾಖೆಗಳು ಈ ಬಗ್ಗೆ ನೀಡಿರುವ ಪತ್ರಿಕಾ ಹೇಳಿಕೆಗಳು, ಸರ್ವಾಧಿಕಾರಿ ಮತ್ತು ಗೂಂಡಾಗಿರಿ ಮಾದರಿಯ ದಬ್ಬಾಳಿಕೆ ಹಾಗೂ ಬ್ಲಾಕ್‌ಮೇಲ್ ಮಾಡಿ ಸಾರ್ವಜನಿಕರನ್ನು ನಿಯಂತ್ರಿಸುವ ಉದ್ದೇಶವನ್ನು ಹೊಂದಿದೆ. ಕರ್ನಾಟಕ ಸರಕಾರ ಜಾರಿಗೆ ತಂದಿರುವ ವೈದ್ಯಕೀಯ ಸೇವಾ ಸುರಕ್ಷಾ ಕಾನೂನನ್ನು ದುರ್ಬಳಕೆ ಮಾಡಲಾಗಿದ್ದು, ಈ ಬಗ್ಗೆ ಪ್ರತಿಭಟಿಸಲಾಗುವುದು. ಸಮಾನ ಮನಸ್ಕ ಸಂಘಟನೆಗಳೊಂದಿಗೆ ಸೇರಿ ಖಂಡನಾ ಸಭೆ, ಜನಾಂದೋಲನ ನಡೆಸಲು ಪಕ್ಷವು ನಿರ್ಧರಿಸಲಾಗಿದೆ.
ಈ ಲೇಖನ ಓದಿದ್ದೀರಾ?: ಬೆಂಗಳೂರು ಅರಮನೆ ಜಾಗ ವಿವಾದ: ಸರ್ಕಾರಕ್ಕೆ ₹3,000 ಕೋಟಿ ಹೊರೆ
ವೈದ್ಯಕೀಯ ಸಂಘ ಪುತ್ತೂರು ಮತ್ತು ಮಂಗಳೂರು ಶಾಖೆಗಳ ವಿರುದ್ಧ ಅವರ ಸಂಘದ ವೈದ್ಯಕೀಯ ನೊಂದಾವಣೆ ರದ್ದು ಮಾಡಲು ಸಂಬಂಧಿಸಿ ಕೇಂದ್ರ ಸಮಿತಿಗೆ ದಾಖಲೆಗಳ ಸಹಿತ ವಿವರವಾದ ಮನವಿ ಸಲ್ಲಿಸಲು ಸಿಪಿಐ(ಎಂ) ಪಕ್ಷ ತೀರ್ಮಾನಿಸಿದೆ.
ವೈದ್ಯರ ಸಂಘಗಳು ವೈದ್ಯಕೀಯ ಕ್ಷೇತ್ರದ ಘನತೆಯನ್ನು, ಅದರ ಆದರ್ಶಗಳನ್ನು ಎತ್ತಿ ಹಿಡಿಯುವ ಜವಾಬ್ದಾರಿಯನ್ನೂ ಹೊಂದಿದೆ. ಆದರೆ, ಪುತ್ತೂರು ಹಾಗೂ ಮಂಗಳೂರು ಘಟಕಗಳು ಈ ಕುರಿತು ಯಾವುದೇ ಸಂದರ್ಭದಲ್ಲಿ ಚಕಾರ ಎತ್ತಿದ್ದನ್ನು ಯಾರೂ ಕಂಡಿಲ್ಲ. ವೈದ್ಯಕೀಯ ಕ್ಷೇತ್ರದ ಕಾರ್ಪೊರೇಟೀಕರಣ ದ.ಕ.ಜಿಲ್ಲೆಯಲ್ಲಿ ಉಂಟು ಮಾಡಿರುವ ತಲ್ಲಣಗಳ ಕುರಿತು, ಮುನೀರ್ ಕಾಟಿಪಳ್ಳ ವಿರುದ್ಧ ಸಮರ ಸಾರಿರುವ ವೈದ್ಯರ ಸಂಘದ ಪ್ರಮುಖರು ಒಂದು ಹೇಳಿಕೆಯನ್ನೂ ಈವರಗೆ ನೀಡಿಲ್ಲ. ವೈದ್ಯಕೀಯ ಕ್ಷೇತ್ರದಿಂದ ತೊಂದರೆಗೊಳಗಾದ ಸಂತ್ರಸ್ತರು ನ್ಯಾಯಕ್ಕಾಗಿ ಧ್ವನಿ ಎತ್ತುವುದನ್ನು ಹತ್ತಿಕ್ಕುವುದರಲ್ಲಷ್ಟೇ ವೈದ್ಯರ ಸಂಘದ ಈಗಿನ ನಾಯಕತ್ವ ತೊಡಗಿಸಿಕೊಂಡಿದೆ. ಮುನೀರ್ ಕಾಟಿಪಳ್ಳರ ಮೇಲಿನ ಮೊಕದ್ದಮೆಯು ಈ ಹಿನ್ನಲೆಯನ್ನು ಹೊಂದಿದೆ. ಈ ಎಲ್ಲಾ ಆಯಾಮಗಳನ್ನು ಒಳಗೊಂಡು ಪಕ್ಷವು, ವೈದ್ಯರ ಸಂಘದ ದಬ್ಬಾಳಿಕೆ ಮತ್ತು ಸುಳ್ಳು ಮೊಕದ್ದಮೆಯ ವಿರುದ್ಧ ಬಲವಾದ ಹೋರಾಟ ನಡೆಸಲಿದೆ ಎಂದು ಸಿಪಿಐ(ಎಂ) ದ.ಕ.ಜಿಲ್ಲಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.