“ಗಾಢ ನಿದ್ದೆಯಲ್ಲಿದ್ದ ನಾವು ಕಣ್ಣು ತೆರೆದು ನೋಡುವ ಮನೆಯೊಳಗೆ ನೀರು ತುಂಬಿತ್ತು. ವಿದ್ಯುತ್ ಸಂಪರ್ಕ ಕಡಿತವಾಗಿದ್ದರಿಂದ ಮನೆಯಲ್ಲಿ ಕಗ್ಗತ್ತಲು ಆವರಿಸಿತ್ತು. ಹಾಗೋ ಹೀಗೋ ತಡಕಾಡಿ ಮೊಬೈಲ್ ಫೋನ್ ಹುಡುಕಾಡಿ ಸಮಯ ನೋಡುವಾಗ ಮಧ್ಯ ರಾತ್ರಿ ಕಳೆದಿತ್ತು. ಮಲಗಿದಾಗ ಎಲ್ಲವೂ ಚೆನ್ನಾಗಿತ್ತು. ಈಗ ಏನಾಯಿತು. ಮುಂದೆ ಏನಾಗಲಿದೆ ಎಂಬ ಭೀತಿಯಿಂದ ಎದೆ ಝಲ್ ಎನ್ನುತ್ತಿತ್ತು. ಮನೆಯೊಳಗೂ ನೀರು, ಮನೆ ಹೊರಗೂ ನೀರು. ಸುತ್ತ ಮುತ್ತ ಎಲ್ಲೆಲ್ಲೂ ನೀರು. ಮನೆಯೊಳಗೆ ಇರಲೂ ಭಯ, ಮನೆಯಿಂದ ಹೊರಗೆ ಹೋಗಲೂ ಭಯ. ಕೊನೆಗೂ ಆ ದೇವರು ನಮ್ಮನ್ನು ಸುರಕ್ಷಿತ ಸ್ಥಳಕ್ಕೆ ಸೇರಿಸಿದನು. ಜೀವಂತವಾಗಿ ಉಳಿದಿದ್ದೇವೆ”…
ಇದು ಗುರುವಾರ ಬೆಳಗಿನ ಜಾವ ಹಿಂದೆಂದೂ ಕಂಡು ಕೇಳರಿಯದ ಹಠಾತ್ ನೆರೆಗೆ ಭಯಭೀತರಾಗಿ ಕಂಗಾಲಾದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಉಳ್ಳಾಲ, ಬಂಟ್ವಾಳ ತಾಲೂಕಿನ ಹಲವು ತಗ್ಗು ಪ್ರದೇಶಗಳ ಸಂತ್ರಸ್ತರ ಮಾತುಗಳು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ವಾರದಿಂದ ಸುರಿಯುತ್ತಿರುವ ಮಳೆ ಗುರುವಾರ ರಾತ್ರಿ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಮಧ್ಯ ರಾತ್ರಿ ಸುಮಾರು 12 ಗಂಟೆಯಿಂದ ಬೆಳಗಿನ ಜಾವ 4 ಗಂಟೆಯ ವರೆಗೆ ಒಂದು ನಿಮಿಷ ಕೂಡಾ ನಿಲ್ಲದೆ ಮಳೆ ಧಾರಾಕಾರವಾಗಿ ಸುರಿದಿದೆ. ಇದರ ಪರಿಣಾಮ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ನೂರಾರು ಮನೆಯೊಳಗೆ ನೀರು ನುಗ್ಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಉಳ್ಳಾಲ, ಬಂಟ್ವಾಳ ತಾಲೂಕಿನ ಕಲ್ಲಾಪು, ತೊಕ್ಕೊಟ್ಟು, ಉಳ್ಳಾಲ, ಅಕ್ಕರಕೆರೆ, ಪಟೇಲ್ ಕಾಂಪೌಂಡ್, ಮಿಲ್ಲತ್ ನಗರ, ಬಂಡಿಕೊಟ್ಯ, ಅಳೇಕಲ, ಕೀರ್ತಿ ಗ್ರೌಂಡ್, ಉಳ್ಳಾಲ ಬೈಲ್ ಮಾಸ್ತಿಕಟ್ಟೆ, ಕಲ್ಕಟ್ಟ, ಮಂಜನಾಡಿ, ಕೆ.ಸಿ.ರೋಡ್, ಉಚ್ಚಿಲ ಹಾಗೂ ಮಂಗಳೂರು ಹೊರ ವಲಯದ ಸುರತ್ಕಲ್ ಹೋಬಳಿಯ ಹಲವು ಪ್ರದೇಶಗಳಲ್ಲಿ ಹಠಾತ್ ನೆರೆ ಉಂಟಾಗಿದೆ. ಮನೆಯೊಳಗೆ ನೀರು ನುಗ್ಗಿ ಮನೆಯೊಳಗಿನ ವಸ್ತುಗಳು, ಮನೆ ಅಂಗಲದಲ್ಲಿ ನಿಲ್ಲಿಸಿದ್ದ ವಾಹನಗಳು ಹಾನಿಗೊಳಗಾಗಿವೆ.

