“ಸೆಪ್ಟಂಬರ್ 7 ರಂದು ಮುಂಡರಗಿಯ ಕಲಾ ಶಿಕ್ಷಣ-ಸಂಸ್ಕೃತಿ ಪ್ರತಿಷ್ಠಾನದಿಂದ ‘ಮಕ್ಕಳ ಸ್ನೇಹಿ ಶಿಕ್ಷಕ’ ಪ್ರಶಸ್ತಿ ಪ್ರದಾನ ಹಾಗೂ ‘ನನ್ನ ಅನುಭವ-ನನ್ನ ಮಾತು’ ಶೈಕ್ಷಣಿಕ ವಿಚಾರ ಗೋಷ್ಠಿ ಜರುಗಲಿದೆ” ಎಂದು ಪ್ರತಿಷ್ಠಾನದ ಅಧ್ಯಕ್ಷರು ನಿಂಗು ಸೋಲಗಿ ಅವರು ತಿಳಿಸಿದ್ದಾರೆ.
ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡುವುದು ನಂತರ ಅವರಲ್ಲೊಬ್ಬರು ಅನಿಸಿಕೆ ವ್ಯಕ್ತಪಡಿಸುವುದು ಬಹುತೇಕ ವಾಡಿಕೆ. ಆದರಿಲ್ಲಿ ಪ್ರಶಸ್ತಿಗೆ ಭಾಜನರಾದವರು ತಮ್ಮ ಕ್ಷೇತ್ರದಲ್ಲಿ ಪ್ರಯೋಗ ಮಾಡಿದ ಶೈಕ್ಷಣಿಕ ಸಂಗತಿಗಳನ್ನು ಆಧಾರವಾಗಿಟ್ಟುಕೊಂಡು ನಿಗದಿತ ಸಮಯದಲ್ಲಿ ವಿಷಯ ಮಂಡಿಸುವ ಮೂಲಕ ಸಂವಾದ ನಡೆಯಲಿದೆ.
ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಕಾರ್ಯಕ್ರಮ ಉದ್ಘಾಟಿಸಲಿದ್ದು , ಶಾಲಾ ಶಿಕ್ಷಣ ಇಲಾಖೆ ವಿಶ್ರಾಂತ ಉಪನಿರ್ದೇಶಕರು ಎ. ಎನ್. ನಾಗರಹಳ್ಳಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ: ಶಿಕ್ಷಕರ ದಿನಾಚರಣೆ; ಮೂವರು ಯೋಗ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ
ಮುಖ್ಯ ಅತಿಥಿಗಳಾಗಿ ಬಿಜಿವಿಎಸ್ ರಾಜ್ಯ ಉಪಾಧ್ಯಕ್ಷರಾದ ಎಫ್. ಸಿ. ಚೇಗರಡ್ಡಿ, ಶಾಲಾ ಶಿಕ್ಷಣ ಇಲಾಖೆ ವಿಶ್ರಾಂತ ಉಪನಿರ್ದೇಶಕರಾದ ಎಸ್. ಡಿ. ಗಾಂಜಿ, ಎಐಎಮ್‌ಎ ಮಾಜಿ ಅಧ್ಯಕ್ಷರಾದ ಡಾ. ಅನ್ನದಾನಿ ಮೇಟಿ, ಮುಂಡರಗಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷರಾದ ಎಂ. ಜಿ. ಗಚ್ಚಣ್ಣವರ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಂಗಾಧರ ಅಣ್ಣಿಗೇರಿ ಭಾಗವಹಿಸಲಿದ್ದಾರೆ.