ಕ್ರಾಂತಿಯ ಕಿಡಿಯಾಗಿ, ಇಡೀ ಭಾರತ ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ಹೋರಾಟದ ಆದರ್ಶ ವ್ಯಕ್ತಿಯಾಗಿ ಭಗತ್ ಸಿಂಗ್ ಸ್ಪೂರ್ತಿಯಾಗುತ್ತಾರೆ. ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಜಿಸಿದರು. ಇಂದಿನ ಯುವ ಪೀಳಿಗೆ ಭಗತ್ ಸಿಂಗ್ ಅವರ ಆದರ್ಶಗಳನ್ನು ಮೈಗೋಡಿಸಿಕೊಳ್ಳಬೇಕು ಎಂದು ಎಸ್ಎಫ್ಐ ಗದಗ ಜಿಲ್ಲಾಧ್ಯಕ್ಷ ಚಂದ್ರು ರಾಠೋಡ ಹೇಳಿದರು.
ಗಜೇಂದ್ರಗಡ ನಗರದ ಅಲ್ಪಸಂಖ್ಯಾತರ ಬಾಲಕರ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿಕಾರಿ ಕಾಮ್ರೇಡ್ ಭಗತ್ ಸಿಂಗ್ ಅವರ 118 ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಭಾರತದ ಸ್ವಾತಂತ್ರ್ಯ ಚಳವಳಿಗೆ ಯುವ ಪಡೆಯನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಭಗತ್ ಸಿಂಗ್ ಇಂದಿನ ಅವ್ಯವಸ್ಥೆ, ಅನ್ಯಾಯದ ವಿರುದ್ಧವಾಗಿ ಸ್ಫೂರ್ತಿಯಾಗಬೇಕಿದೆ. ವಿದ್ಯಾರ್ಥಿ-ಯುವಜನರು ಆಲೋಚನೆ ಮಾಡಬೇಕಿದೆ. ಆದರೆ ಪ್ರಸ್ತುತ ದಿನಮಾನಗಳಲ್ಲಿ ಜಾತಿ ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ವಿಷಬೀಜ ಬಿತ್ತುವ ಕೆಲಸ ನಡೆಯುತ್ತಿದೆ. ಇದನ್ನು ವಿರೋಧಿಸುವ ನಿಟ್ಟಿನಲ್ಲಿ ನಾವುಗಳು ಕೆಲಸ ಮಾಡಬೇಕಾಗಿದೆ” ಎಂದು ಹೇಳಿದರು.
ನಂತರ ತಾಲೂಕಾಧ್ಯಕ್ಷ ಅನಿಲ್ ಆರ್ ಮಾತನಾಡಿ, “ಭಗತ್ ಸಿಂಗ್ ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಅಷ್ಟೆ ಅಲ್ಲದೆ ಭವಿಷ್ಯದಲ್ಲಿ ಭಾರತ ಹೇಗಿರಬೇಕೆಂದು ಕನಸು ಕಂಡವರು. ಜಾತಿ ತಾರತಮ್ಯ ನೀತಿಗಳು ಹೋಗಬೇಕು, ಧರ್ಮದ ಹೆಸರಲ್ಲಿ ಒಡೆದಾಳುವರು, ಸಾಮ್ರಾಜ್ಯ ಶಾಹಿಗಳನ್ನು ದೇಶ ಬಿಟ್ಟು ಓಡಿಸಬೇಕು ಎಂದು ಹೇಳುತ್ತಿದ್ದರು. ಅಸ್ಪೃಷ್ಯತೆ ಬಗ್ಗೆ ಭಗತ್ ಸಿಂಗ್ ತನ್ನ 16ನೇ ವಯಸ್ಸಿನಲ್ಲಿಯೇ ಲೇಖನವನ್ನು ಬರೆದಿದ್ದರು. ಭಗತ್ ಸಿಂಗ್ ಬಯಸಿದ್ದ ಭಾರತ ನಿರ್ಮಾಣ ನಮ್ಮೆಲ್ಲರ ಹೊಣೆ” ಎಂದರು.
ಇದನ್ನೂ ಓದಿ: ಗದಗ | ಧಾರ್ಮಿಕ ಸಾಮರಸ್ಯದ ಬದುಕಿಗೆ ಗದಗ ಜಿಲ್ಲೆಯ ಕೊಡುಗೆ ಅಪಾರ: ಪ್ರೊ ಎಸ್. ಯು. ಸಜ್ಜನಶೆಟ್ಟರ್
ಕಾರ್ಯಕ್ರಮದಲ್ಲಿ ಎಸ್ ಎಫ್ ಐ ಮುಖಂಡರಾದ ಅಭಿಲಾಷ್ ರಾಠೋಡ, ಗುರುಕಿರಣ್, ರಾಹುಲ್ ಯಮನೂರ ಸಾಬ್, ಪ್ರಶಾಂತ್, ದರ್ಶನ್, ಭೀಮೇಶ್, ಮುತ್ತುರಾಜ, ಆಕಾಶ, ಸಾಧಿಕ್, ರಾಕೇಶ್, ಮೈಲಾರಿ ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.