ಮನೆಯೊಳಗೆ ನೀರು ನುಗ್ಗಿ ಟೇಬಲ್, ಖುರ್ಚಿ, ಸೋಫಾ ಸೆಟ್‌ಗಳ ಸಹಿತ ಮನೆಯಲ್ಲಿದ್ದ ಪೀಠೋಪಕರಣಗಳು, ರೆಫ್ರಿಜರೇಟರ್, ವಾಷಿಂಗ್ ಮಿಷನ್, ಇನ್ವರ್‌ಟರ್ ಮೊದಲಾದ ಎಲೆಕ್ಟ್ರಾನಿಕ್ಸ್ ವಸ್ತುಗಳು, ಬಟ್ಟೆ ಬರೆ, ದಿನಬಳಕೆಯ ವಸ್ತುಗಳು, ಮಕ್ಕಳ ಶಾಲಾ ಕಾಲೇಜಿನ ಪುಸ್ತಕಗಳು ಹಾನಿಯಾಗಿವೆ. ಮೋಟರ್ ಬೈಕ್, ಆಟೋ ರಿಕ್ಷಾ, ಕಾರು ಸಹಿತ ಹಲವು ವಾಹನಗಳು ನೀರಿನಲ್ಲಿ ಮುಳುಗಿ ಕೆಟ್ಟು ನಿಂತಿವೆ. ರಾತ್ರಿ ಬೆಳಗಾಗುವುದರ ಒಳಗೆ ಉಂಟಾದ ಹಠಾತ್ ನೆರೆಯಿಂದ ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿವೆ ಎಂದು ಅಂದಾಜಿಸಲಾಗಿದೆ.
“ನಮ್ಮ ತಂದೆ ತಾಯಂದಿರು, ಅಜ್ಜ ಅಜ್ಜಿಯೂ ವಾಸಿಸುತ್ತಿದ್ದ ಇದೇ ಜಾಗದಲ್ಲಿ ನಾವು ಕೂಡಾ ಮನೆ ನಿರ್ಮಿಸಿ ವಾಸಿಸುತ್ತಿದ್ದೇವೆ. 1974ರ ಮಹಾ ನೆರೆಯ ಬಳಿಕ ಇದೇ ಮೊದಲ ಬಾರಿಗೆ ಈ ಮಟ್ಟದಲ್ಲಿ ನೆರೆಯನ್ನು ನಾವು ಕಂಡಿದ್ದೇವೆ. ಅದು ಕೂಡಾ ನಾವೆಲ್ಲಾ ಗಾಢ ನಿದ್ದೆಯಲ್ಲಿದ್ದಾಗ ಹಠಾತ್ ಉಂಟಾದ ನೆರೆಯಾಗಿದೆ. ಈ ರೀತಿಯ ನೆರೆ ಉಂಟಾಗಬಹುದು ಎಂಬುದು ನಮ್ಮ ಊಹೆಗೂ ನಿಲುಕದ ವಿಚಾರವಾಗಿದೆ. ರಾತ್ರಿ ಮಲಗುವಾಗ ಅಣುವಿನಷ್ಟು ಕೂಡಾ ನೆರೆಯ ಸೂಚನೆ ಇರಲಿಲ್ಲ. ಮಧ್ಯ ರಾತ್ರಿ ಮೂರು ಗಂಟೆ ಸುಮಾರಿಗೆ ಮನೆ ಸಂಪೂರ್ಣ ಜಲಾವೃತಗೊಂಡು ಮನೆಯೊಳಗೆ ಸೊಂಟದವರೆಗೆ ನೀರು ತುಂಬಿತ್ತು” ಎಂದು ಅಕ್ಕರಕೆರೆ ನಿವಾಸಿ ಹರೀಶ್ ಎಂಬವರು ಈದಿನ ಡಾಟ್ ಕಾಮ್ ಜೊತೆ ಮಾತನಾಡುತ್ತಾ ಹೇಳಿದರು.

