“ಮರಣ ಹೊಂದಿದ ಸರ್ಕಾರಿ ನೌಕರನ ಕುಟುಂಬಕ್ಕೆ ಆರ್ಥಿಕ ತೊಂದರೆ ಉಂಟಾಗದಂತೆ, ಕುಟುಂಬದ ಒಬ್ಬ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವುದು. ಈ ನಿಯಮವು ಮುಖ್ಯವಾಗಿ ಪತ್ನಿ, ಅವಿವಾಹಿತ ಮಕ್ಕಳು, ಮತ್ತು ಕೆಲವು ವಿಶೇಷ ಸಂದರ್ಭಗಳಲ್ಲಿ ಸಹೋದರರಿಗೂ ಕೊಡಬಹುದು. ಆದರೆ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅನುಕಂಪದ ಆಧಾರದ ಮೇಲೆ ನೀಡುವ ಗ್ರೂಪ್ ‘ಡಿ’ ಹುದ್ದೆಗೆ ಕರ್ನಾಟಕ ಸರಕಾರ ಮರಣ ಶಾಸನ ಬರೆದಿದೆ” ಎಂದು ದಲಿತ ಹೋರಾಟಗಾರ ಮುತ್ತು ಬಿಳಿಯಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗದಗ ಪಟ್ಟಣದಲ್ಲಿ ಪತ್ರಿಕಾ ಹೇಳಿಕೆ ನೀದಿದ ಅವರು, “ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಈ ಹಿಂದೆ ಕರ್ತವ್ಯದಲ್ಲಿ ನಿಧನವಾದರೇ ಅವರ ಕುಟುಂಬದ ಸದಸ್ಯರಿಗೆ ಅವರ ಶೈಕ್ಷಣಿಕ ಆಧಾರದಲ್ಲಿ ಸರ್ಕಾರ ಗ್ರೂಪ್ ಡಿ ಹಾಗೂ ಗ್ರೂಪ್ ಸಿ ಹುದ್ದೆಯನ್ನು ನೀಡುತ್ತಿತ್ತು. ಈಗ ಇದೇ ವರ್ಷ ಕಳೆದ ಜುಲೈ ತಿಂಗಳಲ್ಲಿ ಕರ್ನಾಟಕ ಸರ್ಕಾರ ಒಂದು ಆದೇಶ ಹೊರಡಿಸಿದೆ. ಇನ್ನು ಮುಂದೆ ಅನುಕಂಪದ ಆಧಾರದ ಮೇರೆಗೆ ನೀಡುವ ಗ್ರೂಪ್ ‘ಡಿ’ಹುದ್ದೆಗಳನ್ನು ನೀಡಬಾರದು ಹಾಗೂ ಅಂತಹ ಅರ್ಜಿಗಳನ್ನು ಸ್ವಿಕರಿಸಬಾರದು” ಎಂದು ನಾಲ್ಕು ಸಾರಿಗೆ ಸಂಸ್ಥೆಗಳಿಗೆ ಆದೇಶ ಹೊರಡಿಸಿದೆ” ಎಂದರು.
“ಸರ್ಕಾರ ಹೊರಡಿಸಿರುವ ಈ ಆದೇಶ ಗ್ರೂಪ್ ‘ಡಿ’ ಹುದ್ದೆಗಳಿಗೆ ಮಾತ್ರ. ಇನ್ನೂಳಿದ ವಿವಿಧ ವೃಂದದ ಹುದ್ದೆಗಳಿಗೆ ಇದು ಅನ್ವಯಿಸುವುದಿಲ್ಲಂತೆ” ಅಸಮಾಧಾನ ವ್ಯಕ್ತಪಡಿಸಿದರು.

