ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಕಟ್ಟಡ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ನೀಡುವ ಶೈಕ್ಷಣಿಕ ಸಹಾಯಧನ, ಮದುವೆ, ಪಿಂಚಣಿ, ವೈದ್ಯಕೀಯ, ಸಹಾಯಧನ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವವಂತೆ ಗಜೇಂದ್ರಗಡದ ಎಸ್‌ಎಫ್‌ಐ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೇಡರೇಷನ್‌ನಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಕಿರಣಕುಮಾರ ಕುಲಕರ್ಣಿ ಮತ್ತು ಕಾರ್ಮಿಕ ಇಲಾಖೆ ಸಿಬ್ಬಂದಿ ಆನಂದ ಅವರ ಮೂಲಕ ಕಾರ್ಯದರ್ಶಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕಾರ್ಮಿಕ ಸಂಘಟನೆಯ(ಸಿಡಬ್ಲ್ಯೂಎಫ್‌ಐ) ರಾಜ್ಯ ಸಮಿತಿ ಸದಸ್ಯ ಪೀರು ರಾಠೋಡ ಮಾತನಾಡಿ, “ಆಗಸ್ಟ್ 24-25ರಂದು ಕೊಪ್ಪಳದಲ್ಲಿ ನಡೆದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌ನ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಆಯ್ದ 300 ಜನಕಾರ್ಮಿಕ ಪ್ರತಿನಿಧಿಗಳು ಭಾಗವಹಿಸಿದ್ದರು” ಎಂದರು.
“ಈ ಸಮ್ಮೇಳನದಲ್ಲಿ ಕಾರ್ಮಿಕರ ಆರ್ಥಿಕ, ಸಾಮಾಜಿಕ ವಿಷಯಗಳು, ಕಾರ್ಮಿಕರ ಸುರಕ್ಷತೆ, ಸಾಮಾಜಿಕ ಭದ್ರತೆ ಒದಗಿಸುವ ಸರ್ಕಾರದ ಯೋಜನೆಗಳ ಪರಾಮರ್ಷೆ, ಇದರಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಪಾತ್ರದ ಕುರಿತು ಸುಧೀರ್ಘ ಮತ್ತು ಗಂಭೀರ ಚರ್ಚೆ ನಡೆದಿದೆ” ಎಂದು ಹೇಳಿದರು.
ಕಲ್ಯಾಣ ಮಂಡಳಿಯಿಂದ ಫಲಾನುಭವಿಗಳಿಗೆ ನೀಡಲಾಗುತ್ತಿರುವ ಸೌಲಭ್ಯಗಳಲ್ಲಿ ಶೈಕ್ಷಣಿಕ ಸಹಾಯಧನ, ವೈದ್ಯಕೀಯ ಸಹಾಯಧನ, ಪಿಂಚಣಿ, ಮದುವೆ ಸಹಾಯಧನದಂತಹ ಸೌಲಭ್ಯಗಳು ಕಾರ್ಮಿಕರ ಬದುಕಿಗೆ ಅಕ್ಷರಶಃ ಆಸರೆಯಾಗಿವೆ ಎಂಬ ಅಭಿಪ್ರಾಯ ಕಾರ್ಮಿಕರಿಂದ ವ್ಯಕ್ತವಾಗಿದೆ” ಎಂದರು.
“ಕಾರ್ಮಿಕರಿಗೆ ನೀಡಲಾಗುವ ಯಾವುದೇ ತರಹದ ಕಿಟ್‌ಗಳು ನಿಷ್ಪ್ರಯೋಜಕವಾಗಿವೆಯೆಂದು ಅಭಿಪ್ರಾಯಗಳೂ ಬಂದಿವೆ. ಪ್ರೊಕ್ಯೂರ್‌ಮೆಂಟ್ ಯೋಜನೆಗಳ ಮೂಲಕ ಭದ್ರತೆ ಒದಗಿಸಬೇಕೆನ್ನುವ ಕಾಯ್ದೆಯ ಆಶಯವನ್ನು ಈಡೇರಿಸುವಲ್ಲಿ ವಿಫಲವಾಗಿವೆ. ಕಾರ್ಮಿಕರ ಬೇಡಿಕೆಗಳನ್ನು ಸರ್ಕಾರ ಹಾಗೂ ಅಧಿಕಾರಿಗಳು ಈಡೇರಿಸಲು ಮುಂದಾಗಬೇಕು” ಎಂದು ಒತ್ತಾಯಿಸಿದರು.