“ಇದು ನೆರೆ ಅಲ್ಲ. ನದಿ ತುಂಬಿ ಹರಿದಾಗ ನದಿ ಪಾತ್ರದ ಪ್ರದೇಶಗಳಿಗೆ ನೀರು ಹರಿದಾಗ ನೆರೆ ಅಥವಾ ಪ್ರವಾಹ ಉಂಟಾಗುತ್ತದೆ. ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ ಮತ್ತು ಫಲ್ಗುಣಿ ನದಿ ಈ ದಿನ ತಳಮಟ್ಟದಲ್ಲಿ ಹರಿಯುತ್ತಿದೆ. ಈ ಎರಡೂ ನದಿಯನ್ನು ಸಂಧಿಸುವ ಪ್ರಮುಖ ಕಾಲುವೆಗಳು ಕೂಡಾ ನೀರಿಲ್ಲದೆ ಮಳೆಗಾಲದಲ್ಲಿ ಸಾಮಾನ್ಯವಾಗಿ ಹರಿದಂತೆ ಇಂದು ಕೂಡಾ ಹರಿಯುತ್ತಿದೆ. ಆದರೆ ವಸತಿ ಪ್ರದೇಶಗಳು ಮಾತ್ರ ಸಂಪೂರ್ಣವಾಗಿ ಜಲಾವೃತಗೊಂಡಿವೆ. ಈ ರೀತಿಯ ಹಠಾತ್ ಮತ್ತು ವಸತಿ ಪ್ರದೇಶ ಮಾತ್ರ ಮುಳುಗಿದ ನೆರೆಯನ್ನು ನಾವು ಜೀವನದಲ್ಲಿ ಮೊದಲ ಬಾರಿಗೆ ಕಾಣುತ್ತಿದ್ದೇವೆ. ಇದು ಯಾಕೆ ಹೀಗಾಯಿತು. ಇದಕ್ಕೆ ಮಾಡಬೇಕಾದ ಪರಿಹಾರ ಏನು ಎಂಬುದನ್ನು ಪರಿಶೀಲಿಸುವಂತೆ ನಾವು ಅಧಿಕಾರಿಗಳನ್ನು ಒತ್ತಾಯಿಸಿದ್ದೇವೆ” ಎಂದು ಉಳ್ಳಾಲದ ಸ್ಥಳೀಯ ನಿವಾಸಿ ರವೂಫ್ ಎಂಬವರು ತಿಳಿಸಿದ್ದಾರೆ.
“ನಿನ್ನೆ ರಾತ್ರಿ ಸುಮಾರು ಮೂರರಿಂದ ನಾಲ್ಕು ಗಂಟೆ ಎಡೆಬಿಡದೆ ಧಾರಾಕಾರ ಮಳೆ ಸುರಿದಿದೆ. ವಾಡಿಕೆಗಿಂತ ಅಧಿಕ ಪ್ರಮಾಣದಲ್ಲಿ ಮಳೆ ಸುರಿದಾಗ ಮಳೆ ನೀರು ಸರಾಗವಾಗಿ ಹರಿಯಲು ಜಾಗವಿಲ್ಲದೆ ವಸತಿ ಪ್ರದೇಶವನ್ನು ಆವರಿಸಿಕೊಂಡಿದೆ. ಇದಕ್ಕೆ ಪ್ರಮುಖ ಕಾರಣ ರಸ್ತೆ ನಿರ್ಮಾಣದ ವೇಳೆ ಸರಿಯಾದ ಚರಂಡಿ ನಿರ್ಮಿಸದೇ ಇರುವುದು ಮತ್ತು ರಾಜ ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವುದಾಗಿದೆ. ಇದು ಹಠಾತ್ ನೆರೆ ಅಲ್ಲ. ಇದು ಮನುಷ್ಯ ನಿರ್ಮಿತ ಕೃತಕ ಮಹಾ ಪ್ರವಾಹವಾಗಿದೆ. ಇದಕ್ಕೆ ಸ್ಥಳೀಯಾಡಳಿತ ಮತ್ತು ಸರಕಾರ ನೇರ ಹೊಣೆಯಾಗಿದೆ” ಎಂದು ಉಪನ್ಯಾಸಕಿ, ಮಿಲ್ಲತ್ ನಗರ ನಿವಾಸಿ ಸಾರಾ ಮಸ್ಕುರುನ್ನೀಸಾ ಎಂಬವರು ಆರೋಪಿಸಿದ್ದಾರೆ.