“ಈ ಹಿಂದೆ ಈ ಆದೇಶ ಬರುವ ಮುಂಚೆ ಅಂದರೆ ಜುಲೈ 2025 ರ ಮುಂಚೆ ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿ ಕರ್ತವ್ಯದಲ್ಲಿ ನಿಧನರಾಗಿ ಅವರ ಕುಟುಂಬದವರು ಕಡಿಮೆ ವಿದ್ಯಾರ್ಹತೆಯಿಂದ ಗ್ರೂಪ್ ‘ಡಿ’ ಹುದ್ದೆಗಳಿಗೆ ಸುಮಾರು ನೂರಕ್ಕಿಂತ ಹೆಚ್ಚು ಜನ ಅರ್ಜಿಗಳನ್ನು ಸಲ್ಲಿಸಿ ನಮಗೆ ಅನುಕಂಪದ ಆಧಾರದ ಮೇಲೆ ಗ್ರೂಪ್ ‘ಡಿ’ ನೌಕರಿ ಸಿಗುತ್ತದೆ. ಮುಂದೆ ಮನೆಯ ಜವಾಬ್ದಾರಿಯನ್ನು ವಹಿಸಿಕೊಂಡು ಜೀವನ ಸಾಗಿಸುವ ಕನಸನ್ನ ಹೊಂದಿದ್ದರು” ಎಂದು ಹೇಳಿದರು.
“ಆದರೆ ಸರ್ಕಾರದ ಈ ಆದೇಶದಿಂದ ಅವರ ನೌಕರಿಯ ಕನಸು ಮುರಿದು ಬಿದ್ದಿದೆ. ಈ ಹಿಂದೆ ಅರ್ಜಿ ಸಲ್ಲಿಸಿದ ನೂರಾರು ಅವಲಂಬಿತರಿಗೆ ಈ ಆದೇಶ ಗೊತ್ತೆ ಇಲ್ಲ. ಸಂಸ್ಥೆಯು ಕೂಡ ಗ್ರೂಪ್ ‘ಡಿ’ ಹುದ್ದೆ ರದ್ದಾಗಿರುವ ಕುರಿತು ನೌಕರಿಗಾಗಿ ಅರ್ಜಿ ಸಲ್ಲಿಸಿದವರಿಗೆ ಯಾವುದೇ ಮಾಹಿತಿ ಕೊಟ್ಟಿಲ್ಲ” ಎಂದರು.
“ಸರ್ಕಾರದ ಈ ಆದೇಶದಿಂದ ಸಾರಿಗೆ ಸಂಸ್ಥೆಗಳಲ್ಲಿ ಕೆಲಸ ಮಾಡಿ ನಿಧನರಾದ ಕುಟುಂಬದವರು ಈಗ ಬೀದಿ ಪಾಲಾಗುತ್ತಾರೆ. ಸರ್ಕಾರ ಈ ಆದೇಶವನ್ನು ಮರು ಪರಿಶೀಲನೆ ಮಾಡಿ ಸರ್ಕಾರ ಹೊರಡಿಸಿರುವ ಈ ಆದೇಶವನ್ನು ರದ್ದುಮಾಡಬೇಕು. ಈ ಹಿಂದೆ ಇದ್ದ ಅನುಕಂಪದ ಆಧಾರದ ನೌಕರಿ ಆದೇಶವನ್ನು ಅನುಸರಿಸಿ ಸಂಸ್ಥೆಯಲ್ಲಿ ದುಡಿದು ನಿಧನ ಹೊಂದಿದ ನೌಕರನ ಕುಟುಂಬದವರಿಗೆ ನ್ಯಾಯ ಒದಗಿಸಿ ಕೊಡಬೇಬೇಕೆಂದು ಗದಗ ಜಿಲ್ಲೆಯ ದಲಿತ ಸಂಘಟನೆಗಳ ಒಕ್ಕೂಟದಿಂದ ಒತ್ತಾಯಿಸುತ್ತೇವೆ” ಎಂದು ಮುತ್ತು ಬಿಳಿಯಲಿ ಹೇಳಿದರು.