“ಯುಜಿಸಿ ಬಿಡುಗಡೆ ಮಾಡಿದ ಫಲಿತಾಂಶಗಳ ಆಧಾರಿತ ಪಠ್ಯಕ್ರಮ ಚೌಕಟ್ಟು (LOCF) ಕರಡನ್ನು ಕೈ ಬಿಡಬೇಕು. ರಸಾಯನ ಶಾಸ್ತ್ರದ LOCF ಸರಸ್ವತಿಗೆ ನಮಸ್ಕಾರದೊಂದಿಗೆ ಪ್ರಾರಂಭವಾಗುತ್ತದೆ, ಹಾಗೆಯೇ ವಾಣಿಜ್ಯ ಪಠ್ಯಕ್ರಮವು ಕಾಲೇಜುಗಳಲ್ಲಿ ಕೌಟಿಲ್ಯನ ಅರ್ಥಶಾಸ್ತ್ರವನ್ನು ಕಲಿಸಲು ಸೂಚಿಸುತ್ತದೆ. ವಿ.ಡಿ. ಸಾವರ್ಕರ್ ಅವರ “ಭಾರತೀಯ ಸ್ವಾತಂತ್ರ್ಯ ಸಂಗ್ರಾಮ” ಎಂಬುದನ್ನು ‘ಭಾರತೀಯ ಸ್ವಾತಂತ್ರ್ಯ ಹೋರಾಟ’ದ ಕೋರ್ಸ್‌ನ ಓದುವ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದು ಶಿಕ್ಷಣದಲ್ಲಿ RSS ಕಾರ್ಯಸೂಚಿಯನ್ನು ಸೇರಿಸುವ ಪ್ರಯತ್ನವಾಗಿದೆ” ಎಂದು ಎಸ್ ಎಫ್ ಐ ರಾಜ್ಯ ಉಪಾಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದರು.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಎದುರಿಗೆ ಭಾರತ ವಿದ್ಯಾರ್ಥಿ ಫೆಡರೇಷನ್ ವತಿಯಿಂದ ಯುಜಿಸಿ ಬಿಡುಗಡೆ ಮಾಡಿದ ಫಲಿತಾಂಶಗಳ ಆಧಾರಿತ ಪಠ್ಯಕ್ರಮ ಚೌಕಟ್ಟು (LOCF) ಕರಡನ್ನು ಕೈ ಬಿಡಲು ಮತ್ತು ರಾಜ್ಯದಲ್ಲಿರುವ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರನ್ನು ತಕ್ಷಣ ನೇಮಕ ಮಾಡಿಕೊಳ್ಳವಂತೆ ಪ್ರತಿಭಟಿಸಿ, ಪ್ರಚಾರ್ಯರು ಪ್ರೋ ಬಸವರಾಜ್ ಹೊಸಳ್ಳಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದರು.
ಮನವಿ ಸಲ್ಲಿಸಿ ಎಸ್ ಎಫ್ ಐ ರಾಜ್ಯ ಉಪಾಧ್ಯಕ್ಷರು ಗಣೇಶ ರಾಠೋಡ ಮಾತನಾಡಿ, “ಯುಜಿಸಿ ಬಿಡುಗಡೆ ಮಾಡಿದ ಪ್ರಾಚೀನ ಮತ್ತು ಅವೈಜ್ಞಾನಿಕ ಕಲಿಕಾ, ಫಲಿತಾಂಶಗಳ ಆಧಾರಿತ ಪಠ್ಯಕ್ರಮ ಚೌಕಟ್ಟು ಕರಡನ್ನು ಬಲವಾಗಿ ನಾವು ವಿರೋಧಿಸುತ್ತೆವೆ. ಈ ಕರಡಿಗೆ ಸಾರ್ವಜನಿಕ ಪ್ರತಿಕ್ರಿಯೆ ನೀಡಲು ಬಹಳ ಕಡಿಮೆ ಸಮಯವನ್ನು ನಿಗದಿಪಡಿಸಲಾಗಿದ್ದು ಖಂಡನೀಯ” ಎಂದರು.