ಹೋರಾಟ ಬೆಂಬಲಿಸಿ ಮಾತನಾಡಿದ ಎಸ್‌ಎಫ್‌ಐ ಜಿಲ್ಲಾ ಅಧ್ಯಕ್ಷ ಚಂದ್ರು ರಾಠೋಡ ಮಾತನಾಡಿ, “ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯು ಕಾರ್ಮಿಕ ಸ್ನೇಹಿಯಾಗಿ ವರ್ತಿಸುವ ಬದಲು ಅದಕ್ಕೆ ತದ್ವಿರುದ್ಧವಾಗಿ ಚಲಿಸುತ್ತಿದೆ. ಇಡೀ ಕಲ್ಯಾಣ ಮಂಡಳಿ ಪ್ರೊಕ್ಯೂರ್‌ಮೆಂಟ್ ಯೋಜನೆಗಳ ಹಿಂದೆ ಬಿದ್ದು ವ್ಯಾವಹಾರಿಕ ಚಟುವಟಿಕೆಗಳಿಗೆ ಸೀಮಿತವಾಗುತ್ತಿದೆಯೆಂಬ ದೂರುಗಳು ಕೇಳಿ ಬಂದಿವೆ” ಎಂದರು.
“1996 ರಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಾಯ್ದೆಯು ನಿರ್ಮಾಣ ವಲಯದಲ್ಲಿ ಸುರಕ್ಷತೆ, ಅಪಾಯಕಾರಿ ನಿರ್ಮಾಣ ಕೆಲಸಗಳಲ್ಲಿ ತೊಡಗಿರುವ ಕಾರ್ಮಿಕರು ಹಾಗೂ ಅವರ ಕುಟುಂಬ ಸದಸ್ಯರಿಗೆ ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಾಗ ಇತರೆ ಸರ್ಕಾರಿ ಕಾಯ್ದೆ ಹಾಗೂ ನಿಯಮಗಳನ್ನು ಮುಂದು ಮಾಡಿ ಸೌಲಭ್ಯಗಳನ್ನು ನಿರಾಕರಿಸುವಂತಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ಹೇಳಿದ್ದರೂ ಪಿಂಚಣಿ, ಶೈಕ್ಷಣಿಕಧನ ಸಹಾಯ ಇತ್ಯಾಧಿಗಳ ಕಲ್ಪಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ” ಎಂದರು.
“ಹೈಕೋರ್ಟ್ ತೀರ್ಪಿನಂತೆ 2021-22 ಮತ್ತು 2022-23 ಶೈಕ್ಷಣಿಕ ಸಹಾಯಧನಕ್ಕಾಗಿ ಬಾಕಿ ಇರುವ ಅರ್ಜಿಗಳಿಗೆ 2021ರ ನೋಟಿಫಿಕೇಶನ್ ಹಾಗೂ ಹೈಕೋರ್ಟ್ ಆದೇಶದಂತೆ ಸಹಾಯಧನ ಪಾವತಿ ಮಾಡಬೇಕು. 2025ನೇ ಸಾಲಿನ ಶೈಕ್ಷಣಿಕ ಸಹಾಯಧನವನ್ನು ಹೊಸ ನೋಟಿಫಿಕೇಶನ್ ಬದಲು 2021ರ ನೋಟಿಫಿಕೇಶನ್ ಪ್ರಕಾರವೇ ನೀಡಬೇಕು. ಎಸ್‌ಎಸ್‌ಪಿ ಪೋರ್ಟಲ್‌ನಲ್ಲಿ ಶೈಕ್ಷಣಿಕ ಸಹಾಯಧನಕ್ಕೆ ಸಲ್ಲಿಸುವ ಅರ್ಜಿಗಳಿಗೆ ಎನ್‌ಎಸ್‌ಪಿಗೆ ಸಂಬಂಧಿಸಿದ ಒಟಿಆರ್ ಸಂಖ್ಯೆಯನ್ನು ಪಡೆಯಬಾರದು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಸೇಡಂ ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆ ಕಾಮಗಾರಿಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅಡಿಗಲ್ಲು
“ಈ ಎಲ್ಲ ಸಮಸ್ಯೆಗಳನ್ನು ಸರ್ಕಾರ ಕಾರ್ಮಿಕರ ಸಂಘಟನೆ ಮುಖಂಡರು, ವಿದ್ಯಾರ್ಥಿ ಸಂಘದ ಜತೆಗೆ ಸಭೆ ನಡೆಸಿ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಬೇಕು” ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮೆಹಬೂಬ ಹವಾಲ್ದಾರ, ಚಂದ್ರು ರಾಠೋಡ, ಕನಕರಾಯ ಹಾದಿಮನಿ, ಸಂತೋಷ್ ಕಮ್ಮಾರ, ಬಸಮ್ಮ ಕಿತ್ತೂರ, ವೀರಪ್ಪ ಬಂಡಿವಡ್ಡರ, ರೇಣಪ್ಪ ರಾಠೋಡ, ತುಕಾರಾಂ ರಾಠೋಡ, ಮೈಸೂರು ರಾಠೋಡ, ಕಲ್ಲಪ್ಪ ಓಲೇಕಾರ, ಹಾಗೂ ಘಟಕದ ಕಾರ್ಮಿಕರು ಇದ್ದರು.