ನಿನ್ನೆ ರಭಸವಾಗಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಆರೋಗ್ಯ ಇಲಾಖೆಯ ಮಹಿಳಾ ಸಿಬ್ಬಂದಿಯ ಮೃತದೇಹ ಬುಧವಾರ ಪತ್ತೆಯಾಗಿದೆ.
ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಯಾ.ಸ.ಹಡಗಲಿ ಗ್ರಾಮ ಕೌಜಗೇರಿ ಗ್ರಾಮದ ನಡುವೆ ಇರುವ ಹಳ್ಳ ದಾಟುವ ವೇಳೆ ಆರೋಗ್ಯ ಇಲಾಖೆಯ ಮೂವರು ಸಿಬ್ಬಂದಿಗಳು ಕೊಚ್ಚಿ ಹೋದ ಘಟನೆ ನಡೆದಿತ್ತು.
ಗ್ರಾಮದ ಹಳ್ಳದಲ್ಲಿ ನಿನ್ನೆ ಕೊಚ್ಚಿ ಹೋಗಿದ್ದ ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿಯಾಗಿದ್ದ ಬಸಮ್ಮ(34) ಗುರಿಕಾರ ಮೃತದೇಹ ಪತ್ತೆಯಾಗಿದೆ.
ಆರೋಗ್ಯ ಇಲಾಖೆಯ ಮೂವರು ಸಿಬ್ಬಂದಿ ಒಂದೇ ಬೈಕ್‌ನಲ್ಲಿ ಬರುತ್ತಿದ್ದರು. ರಭಸವಾಗಿ ಹರಿಯುತ್ತಿದ್ದ ಹಳ್ಳ ದಾಟುವ ವೇಳೆ ನೀರಿಗೆ ಬಿದ್ದಿದ್ದಾರೆ. ಈ ವೇಳೆ ಬಸವರಾಜ ಕಡಪಟ್ಟಿ , ವೀರಸಂಗಯ್ಯ ಹಿರೇಮಠ ಅವರನ್ನು ರಕ್ಷಿಸಲಾಗಿತ್ತು. ಬಸಮ್ಮ ಗುರಿಕಾರ ಅವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಶೋಧಕಾರ್ಯ ಮುಂದುವರೆಸಿತ್ತು.
ಇಂದು ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸರು ಹಾಗೂ ಸ್ಥಳಿಯರು ಶೋಧ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಮಹಿಳಾ ಅಧಿಕಾರಿ ಬಸಮ್ಮರ ಮೃತದೇಹ ಮುಳ್ಳು ಕಂಟಿಯಲ್ಲಿ ಪತ್ತೆಯಾಗಿದೆ.
ಈ ಕುರಿತು ಗದಗ ಜಿಲ್ಲೆ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.