ಗದಗ ಜಿಲ್ಲೆಯ ಎಲ್ಲಾ ವಸತಿ ಶಾಲೆಗಳ ಚಿತ್ರಕಲಾ ಶಿಕ್ಷಕರಿಂದ ಉತ್ತಮ ಚಿತ್ರಕಲೆಗಳು ಮೂಡಿಬರಲಿ. ಈ ಚಿತ್ರಗಳು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಗೆ ಮೆರಗು ನೀಡುವಂತಾಗಲಿ ಎಂದು ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ ಆರ್ ಅಭಿಪ್ರಾಯಪಟ್ಟರು.
ಗದಗ ಸಮಾಜ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕದ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ನಗರದ ಡಾ. ಬಿ ಆರ್ ಅಂಬೇಡ್ಕರ್ ಸಭಾ ಭವನದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ವಿಷಯ ಕುರಿತು ಜಿಲ್ಲೆಯ ಎಲ್ಲಾ ವಸತಿ ಶಾಲೆಗಳ ಚಿತ್ರಕಲಾ ಶಿಕ್ಷಕರಿಂದ ಚಿತ್ರಕಲಾ ಶಿಬಿರ ಏರ್ಪಡಿಸಲಾಗಿತ್ತು. ಈ ಚಿತ್ರಕಲಾ ಶಿಬಿರದಲ್ಲಿ ಚಿತ್ರ ರಚನೆ ವೀಕ್ಷಿಸಿ ಶಿಕ್ಷಕರಿಗೆ ಶುಭ ಕೋರಿ ಅವರು ಮಾತನಾಡಿದರು.
ಚಿತ್ರಕಲಾ ಶಿಕ್ಷಕರು ತಮ್ಮದೇ ರೀತಿಯ ಶೈಲಿಯಲ್ಲಿ ಚಿತ್ರಗಳನ್ನು ಮನೋಜ್ಞವಾಗಿ ರಚಿಸುವ ಮೂಲಕ ಗಮನ ಸೆಳೆದರು. ನನ್ನ ಮತ ನನ್ನ ಹಕ್ಕು, ಭಾರತ ಸಂವಿಧಾನ, ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ, ನನ್ನ ಮತ ನನ್ನ ಭವಿಷ್ಯ ಹಾಗೂ ಅಂಬೇಡ್ಕರ್ ಸಂವಿಧಾನ ಕುರಿತ ವಿಷಯದ ಬಗ್ಗೆ ತಮ್ಮ ಕಲೆ ಮೂಲಕ ಬೆಳಕು ಚೆಲ್ಲಿದರು.
ಇದನ್ನೂ ಓದಿ: ಗದಗ | ಅರಣ್ಯ ಸಂರಕ್ಷಕರು ಹಸಿರಿನ ಹರಿಕಾರರು: ನ್ಯಾ.ಗಂಗಾಧರ ಎಂ ಸಿ
ಈ ವೇಳೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ನಂದಾ ಹಣಬರಟ್ಟಿ ಸೇರಿದಂತೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ ಜಿಲ್ಲೆಯ ಚಿತ್ರಕಲಾ ಶಿಕ್ಷಕರು, ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.