“ಸ್ಥಳೀಯಾಡಳಿತ ಮತ್ತು ಸರಕಾರದ ಬೇಜಾಬ್ದಾರಿ ತನದಿಂದ ಉಂಟಾದ ಈ ಮಾನವ ನಿರ್ಮಿತ ಕೃತಕ ನೆರೆಯಿಂದ ಜಿಲ್ಲೆಯ ಮೂರು ತಾಲೂಕಿನ ಹಲವು ಪ್ರದೇಶಗಳು ಜಲಾವೃತವಾಗಿವೆ. ಸಾವಿರಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿವೆ. ಪ್ರತಿಯೊಂದು ಮನೆಯಲ್ಲಿ ಕನಿಷ್ಠ ಒಂದೆರಡು ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿ ಪಾಸ್ತಿಗಳು ನಷ್ಟವಾಗಿದೆ. ಇದರಿಂದ ಜಿಲ್ಲೆಯಲ್ಲಿ ಸುಮಾರು ಹತ್ತಾರು ಕೋಟಿ ರೂಪಾಯಿಗೂ ಅಧಿಕ ನಷ್ಟ ಸಂಭವಿಸಿದೆ. ನೀರು ನುಗ್ಗಿದ ಪ್ರತೀಯೊಂದು ಮನೆಯನ್ನು ಸರಕಾರ ಸ್ಥಳೀಯಾಡಳಿತದ ಅಧಿಕಾರಿಗಳಿಂದ ಸರ್ವೇ ಮಾಡಿಸಬೇಕು. ಮನೆಗೆ, ಮನೆಯಲ್ಲಿರುವ ಪೀಠೋಪಕರಣ, ಎಲೆಕ್ಟ್ರಾನಿಕ್ಸ್ ವಸ್ತುಗಳು, ಬಟ್ಟೆ ಬರೆ ಹಾಗೂ ವಾಹನಗಳಿಗೆ ಆದ ಹಾನಿಯ ವೆಚ್ಚವನ್ನು ಪಟ್ಟಿ ಮಾಡಬೇಕು. ಹಾನಿಯಾದ ವೆಚ್ಚವನ್ನು ಸರಕಾರ ಕೂಡಲೇ ಪರಿಹಾರ ರೂಪದಲ್ಲಿ ಒದಗಿಸಬೇಕು” ಪಟೇಲ್ ಕಾಂಪೌಂಡ್ ನಿವಾಸಿ ನವಾಝ್ ಆಗ್ರಹಿಸಿದ್ದಾರೆ.
ಹಠಾತ್ ನೆರೆಯಿಂದ ಕಂಗಾಲಾದ ಕುಟುಂಬಗಳನ್ನು ಸ್ಥಳೀಯ ಯುವಕರ ತಂಡಗಳು ರಾತ್ರೋ ರಾತ್ರಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುತ್ತಿದ್ದ ದೃಶ್ಯಗಳು ಕಂಡು ಬಂತು. ರಾತ್ರಿ ವೇಳೆ ಜಲಾವೃತಗೊಂಡ ಹೆಚ್ಚಿನ ಪ್ರದೇಶಗಳಲ್ಲಿ ಶುಕ್ರವಾರ ಸಂಜೆಯ ವೇಳೆಗೆ ನೀರಿನ ಮಟ್ಟ ಇಳಿದಿರುವುದು ಕಂಡು ಬಂತು.
ಕೆ.ಸಿ.ರೋಡ್ ನಿವಾಸಿ ಯಾಕೂಬ್ ಎಂಬವರಿಗೆ ಸೇರಿದ 48 ಆಡುಗಳು ನೆರೆಯಲ್ಲಿ ಮುಳುಗಿ ಮೃತಪಟ್ಟಿವೆ. ತಾನು ಸಾಕುತ್ತಿದ್ದ ಆಡುಗಳನ್ನು ಯಾಕೂಬ್ ಅವರು ಮನೆ ಪಕ್ಕದ ಕೊಟ್ಟಿಗೆಯಲ್ಲಿ ಗುರುವಾರ ಸಂಜೆ ಕಟ್ಟಿ ಹಾಕಿದ್ದರು. ರಾತ್ರಿ ಉಂಟಾದ ನೆರೆಗೆ ಕೊಟ್ಟಿಗೆ ಸಂಪೂರ್ಣವಾಗಿ ಮುಳುಗಡೆಯಾಗಿದ್ದು ಕೊಟ್ಟಿಗೆಯಲ್ಲಿದ್ದ ಎಲ್ಲ 48 ಆಡುಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿವೆ. ಇದು ಬಕ್ರೀದ್ ಹಬ್ಬ ಸಮೀಪಿಸುತ್ತಿರುವ ನಡುವೆಯೇ ಈ ರೀತಿಯಾದದ್ದು ಅವರಿಗೆ ಆಘಾತ ಉಂಟು ಮಾಡಿದೆ.