“ಸಂವಿಧಾನದ 51A(h) ವಿಧಿಯ ಪ್ರಕಾರ, ವೈಜ್ಞಾನಿಕ ಮನೋಭಾವ, ಮಾನವತಾವಾದ ಮತ್ತು ವಿಚಾರಣೆ ಮತ್ತು ಸುಧಾರಣೆಯ ಮನೋಭಾವವನ್ನು ಬೆಳೆಸುವುದು ನಾಗರಿಕರ ಮೂಲಭೂತ ಕರ್ತವ್ಯವಾಗಿದೆ. ಯುಜಿಸಿಯ ಈ ಪ್ರಯತ್ನವು ಉನ್ನತ ಶಿಕ್ಷಣದಲ್ಲಿ ಕೇಸರೀಕರಣವನ್ನು ಮಾಡುವ ಮತ್ತು ಅವೈಜ್ಞಾನಿಕ ಮನೋಭಾವವನ್ನು ಪ್ರಚಾರ ಮಾಡುವ ಉದ್ದೇಶದಿಂದ ಮಾಡಲಾಗುತ್ತಿದೆ” ಎಂದರು.
“ಸ್ವಾತಂತ್ರ್ಯ ಚಳವಳಿಯ ಕುರಿತಾದ ಕಲಿಕಾ ಪಟ್ಟಿಯಲ್ಲಿ ಸಾವರ್ಕರ್ ಅವರ ಪುಸ್ತಕವನ್ನು ಸೇರಿಸಿರುವುದು ಸ್ವಾತಂತ್ರ್ಯ ಹೋರಾಟದ ನೈಜ ಇತಿಹಾಸದಿಂದ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವ ಉದ್ದೇಶವನ್ನು ಹೊಂದಿದೆ. ಸ್ವಾತಂತ್ರ್ಯ ಹೋರಾಟಕ್ಕೆ ದ್ರೋಹ ಬಗೆದವರು ಬರೆದ ಪುಸ್ತಕಗಳಿಂದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡುವ ಅಗತ್ಯವಿಲ್ಲ” ಎಂದು ಕಿಡಿಕಾರಿದರು.
“ನಮ್ಮ ದೇಶದಲ್ಲಿ ಶಿಕ್ಷಣದ ಈ ವಿನಾಶದ ವಿರುದ್ಧ ಹೋರಾಟ ಮಾಡಲು ಎಸ್‌ಎಫ್‌ಐ ವಿದ್ಯಾರ್ಥಿ ಸಮುದಾಯಕ್ಕೆ ಕರೆ ನೀಡುತ್ತದೆ. ಯುಜಿಸಿ ಮಂಡಿಸಿದ ಈ ಅವೈಜ್ಞಾನಿಕ ಮನೋಭಾವದ ಪ್ರಚಾರವನ್ನು ವಿರೋಧಿಸಲು ಎಸ್‌ಎಫ್‌ಐ ವಿದ್ಯಾರ್ಥಿಗಳಿಗೆ ಕರೆ ನೀಡಿದೆ. ಯುವ ಮನಸ್ಸುಗಳನ್ನು ಕೋಮುವಾದಿಗೊಳಿಸುವ ಪ್ರಯತ್ನವನ್ನು ಭಾರತ ವಿದ್ಯಾರ್ಥಿ ಫೆಡರೇಷನ್ ವಿರೋಧಿಸುತ್ತದೆ.
ನಂತರ ಎಸ್ ಎಫ್ ಐ ನ ಜಿಲ್ಲಾದ್ಯಕ್ಷರಾದ ಚಂದ್ರು ರಾಠೋಡ ಮಾತನಾಡಿ, “ರಾಜ್ಯದಲ್ಲಿ ಶೈಕ್ಷಣಿಕ ವರ್ಷ ಪ್ರಾರಂಭವಾಗಿ 2 ತಿಂಗಳು ಕಳೆದಿದೆ. ರಾಜ್ಯದಲ್ಲಿರುವ ಬಹುತೇಕ ಸರ್ಕಾರಿ ಪದವಿ ಕಾಲೇಜುಗಲ್ಲಿ 70% ಕ್ಕಿಂತ ಹೆಚ್ಚು ಅತಿಥಿ ಉಪನ್ಯಾಸಕರು ಸರ್ಕಾರಿ ಕಾಲೇಜುಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಕಾಲೇಜುಗಳು ಪ್ರಾರಂಭವಾಗಿ 2 ತಿಂಗಳು ಕಳೆದರು ಅತಿಥಿ ಉಪನ್ಯಾಸಕರ ನೇಮಕಾತಿಯಾಗಿಲ್ಲ” ಎಂದರು.
“ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸುಮಾರು 10,000ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಹೆಚ್ಚುವರಿ ಬೋಧನಾ ಕಾರ್ಯಭಾರಕ್ಕೆ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ UGC ಮತ್ತು NON UGC ಎಂಬ ಗೊಂದಲದಿಂದಾಗಿ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆ ಸ್ಥಗಿತಗೊಂಡಿದೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗಿದೆ ಹಾಗೂ ವಿದ್ಯಾರ್ಥಿಗಳ ಬದುಕು ಅತಂತ್ರಗೊಂಡಿದೆ” ಎಂದು ಹೇಳಿದರು.
“ಸರ್ಕಾರಿ ಕಾಲೇಜುಗಳಲ್ಲಿ, ಬಡವ, ರೈತ, ಕಾರ್ಮಿಕ, ದಲಿತ, ಹಿಂದುಳಿದ ವಿದ್ಯಾರ್ಥಿಗಳು ಹೆಚ್ಚು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳು ತುರ್ತಾಗಿ ಕಾಲೇಜು ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡುವ ಮೂಲಕ ಮಧ್ಯಪ್ರವೇಶಿಸಿ ಆತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ತಾರತಮ್ಯ ಮಾಡದೇ “ಸೇವಾ ಹಿರಿತನದ ಆಧಾರದ ಮೇಲೆ ನೇಮಕ ಮಾಡಬೇಕೆಂದು ಹಾಗೂ ಅತಿಥಿ ಉಪನ್ಯಾಸಕರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಲ್ಲಿ ಆಯೋಗ ರಚಿಸಬೇಕು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಲಂಚ ಬೇಡಿಕೆ, ಕರ್ತವ್ಯಲೋಪ, ದುರ್ನಡತೆ ಆರೋಪ; ವೈದ್ಯಾಧಿಕಾರಿ ಅಮಾನತು
“ತುರ್ತಾಗಿ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ ಎಫ್ ಐ) ಗಜೇಂದ್ರಗಡ ತಾಲ್ಲೂಕು ಸಮಿತಿಯು ಒತ್ತಾಯಿಸುತ್ತದೆ. ಒಂದು ವೇಳೆ ಸಮಸ್ಯೆ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುತ್ತೇವೆ” ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷರಾದ ಅನಿಲ್ ಆರ್ ಸ್ವಾಗತಿಸಿದರು ಮತ್ತು ಮುಖಂಡರಾದ ಅಭಿಲಾಷ ಆರ್, ಬಸು ರಾಠೋಡ, ವಿರೇಶ ಆರ್, ಶಿವರಾಜ ರಾಜೂರು, ಕಿರಣ, ಯುವರಾಜ್, ಮಹೇಶ್, ಆಸಿಪ್ ಹಂಚಿನಾಳ, ಪ್ರಜ್ವಲ್ ಹಡಪದ, ಪ್ರವೀಣ್ ವಡ್ಡರ್, ಮುತ್ತು, ಅಭಿಶೇಕ್, ಶರಣು ಶಿವವ್ವ, ಮಂಜುಳಾ, ಭಿಮವ್ವ, ಪ್ರತಿಭಾ, ಪ್ರೇಮಾ, ಅಕ್ಷತಾ, ಅಕ್ಕಮ್ಮ, ರೇಷ್ಮಾ, ಐಶ್ವರ್ಯ, ರಮ್ಯಾ ಹಾಗೂ ನೂರಾರು ವಿದ್ಯಾರ್ಥಿಗಳು ಹಾಜರಿದ್ದರು.