ಧಾರಾಕಾರ ಮಳೆಯಿಂದ ಮಂಗಳೂರು ತಾಲೂಕಿನ ದೇರಳಕಟ್ಟೆ ಸಮೀಪ ಮನೆ ಮೇಲೆ ತಡೆಗೋಡೆ ಕುಸಿದು 8 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಹಾಗೆಯೇ ಮೊಂಟೆಪದವು ಎಂಬಲ್ಲಿ ಮನೆ ಮೇಲೆ ಗುಡ್ಡ ಕುಸಿದು ಓರ್ವ ಮಹಿಳೆ, ಇಬ್ಬರು ಪುಟಾಣಿಗಳು ಮೃತಪಟ್ಟಿದ್ದಾರೆ. ಧಾರಾಕಾರ ಮಳೆಯಿಂದ ಕೃಷಿಗೂ ವ್ಯಾಪಕ ಹಾನಿ ಉಂಟಾಗಿದೆ. ಜಿಲ್ಲೆಯ ವಿವಿಧೆಡೆ ಮಳೆ ಕಾರಣ ವಾಹನಗಳ ನಡುವೆ ಅಪಘಾತಗಳು ಸಂಭವಿಸಿ ಕೆಲವು ಜೀವ ಹಾನಿ ಸಂಭವಿಸಿದೆ. ಮನೆ ಕುಸಿತ, ತಡೆಗೋಡೆ ಕುಸಿತ ಮೊದಲಾದ ಹಾನಿಗಳು ವರದಿಯಾಗಿವೆ. ಮುಂಜಾಗ್ರತಾ ಕ್ರಮವಾಗಿ ಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿದೆ.
ಐದು ಲಕ್ಷ ಪರಿಹಾರ ವಿತರಿಸಿದ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್
ಎಡೆಬಿಡದೆ ಸುರಿದ ಭಾರೀ ಮಳೆಗೆ ಗುಡ್ಡ ಜರಿದು ಬಿದ್ದ ಪರಿಣಾಮ ನಾಲ್ವರು ಮೃತಪಟ್ಟ ಘಟನೆ ನಡೆದ ಮಂಜನಾಡಿ ಗ್ರಾಮದ ಮೊಂಟೆಪದವು ಮತ್ತು ಬೆಳ್ಮ ಗ್ರಾಮದ ಕಾನಕೆರೆಗೆ ಶುಕ್ರವಾರ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಕಾಂತಪ್ಪ ಪೂಜಾರಿಯ ಮನೆಯಲ್ಲಿ ಮೂವರು ಹಾಗೂ ನೌಶಾದ್‌ರ ಮನೆಯಲ್ಲಿ ಒಬ್ಬ ಬಾಲಕಿ ಮೃತಪಟ್ಟಿದ್ದು, ಈ ಸಂದರ್ಭ ಕುಟುಂಬಕ್ಕೆ ತಲಾ 5 ಲಕ್ಷ ರೂ.ನ ಚೆಕ್ ಹಸ್ತಾಂತರಿಸಿದರು.
ಇದನ್ನು ಓದಿದ್ದೀರಾ? ಮಂಗಳೂರು | ತನ್ನ ವರ್ಗಾವಣೆ ಆದೇಶಕ್ಕೂ ಮುನ್ನ ಏಳು ಪೊಲೀಸರನ್ನು ಬೇರೆ ಠಾಣೆಗಳಿಗೆ ವರ್ಗಾಯಿಸಿದ್ದ ಕಮಿಷನರ್ ಅಗರ್ವಾಲ್!
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, “ವಿಪರೀತ ಮಳೆಯಿಂದ ಗುಡ್ಡ ಜರಿದು ಬಿದ್ದ ಪರಿಣಾಮ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಇಬ್ಬರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ತೀವ್ರ ಹಾಗೂ ಭಾಗಶಃ ಹಾನಿಯಾದ, ನೀರು ನುಗ್ಗಿದ ಮನೆಗಳಿಗೆ ಸರಕಾರದಿಂದ ಸೂಕ್ತ ಪರಿಹಾರ ಒದಗಿಸುವ ಬಗ್ಗೆ ವ್ಯವಸ್ಥೆ ಮಾಡಲಾಗುವುದು. ಪುನರ್ವಸತಿ ಕಲ್ಪಿಸುವ ಯೋಜನೆಯೂ ಸರಕಾರದ ಮುಂದಿದೆ ಎಂದು ತಿಳಿಸಿದ್ದಾರೆ.